Advertisement

ಪ್ರತಿಭಟನಾ ಸಮಾವೇಶ ಶಾಂತಿಯುತ

12:32 AM Dec 24, 2019 | Lakshmi GovindaRaj |

ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ಎನ್‌ಆರ್‌ಸಿ ವಿರೋಧಿಸಿ ವಿವಿಧ ಮುಸ್ಲಿಂ ಸಂಘ ಟನೆಗಳು ಹಾಗೂ ಪ್ರಗತಿಪರ ಚಿಂತಕರು ಸೋಮವಾರ ಬೃಹತ್‌ ಪ್ರತಿಭಟನಾ ಸಮಾವೇಶ ನಡೆಸಿದರು. ನಗರದ ಮಿಲ್ಲರ್ಸ್‌ ರಸ್ತೆಯ ಖುದ್ದೂಸ್‌ ಸಾಬ್‌ ಈದ್ಗಾ ಮೈದಾನ (ಖಾದ್ರಿಯಾ ಮಸೀದಿ-ಹಜ್‌ಕ್ಯಾಂಪ್‌)ದಲ್ಲಿ ಆಯೋಜಿಸಿದ್ದ ಬೃಹತ್‌ ಪ್ರತಿಭಟನಾ ಸಮಾವೇಶದಲ್ಲಿ ಲಕ್ಷಾಂತರ ಮಂದಿ ಪಾಲ್ಗೊಂಡು ಕೇಂದ್ರ ಸರ್ಕಾರದ ಕಾಯ್ದೆಗೆ ವಿರೋಧ ವ್ಯಕ್ತಪಡಿಸಿದರು.

Advertisement

ಎಲ್ಲ ಧರ್ಮಿಯರು ಸೌಹಾರ್ದತೆಯಂದ ಬದುಕುತ್ತಿರುವ ಈ ದೇಶದಲ್ಲಿ ಕೇಂದ್ರ ಸರ್ಕಾರ ಅಸಂಬದ್ಧ ಕಾಯ್ದೆಗಳನ್ನು ಜಾರಿಗೆ ತರುವ ಮೂಲಕ ಒಡೆದು ಆಳುವ ನೀತಿ ಪಾಲಿಸುತ್ತಿದೆ. ಈ ಕುರಿತು ಎಲ್ಲ ಸಮುದಾಯದವರು ಒಗ್ಗಟ್ಟಿನಿಂದ ಹೋರಾಟ ನಡೆಸಬೇಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೂ ಮೊದಲು ನಗರದ ಮಿಲ್ಲರ್ಸ್‌ ರಸ್ತೆ, ಕಂಟೋನ್ಮೆಂಟ್‌ ರಸ್ತೆ, ಜಯಮಹಲ್‌ ಸೇರಿ ಪ್ರಮುಖ ರಸ್ತೆಗಳಲ್ಲಿ ಬೈಕ್‌ ರ್ಯಾಲಿ ನಡೆಸಿದ ಪ್ರತಿಭಟನಾಕಾರರು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಅಲ್ಲದೆ, ಎಲ್ಲ ಮುಖಂಡರು, ಕೆಲ ಜನಪ್ರತಿನಿಧಿಗಳು ತೋಳಿಗೆ ಕಪ್ಪು ಪಟ್ಟಿ ಧರಿಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದದರು.

ಸಮಾವೇಶ ಉದ್ದೇಶಿಸಿ ಮಾತನಾಡಿದ ಸುಪ್ರೀಂ ಕೋರ್ಟ್‌ನ ವಿಶ್ರಾಂತ ನ್ಯಾಯಮೂರ್ತಿಗಳಾದ ವಿ.ಗೋಪಾಲಗೌಡ, ಮುಸ್ಲಿಮರಿಗೆ ದೇಶ ಹಾಗೂ ಸಂವಿಧಾನದ ಮೇಲೆ ಬದ್ಧತೆ ಹಾಗೂ ಗೌರವ ಇದೆ. ಸಿಎಎ ಮತ್ತು ಎನ್‌ಆರ್‌ಸಿ ತಿದ್ದುಪಡಿ ನಂತರ ಪಶ್ಚಿಮ ಬಂಗಾಳ, ಅಸ್ಸಾಂ, ದೆಹಲಿ, ಆಂಧ್ರಪ್ರದೇಶ ಸೇರಿ ದೇಶದ ವಿವಿಧೆಡೆ ಕಾಯ್ದೆ ವಿರೋಧಿಸಿ ವಿದ್ಯಾರ್ಥಿಗಳು “ಈ ಕಾಯ್ದೆ ಸಂವಿಧಾನ ಬದ್ಧವಾಗಿಲ್ಲ’ ಎಂದು ಹೋರಾಟ ನಡೆಸುತ್ತಿದ್ದಾರೆ ಎಂದರು.

ಇಸ್ಲಾಂ ಜನರಿಗಾಗಿ ಎನ್‌ಆರ್‌ಸಿ/ಸಿಎಎ ವಿರೋಧಿಸುತ್ತಿಲ್ಲ. ದೇಶದ ರಕ್ಷಣೆ, ಅಭಿವೃದ್ಧಿ ಹಾಗೂ ಸರ್ವಜನರ ಏಳಿಗೆಗಾಗಿ ವಿರೋಧಿಸುತ್ತಿದ್ದೇವೆ. ಜಾತ್ಯಾತೀತ ಎಂಬುದು ಸಂವಿಧಾನದ ಮೂಲಭೂತ ತತ್ವ ಈಗಲೂ ಊರ್ಜಿತವಾಗಿದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸಂವಿಧಾನ ಪ್ರಸ್ತಾವನೆ ಮುಖ್ಯವಾದ ಅಂಶವಾಗಿದೆ. ಸಂವಿಧಾನದಲ್ಲಿರುವ ಮಾನವ ಹಕ್ಕುಗಳಿಗೆ ಈ ಕಾಯ್ದೆ ವಿರೋಧವಾಗಿದೆ. ದೇಶದ ಪ್ರತಿಯೊಬ್ಬರ ಬಳಿ 26 ದಾಖಲೆಗಳಿರಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಸ್ಟಾಂಡ್‌ ಅಪ್‌ ಕಾಮಿಡಿ: ಮಾಜಿ ಐಎಎಸ್‌ ಅಧಿಕಾರಿ ಸಸಿಕುಮಾರ್‌ ಸೆಂಥಿಲ್‌ ಮಾತನಾಡಿ, ಎನ್‌ಆರ್‌ಸಿ ಕಾಯ್ದೆ ಜಾರಿಯ ಆರಂಭದಲ್ಲಿ ದೇಶದಲ್ಲಿ ಅಕ್ರಮ ನಿವಾಸಿಗಳು 50 ಲಕ್ಷ ಮಂದಿ ಇದ್ದಾರೆ ಎಂದರು. ನಂತರ 19 ಲಕ್ಷ ಅಂದರು. ಅನಂತರ ಈ ಪೈಕಿ ಹಿಂದೂಗಳೇ ಹೆಚ್ಚಾಗಿದ್ದಾರೆ ಎಂಬುದು ಮನವರಿಕೆಯಾಗುತ್ತಿದ್ದಂತೆ ಎನ್‌ಆರ್‌ಸಿ ಜಾರಿ ಮಾಡುವುದಿಲ್ಲ ಎಂದು ಹೇಳುತ್ತಿದ್ದಾರೆ.

Advertisement

ಕೇಂದ್ರ ಸರ್ಕಾರ ದೇಶದ ಜನರ ಜತೆ “ಸ್ಟಾಂಡ್‌ ಅಪ್‌ ಕಾಮಿಡಿ’ ಮಾಡುತ್ತಿದೆ ಎಂದು ಲೇವಡಿ ಮಾಡಿದರು. ಕಾಯ್ದೆ ಜಾರಿಗೆ ಸಾವಿರಾರು ಕೋಟಿ ರೂ. ಅಗತ್ಯ ವಿದೆ. ಅಷ್ಟೊಂದು ಹಣ ಯಾವ ರಾಜ್ಯದಲ್ಲಿದೆ. ಅಲ್ಲದೆ ದಾಖಲೆಗಳಿಗಾಗಿ ಸಾರ್ವಜನಿಕರು ಎಷ್ಟು ವರ್ಷ ಕಚೇರಿ ಗಳ ಬಳಿ ಸರದಿ ನಿಲ್ಲಬೇಕು, ತಮ್ಮ ಅಜ್ಜಿ-ತಾತನ ದಾಖ ಲೆಗಳನ್ನು ಎಲ್ಲಿಂದ ತರಬೇಕು ಎಂದು ಪ್ರಶ್ನಿಸಿದರಲ್ಲದೆ, ಈ ಬಗ್ಗೆ ಎಲ್ಲರೂ ಒಂದಾಗಬೇಕು ಎಂದು ಹೇಳಿದರು.

ನಿವೃತ್ತ ಐಎಎಸ್‌ ಅಧಿಕಾರಿ ಹರ್ಷ ಮಂದರ್‌ ಮಾತನಾಡಿ, ಮುಸ್ಲಿಮರು ಅಖಂಡ ಹಿಂದೂಸ್ತಾನ ದಲ್ಲಿಯೇ ಉಳಿಯಬೇಕೆಂದು ರಾಷ್ಟ್ರಪಿತ ಮಹಾತ್ಮ ಗಾಂಧಿ ಬಯಸಿದ್ದರು. ಅಷ್ಟೇ ಅಲ್ಲದೆ, ಇದಕ್ಕಾಗಿಯೇ ತಮ್ಮ ಪ್ರಾಣ ತ್ಯಾಗ ಮಾಡಿದರು. ಆದರೆ, ಮೊಹಮ್ಮದ್‌ ಅಲಿ ಜಿನ್ನಾ ಎರಡು ದೇಶಗಳ ಬಗ್ಗೆ ಆಸೆ ಹೊಂದಿದ್ದ. ಇದೀಗ ಬಿಜೆಪಿಯೂ ಜಿನ್ನಾ ರೀತಿಯೇ ವರ್ತನೆ ಮಾಡುತ್ತಿದ್ದು, ಮುಸ್ಲಿಮರು ದೇಶ ಬಿಟ್ಟು ಹೋಗಲಿ ಎನ್ನುವ ಮನಸ್ಥಿತಿ ಹೊಂದಿದ್ದಾರೆ.

ಹಾಗಾಗಿ, ಅವರ ಪಕ್ಷಕ್ಕೆ “ಭಾರತೀಯ ಜಿನ್ನಾ ಪಾರ್ಟಿ’ ಎಂದು ಹೆಸರಡಬೇಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜಮಾತೆ ಅಹೆ ಸುನ್ನತ್‌ ಕರ್ನಾಟಕ ಅಧ್ಯಕ್ಷ ಮೌಲಾನ ಸಯ್ಯದ್‌ ತನ್ವೀರ್‌ ಹಾಶ್ಮಿ, ದೇಶದ ಸಂವಿಧಾನ ಉಳಿಸುವ ಹೋರಾಟದಲ್ಲಿ ಮುಸ್ಲಿಮರು ಭಾಗಿಯಾಗ ಲಿದ್ದು, ಪ್ರಾಣ ತ್ಯಾಗಕ್ಕೂ ಸಿದ್ಧರಾಗಿದ್ದೇವೆ. ಡಾ.ಬಿ.ಆರ್‌.ಅಂಬೇಡ್ಕರ್‌ ರಚಿಸಿದ ಸಂವಿಧಾನದಲ್ಲಿ ಎಲ್ಲರಿಗೂ ಸಮಾನತೆ ಹಕ್ಕು ನೀಡಲಾಗಿದೆ. ಎಲ್ಲಿಯೂ ಧರ್ಮದ ಮೇಲಿನ ಅಂಶಗಳಿಲ್ಲ.

ಆದರೆ, ಕೇಂದ್ರ ಸರ್ಕಾರ ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡಲು ಮುಂದಾಗಿದೆ. ಇದರಿಂದ ಸಂವಿಧಾನಕ್ಕೆ ಧಕ್ಕೆಯಾಗಿದ್ದು, ಇದನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ನಾವು ಹೋರಾಟ ನಡೆಸಲಿ ದ್ದೇವೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಅಖೀಲ ಕರ್ನಾಟಕ ಮುಸ್ಲಿಂ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷರು, ಸದಸ್ಯರು ಹಾಗೂ ಪಾಲಿಕೆ ಸದಸ್ಯ ಇಮ್ರಾನ್‌ ಪಾಷ, ಧರ್ಮ ಗುರುಗಳು, ಮಹಿಳಾ ಮುಖಂಡರು ಇದ್ದರು.

ಬಿಗಿ ಬಂದೋಬಸ್ತ್, ಸಂಚಾರ ದಟ್ಟಣೆ
ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮುಸ್ಲಿಂ ಸಂಘಟನೆಗಳು ಹಮ್ಮಿಕೊಂಡಿದ್ದ ಬೃಹತ್‌ ಪ್ರತಿಭಟನಾ ಸಮಾವೇಶ ಕೆಲವೊಂದು ಸ್ವಾರಸ್ಯಕರ ಪ್ರಸಂಗಗಳಿಗೂ ಸಾಕ್ಷಿಯಾಯಿತು. “ರಾಷ್ಟ್ರ ಶಾಂತಿ ಹಾಗೂ ಕೋಮುಸೌಹಾರ್ದತೆ’ ಹೆಸರಿನ ಸಮಾವೇಶದಲ್ಲಿ ಒಂದು ಲಕ್ಷಕ್ಕೂ ಅಧಿಕ ಮಂದಿ ಸೇರಲಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಖುದ್ದೂಸ್‌ಸಾಬ್‌ ಈದ್ಗಾ ಮೈದಾನ ಸುತ್ತ ಬಿಗಿ ಪೊಲೀಸ್‌ ಭದ್ರತೆ ನಿಯೋಜಿಸಲಾಗಿತ್ತು.

ನಗರ ಮಾತ್ರವಲ್ಲದೆ, ಹೊರವಲಯ ಪ್ರದೇಶಗಳಿಂದಲೂ ಲಕ್ಷಾಂತರ ಮಂದಿ ಆಗಮಿಸಿ ಕನ್ನಿಂಗ್‌ ಹ್ಯಾಮ್‌ ರಸ್ತೆ, ವಸಂತನಗರ ರಸ್ತೆ, ಕಂಟೋನ್ಮೆಂಟ್‌ ರಸ್ತೆ, ಮೇಖೀ ವೃತ್ತ, ಆರ್‌.ಟಿ.ನಗರ ಸೇರಿ ಸುತ್ತಮುತ್ತಲ ರಸ್ತೆಗಳು ಹಾಗೂ ಖುದ್ದೂಸ್‌ ಈದ್ಗಾ ಮೈದಾನ ರಸ್ತೆಗಳಲ್ಲಿ ಬೈಕ್‌ ರ್ಯಾಲಿ ನಡೆಸಿದರು.

ಬಿಗಿ ಪೊಲೀಸ್‌ ಭದ್ರತೆ: ಇಬ್ಬರು ಹೆಚ್ಚುವರಿ ಪೊಲೀಸ್‌ ಆಯುಕ್ತರ ನೇತೃತ್ವದಲ್ಲಿ 10ಕ್ಕೂ ಹೆಚ್ಚು ಡಿಸಿಪಿ, 53 ಕೆಎಸ್‌ಆರ್‌ಪಿ, 60 ಸಿಎಆರ್‌ ತುಕಡಿ, ಎರಡು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್), 40 ಮಂದಿ ಎಸಿಪಿ, ಸಿಸಿಬಿ, ಸುಮಾರು 80 ಇನ್‌ಸ್ಪೆಕ್ಟರ್‌, 100 ಮಂದಿ ಪಿಎಸ್‌ಐ, ಮಹಿಳಾ ಸಿಬ್ಬಂದಿ ಸೇರಿ ಐದು ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಗರದೆಲ್ಲೆಡೆ ಭದ್ರತೆಗೆ ಹಾಕಲಾಗಿತ್ತು.

ಮೆರವಣಿಗೆಯ ಪ್ರತಿ ರಸ್ತೆಯಲ್ಲೂ ಹೆಚ್ಚುವರಿಯಾಗಿ ಸಾವಿರ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿತ್ತು. ಸಿಐಎಸ್‌ಎಫ್ನ ಒಂದು ತುಕಡಿ ಮಸೀದಿಯ ಒಳಾಂಗಣದಲ್ಲಿ ನಿಯೋಜಿಸಿದ್ದರೆ, ಮತ್ತೂಂದು ತುಕಡಿ ಮಸೀದಿ ಮುಂಭಾಗದ ರಸ್ತೆಯಲ್ಲಿ ಸ್ಥಳೀಯ ಪೊಲೀಸರ ಜತೆ ಪ್ರತಿ 50-100 ಮೀಟರ್‌ನಲ್ಲಿ ಶಸ್ತ್ರಾಸ್ತ್ರ ಹೊಂದಿಗೆ ಕಾರ್ಯನಿರ್ವಹಿಸಿದರು.

ಭಾರೀ ಸಂಚಾರ ದಟ್ಟಣೆ: ಸಮಾವೇಶದಲ್ಲಿ ಸೇರಿದ್ದ ಲಕ್ಷಾಂತರ ಜನ ಸಂಜೆ 4 ಗಂಟೆಗೆ ಸಭೆ ಮುಗಿಸಿ ಮನೆಗೆ ಮರಳಿದರು. ಈ ವೇಳೆ ಪುಲಿಕೇಶಿನಗರ, ದಂಡು ರೈಲು ನಿಲ್ದಾಣ, ಶಿವಾಜಿನಗರ, ಮೇಖೀವೃತ್ತ, ಇಂದಿರಾನಗರ, ಜೆ.ಬಿ.ನಗರ, ಸುಲ್ತಾನ್‌ ಪಾಳ್ಯ ರಸ್ತೆ, ವಿಧಾನಸೌಧ, ಶಿವಾನಂದ ವೃತ್ತ, ಮಲ್ಲೇಶ್ವರ, ಇನ್‌ಫೆಂಟ್ರಿ ರಸ್ತೆ, ಕ್ವೀನ್ಸ್‌ ರಸ್ತೆ, ಚಾಲಕ್ಯ ವೃತ್ತ, ಹೆಬ್ಬಾಳ ರಸ್ತೆ ಹಾಗೂ ಮಿಲ್ಲರ್ ರಸ್ತೆ ಸುತ್ತಮುತ್ತ ಭಾರೀ ಸಂಚಾರ ದಟ್ಟಣೆ ಉಂಟಾಗಿತ್ತು. ಕಚೇರಿ, ಶಾಲೆ ಮುಗಿಸಿಕೊಂಡು ಹೋಗುತ್ತಿದ್ದ ಜನ, ವಿದ್ಯಾರ್ಥಿಗಳು ಸಂಚಾರ ದಟ್ಟಣೆಯಲ್ಲಿ ಸಿಲುಕಿ ಹೈರಾಣಾದರು. ಕೆಲ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಡಿದ್ದು ಕೂಡ ದಟ್ಟಣೆಗೆ ಕಾರಣವಾಗಿತ್ತು.

ಪೊಲೀಸರಿಗೆ ಅಭಿನಂದನೆ: ಪ್ರತಿಭಟನಾಕಾರರಿಗೆ ತೊಂದರೆಯಾಗದಂತೆ ಹಾಗೂ ಈದ್ಗಾ ಮೈದಾನದಲ್ಲಿನ ಸಭೆಗೆ ಅಡಚಣೆಯಾಗದಂತೆ ಕರ್ತವ್ಯ ನಿರ್ವಹಿಸಿದ ಪೊಲೀಸರಿಗೆ, ಕಾರ್ಯಕ್ರಮ ಆಯೋಜಕರು ಸಂಜೆ ಗುಲಾಬಿ ಹೂ ನೀಡಿ ಗೌರವಿಸಿ ದರು. ಬೆಂಗಳೂರು ಪೊಲೀಸರಿಗೆ ಅಭಿನಂದನೆ ಎಂದು ಘೋಷಣೆ ಕೂಗುವ ಮೂಲಕ ಡಿಸಿಪಿ ಡಾ.ಶರಣಪ್ಪ, ಸಂಚಾರ ವಿಭಾಗದ ಜಂಟಿ ಪೊಲೀಸ್‌ ಆಯುಕ್ತ ಡಾ.ಬಿ.ಆರ್‌.ರವಿಕಾಂತೇಗೌಡ ಹಾಗೂ ಎಸಿಪಿ, ಇನ್ಸ್‌ಪೆಕ್ಟರ್‌, ಕಾನ್‌ಸ್ಟೆಬಲ್‌ಗ‌ಳಿಗೆ ಗುಲಾಬಿ ಹೂ ನೀಡಿ ಅಭಿನಂದಿಸಲಾಯಿತು.

ಶಾಸಕ ಹ್ಯಾರಿಸ್‌ಗೆ ಪ್ರವೇಶ ನಿರಾಕರಣೆ: ಶಾಸಕ ಎನ್‌.ಎ.ಹ್ಯಾರಿಸ್‌ ಸ್ವಯಂ ಪ್ರೇರಿತರಾಗಿ ಕಾರ್ಯಕ್ರಮಕ್ಕೆ ಆಗಮಿಸಿ ವೇದಿಕೆ ಏರಲು ಮುಂದಾ ದರು. ಆದರೆ, ಕಾರ್ಯಕ್ರಮ ಆಯೋಜಕರು ಹಾಗೂ ಕೆಲ ಮುಖಂಡರು ಇದೊಂದು ರಾಜಕೀಯ ಹೊರತಾದ ಕಾರ್ಯಕ್ರಮ. ಯಾವುದೇ ರಾಜಕೀಯ ಮುಖಂಡರಿಗೆ ಪ್ರವೇಶವಿಲ್ಲ. ದಯವಿಟ್ಟು ವೇದಿಕೆ ಏರಬೇಡಿ ಎಂದು ಮನವಿ ಮಾಡಿದರು. ಹೀಗಾಗಿ ಹ್ಯಾರಿಸ್‌ ಕಾರ್ಯಕ್ರಮದಿಂದ ಹೊರ ನಡೆದರು.

Advertisement

Udayavani is now on Telegram. Click here to join our channel and stay updated with the latest news.

Next