Advertisement

ಉಗಾರ ಶುಗರ್ಸ್‌ ಕಾರ್ಮಿಕರಿಂದ ಪ್ರತಿಭಟನೆ

05:10 PM Jun 03, 2022 | Team Udayavani |

ಯಡ್ರಾಮಿ: ತಾಲೂಕಿನ ಮಳ್ಳಿ-ನಾಗರಳ್ಳಿ ಉಗಾರ ಸಕ್ಕರೆ ಕಾರ್ಖಾನೆ ಸೆಕ್ಯುರಿಟಿ ನೌಕರರು ಆಡಳಿತ ಮಂಡಳಿ ವಿರುದ್ಧ ಬುಧವಾರದಿಂದ ಪ್ರತಿಭಟನೆಗಿಳಿದಿದ್ದಾರೆ.

Advertisement

ಉಗಾರ ಶುಗರ್ಸ್‌ ಕಾಂಟ್ರ್ಯಾಕ್ಟ್ ವರ್ಕರ್ಸ್‌ ಗೌರವ ಅಧ್ಯಕ್ಷ ಡಾ| ಮಹೇಶ ಕುಮಾರ ರಾಠೊಡ ಮಾತನಾಡಿ, ಕಳೆದ 15ವರ್ಷಗಳಿಂದ ಕೆಲಸ ಮಾಡುತ್ತಿರುವ ಕಾರ್ಖಾನೆ ರಕ್ಷಣೆ ಸಿಬ್ಬಂದಿ (ಸೆಕ್ಯೂರಿಟಿ ಗಾರ್ಡ್‌) ತಮಗೆ ಸಿಗಬೇಕಾದ ಕಾನೂನು ಬದ್ಧ ಕನಿಷ್ಟ ವೇತನ ಸೇರಿದಂತೆ ವಿವಿಧ ಬೇಡಿಕೆಗಳನ್ನಿಟ್ಟ ಪರಿಣಾಮವಾಗಿ ಆ ಸಿಬ್ಬಂದಿಗಳನ್ನೇ ಕೆಲಸದಿಂದ ಕಿತ್ತೂಗೆಯುವಂತ ಹೀನ ಕೆಲಸವನ್ನು ಇಲ್ಲಿನ ಆಡಳಿತ ಮಂಡಳಿಯವರು ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯಾರು ನ್ಯಾಯ ಸಮ್ಮತ ಬೇಡಿಕೆ ಕೇಳಿದ್ದಾರೋ ಅವರ ಬದಲಾಗಿ ಬೇರೆ ನೌಕರರನ್ನು ನೇಮಕ ಮಾಡಿಕೊಳ್ಳುವ ಮೂಲಕ ಕಾರ್ಖಾನೆ ಮೊದಲಿನ ನೌಕರರಿಗೆ ಅನ್ಯಾಯ ಎಸಗಿದೆ. ಪ್ರಾರಂಭದಿಂದಲೂ ಕರ್ತವ್ಯ ನಿರ್ವಹಿಸಿಕೊಂಡು ಬಂದ ನೌಕರರಿಗೆ ಕೂಡಲೇ ಕೆಲಸ ನೀಡಿ. ಅವರಿಗೆ ಸಿಗಬೇಕಾದ ಎಲ್ಲ ಸೌಲಭ್ಯಗಳನ್ನು ದೊರಕಿಸುವ ನಿಟ್ಟಿನಲ್ಲಿ ಆಡಳಿತ ಮಂಡಳಿ ಕಾರ್ಯನಿರ್ವಹಿಸಬೇಕು. ಇಲ್ಲದಿದ್ದರೆ ಬರುವ ದಿನಗಳಲ್ಲಿ ನಮ್ಮ ಈ ಹೋರಾಟ ತೀವ್ರ ಸ್ವರೂಪ ಪಡೆಯುತ್ತದೆ ಎಂದು ಎಚ್ಚರಿಸಿದರು.

ಡಾ| ಮಹೇಶ ಕುಮಾರ ರಾಠೊಡ, ಉಗಾರ ಶುಗರ್ಸ್‌ ಕಾಂಟ್ರ್ಯಾಕ್ಟ್ ವರ್ಕರ್ಸ್‌ ಯೂನಿಯನ್‌ ಅಧ್ಯಕ್ಷ ಬಾಬುಸಾಬ್‌ ಮುಲ್ಲಾ, ಪ್ರಧಾನ ಕಾರ್ಯದರ್ಶಿ ಅಶೋಕ ಸಾಸನೂರ , ತಾಲೂಕು ಅಧ್ಯಕ್ಷ ಭೀಮರಾಯ ಮುದಬಸ್ಸಪ್ಪಗೋಳ, ರಾಜ್ಯ ಸಮಿತಿ ಸದಸ್ಯ ಅನಿಲ ಕಾಂಬಳೆ, ಕಟ್ಟಡ ಕಾರ್ಮಿಕರ ಸಂಘದ ವಿಭಾಗೀಯ ಸಂಚಾಲಕ ರಾಮು ಯಡ್ರಾಮಿ ಇತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next