Advertisement

ಪಾಲಿಕೆ ಎದುರು ಹಸುಗಳನ್ನು ಕಟ್ಟಿ ಪ್ರತಿಭಟನೆ

10:11 PM May 15, 2019 | Lakshmi GovindaRaj |

ಮೈಸೂರು: ಸಾರ್ವಜನಿಕ ಸಮಸ್ಯೆಗಳನ್ನು ಮೈಸೂರು ಮಹಾನಗರ ಪಾಲಿಕೆ ಪರಿಹರಿಸಿಲ್ಲ ಎಂದು ಆರೋಪಿಸಿ ಪಾಲಿಕೆ ಎದುರು ಶಾಸಕ ಎಸ್‌.ಎ. ರಾಮದಾಸ್‌ ನೇತೃತ್ವದಲ್ಲಿ ಸಾಮೂಹಿಕ ಪತ್ರಿಭಟನೆ ನಡೆಯಿತು. ಮೈಸೂರು ನಗರದಲ್ಲಿ ಸಾರ್ವಜನಿಕರ ನೀರಿನ ಸಮಸ್ಯೆ, ಉದ್ಯಾನ ಸಮಸ್ಯೆ ಸೇರಿದಂತೆ ಹತ್ತು ಹಲವು ಸಮಸ್ಯೆಗಳನ್ನು ಬಗೆಹರಿಸಿಲ್ಲ.

Advertisement

ಜೊತೆಗೆ ಸುಯೇಜ್‌ ಫಾರಂ ಸಮಸ್ಯೆ ಬಗೆಹರಿಸಿಲ್ಲವೆಂದು ಗೋವುಗಳನ್ನು ತಂದು ಪಾಲಿಕೆ ಎದುರು ಕಟ್ಟುವ ಮೂಲಕ ಶಾಸಕರ ನೇತೃತ್ವದಲ್ಲಿ ಸ್ಥಳೀಯರು ಪ್ರತಿಭಟನೆ ನಡೆಸಿದರು. ಇದೇ ವೇಳೆ ಮೈಸೂರು ಪಾಲಿಕೆ ಆಯುಕ್ತೆ ಶಿಲ್ವನಾಗ್‌ ಹಾಗೂ ಅಧಿಕಾರಿಗಳ ವಿರುದ್ಧ ವಿವಿಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಹೋರಾಟ ನಿಲ್ಲಲ್ಲ: ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಶಾಸಕ ಎಸ್‌.ಎ ರಾಮದಾಸ್‌, ಸಾರ್ವಜನಿಕರ ಸಮಸ್ಯೆಗಳು ಬಗೆಹರಿಯುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ. ನಾವು ಹಲವು ಬಾರಿ ಸಾರ್ವಜನಿಕರ ಸಮಸ್ಯೆ ಬಗೆಹರಿಸುವಂತೆ ಮಹಾನಗರ ಪಾಲಿಕೆಗೆ ಮನವಿ ಮಾಡಿ ಪತ್ರ ಬರೆದಿದ್ದೇವೆ. ಈ ಬಗ್ಗೆ ಎರಡು ಸಭೆಗಳನ್ನೂ ಮಾಡಲಾಗಿದೆ. ಆದರೆ, ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ವಿಫ‌ಲವಾಗಿದ್ದಾರೆ ಎಂದು ಆರೋಪಿಸಿದರು.

ಹೈಕೋರ್ಟ್‌ ಮೊರೆ: ನಗರದಲ್ಲಿರುವ ಖಾಲಿ ನಿವೇಶನಗಳ ಸ್ವತ್ಛತೆ, ಸುಯೇಜ್‌ ಫಾರಂ ಕಸದ ಸಮಸ್ಯೆ, ಕಂದಾಯ ಕಟ್ಟಲು ಆನ್‌ಲೈನ್‌ ವ್ಯವಸ್ಥೆ ಇತರೆ ಸಮಸ್ಯೆಗಳನ್ನು ಬಗೆಹರಿಸುವಂತೆ ಎರಡು ವರ್ಷಗಳಿಂದ ಕೇಳುತ್ತಿದ್ದೇನೆ. ಆದರೆ, ಅಧಿಕಾರಿಗಳು ಇದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ.

ಕೂಡಲೇ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಬೇಕು. ಇಲ್ಲವಾದಲ್ಲಿ ಅಧಿಕಾರಿಗಳ ವಿರುದ್ಧ ಉತ್ಛನ್ಯಾಯಾಲಯದಲ್ಲಿ ದಾವೆ ಹೂಡುತ್ತೇನೆ. ಸಾರ್ವಜನಿಕರ ಸಮಸ್ಯೆ ಬಗೆಹರಿಸುವರೆಗೂ ನಮ್ಮ ಧರಣಿ ಮುಂದುವರಿಯುತ್ತದೆ ಎಂದು ಎಚ್ಚರಿಕೆ ನೀಡಿದರು.

Advertisement

ತ್ಯಾಜ್ಯದ ರಾಶಿ: ಪಾಲಿಕೆ ಸಭೆಗಳಿಗೆ ಶಾಸಕರು ಹಾಜರಾಗಿಲ್ಲ ಎಂಬ ಮೇಯರ್‌ ಆರೋಪಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಶಾಸಕ ಎಸ್‌.ಎ. ರಾಮದಾಸ್‌, ಈವರೆಗೆ ಎಷ್ಟು ಸಭೆಗಳನ್ನು ನಡೆಸಲಾಗಿದೆ ಎಂದು ಖಾರವಾಗಿ ಪ್ರಶ್ನಿಸಿದರು. ಸಮಸ್ಯೆ ಬಗೆಹರಿಸುವಂತೆ ಪಾಲಿಕೆ ಅಧಿಕಾರಿಗಳಿಗೆ ನಾಲ್ಕು ಬಾರಿ ಪತ್ರ ಬರೆದಿದ್ದೇವೆ, ಎರಡು ಬಾರಿ ಸಭೆ ನಡೆಸಲಾಗಿದೆ.

ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಸುಯೇಜ್‌ ಫಾರಂ ನಿರ್ವಹಣೆಗೆ ಸರಕಾರ ಒಂದೂವರೆ ಕೋಟಿ ರೂ. ನೀಡಿದೆ. ಆದರೆ ಸುಯೇಜ್‌ ಫಾರಂನಲ್ಲಿ ಏಳುವರೆ ಲಕ್ಷ ಟನ್‌ ತ್ಯಾಜ್ಯದ ರಾಶಿ ಹಾಗೆಯೇ ಉಳಿದಿದೆ ಎಂದು ತರಾಟೆಗೆ ತೆಗೆದುಕೊಂಡರು.

ಹಣ ವಸೂಲಿ: ಸುಯೇಜ್‌ ಫಾರಂ ಕಳ್ಳರ ಜಾಗವಾಗಿ ಮಾರ್ಪಟ್ಟಿದ್ದು, ಆ ಸ್ಥಳದಲ್ಲಿ ನಗರದ ಗೋವುಗಳಿಗೆ ಮೇವು ಬೆಳೆಯಲು ಮಹಾರಾಜರು ಪಾಲಿಕೆ ನೀಡಿದ ಜಾಗ. ಆದರೆ ಅನಧಿಕೃತವಾಗಿ ಬೇಲಿ ಮುರಿದು ಹಸುಗಳನ್ನು ಬಿಟ್ಟು ಮೇವು ಮೇಯಿಸಲಾಗುತ್ತಿದೆ.

ಜೊತೆಗೆ ಅವರಿಂದ ಕಾನೂನು ಬಾಹಿರವಾಗಿ ಹಣ ಸಂಗ್ರಹಿಸುವ ಕೆಲಸ ನಡೆಯುತ್ತಿದೆ ಈ ಬಗ್ಗೆ ಕೂಡಲೆ ಕ್ರಮವಹಿಸಬೇಕು ಎಂದು ಮನವಿ ಮಾಡಿದರು. ಪ್ರತಿಭಟನೆಯಲ್ಲಿ ಶಾಸಕ ಎಲ್‌. ನಾಗೇಂದ್ರ, ನಗರಪಾಲಿಕೆ ಬಿಜೆಪಿ ಸದಸ್ಯರು, ನಾನಾ ಸಂಘ ಸಂಸ್ಥೆಗಳ ಮುಖಂಡರು ಪಾಲ್ಗೊಂಡಿದ್ದರು.

ಪಾಲಿಕೆ ಸಭೆಗಳಿಗೆ ಶಾಸಕರೇ ಬರಲ್ಲ: ಪ್ರತಿಭಟನಾ ಸ್ಥಳಕ್ಕೆ ಬಂದ ಮೇಯರ್‌ ಪುಷ್ಪಲತಾ ಜಗನ್ನಾಥ್‌, ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ, ಸಾರ್ವಜನಿಕ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಪಾಲಿಕೆ ಸಿದ್ಧವಿದೆ. ಇದಕ್ಕೆ ಸ್ಥಳೀಯ ಮಟ್ಟದ ಶಾಸಕರ ಬೆಂಬಲವೂ ಅಗತ್ಯ. ಆದರೆ, ಈವರೆಗೆ ನಡೆದ ಪಾಲಿಕೆ ಸಭೆಗಳಿಗೆ ಶಾಸಕರು ಬಂದಿಲ್ಲ.

ಜತೆಗೆ ವಿಧಾನಸಭೆ ಅಧಿವೇಶನಗಳಲ್ಲಿ ಇಲ್ಲಿನ ಸಮಸ್ಯೆ ಬಗ್ಗೆ ಧ್ವನಿ ಎತ್ತಬೇಕು. ಎಲ್ಲರೂ ಒಟ್ಟಾಗಿ ಸೇರಿದರೆ ಮಾತ್ರ ಸಮಸ್ಯೆ ಬಗೆಹರಿಯಲಿದೆ. ಪ್ರತಿಭಟನೆ ನಡೆಸಿದರೆ ಸಮಸ್ಯೆ ಬಗೆಹರಿಯುವುದಿಲ್ಲ. ಸಮಸ್ಯೆಗಳ ಬಗ್ಗೆ ಮನವಿ ಸ್ವೀಕರಿಸಿದ್ದು, ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತನಾಡಿ, ಸಮಸ್ಯೆ ಬಗೆಹರಿಸಲು ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next