ಬಳ್ಳಾರಿ: ಅವ್ಯವಸ್ಥೆಗಳ ಆಗರ ನಗರದ ಕ್ರೀಡಾ ವಸತಿ ನಿಲಯ ಸರಿಪಡಿಸಲು ಆಗ್ರಹಿಸಿ ಕರ್ನಾಟಕ ಜನಸೈನ್ಯದ ಪದಾಧಿಕಾರಿಗಳು, ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ನಗರದ ಜಿಲ್ಲಾ ಪಂಚಾಯತ್‌ನ ಕ್ರೀಡಾ ವಸತಿ ನಿಲಯದಲ್ಲಿ ಪೌಷ್ಟಿಕ ಆಹಾರದಲ್ಲಿ ತಾರತಮ್ಯ, ಶೌಚಾಲಯಗಳ ಅವ್ಯವಸ್ಥೆ, ಅಡುಗೆ ಕೋಣೆಯಲ್ಲಿ ಮದ್ಯಪಾನದ ಬಾಟಲಿಗಳು ದೊರೆತಿರುವುದು, ಕ್ರೀಡಾ ಮಕ್ಕಳ ಮೇಲೆ ಅಧಿ ಕಾರಿಗಳ ನಿರ್ಲಕ್ಷ್ಯಗಳನ್ನು ಕರ್ನಾಟಕ ಜನ ಸೈನ್ಯ ಜಿಲ್ಲಾ ಘಟಕ ಖಂಡಿಸಿದೆ.
ಈ ಸಂದರ್ಭ ಮಾತನಾಡಿದ ಸೈನ್ಯದ ಸಂಸ್ಥಾಪಕ ರಾಜ್ಯಾಧ್ಯಕ್ಷ ಕೆ.ಎರ್ರಿಸ್ವಾಮಿ, ಜು.13ರಂದು ಕರ್ನಾಟಕ ಜನಸೈನ್ಯ ತಂಡವು ಬಳ್ಳಾರಿ ಜಿಲ್ಲಾ ಕ್ರೀಡಾ ವಸತಿ ನಿಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪೌಷ್ಟಿಕ ಆಹಾರ ವಿತರಣೆಯಲ್ಲಿ ತಾರತಮ್ಯ ಕಂಡುಬಂದಿದೆ. ಕ್ರೀಡಾ ವಸತಿ ನಿಲಯದ ಶೌಚಾಲಯಗಳು ಅವ್ಯವಸ್ಥೆಯಿಂದ ಕೂಡಿದ್ದು, ಇಲ್ಲಿನ ಮಕ್ಕಳಿಗೆ ರೋಗ-ರುಜಿನಗಳು ಅಂಟುವ ಭೀತಿಯಿದೆ.
ಅಡುಗೆ ಕೋಣೆಯಲ್ಲಿ ಮದ್ಯದ ಬಾಟಲಿಗಳು ಕಂಡುಬಂದಿದ್ದು, ಇದು ಬಾರ್ ಅಥವಾ ಕ್ರೀಡಾ ಹಾಸ್ಟೆಲ್ ಎನ್ನುವ ಸಂಶಯ
ಎದುರಾಗುತ್ತದೆ. ಇಲ್ಲಿ ಮದ್ಯಪಾನ ಮಾಡುವವರನ್ನು ಪತ್ತೆ ಹಚ್ಚಿ ಅಮಾನತು ಮಾಡಿ ಶಿಕ್ಷಿಸಬೇಕು ಎಂದು ಆಗ್ರಹಿಸಿದರು.
ಕ್ರೀಡಾ ವಸತಿ ನಿಲಯಕ್ಕೆ ಹೋದಾಗ ಅಲ್ಲಿ ಜಾಕೀರ್ ಎಂಬಾತ ನಾನೇ ವಾರ್ಡನ್ ಎಂದು ಹೇಳುತ್ತಾರೆ. ಅಲ್ಲಿನ ಅವ್ಯವಸ್ಥೆಗಳ ಬಗ್ಗೆ ಕೇಳಿದಾಗ ನಾನು ವಾರ್ಡನ್ ಅಲ್ಲ. ಹಾಕಿ ಕೋಚ್ ಎಂದು ಉತ್ತರಿಸುತ್ತಾನೆ. ಈ ಜಾಕೀರ್ ಯಾರು? ಈ ವಸತಿ ನಿಲಯಕ್ಕೆ ಜಾಕೀರ್‌ಗೂ ಸಂಬಂಧವೇನು? ಎನ್ನುವುದನ್ನು ಪತ್ತೆ ಮಾಡಬೇಕಿದೆ. ಎಲ್ಲ ಅವ್ಯವಸ್ಥೆಗಳ ಬಗ್ಗೆ ಜಿಲ್ಲಾಡಳಿತ 15 ದಿನಗಳ ಒಳಗಡೆ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದೇ ಹೋದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಸೈನ್ಯದ ಬಳ್ಳಾರಿ ಜಿಲ್ಲಾಧ್ಯಕ್ಷ ಹಾಗೂರಾಜ್ಯ ಸಂಚಾಲಕ ಬಿ.ನಾರಾಯಣಸ್ವಾಮಿ ಅನೇಕರು ಇದ್ದರು.