ಕಾಪು: ಮಣಿಪುರ ಘಟನೆಯನ್ನು ಖಂಡಿಸಿ ಕಾಪು ಬ್ಲಾಕ್ ಕಾಂಗ್ರೆಸ್ ದಕ್ಷಿಣ ಸಮಿತಿ ವತಿಯಿಂದ ಕಾಪು ಪೇಟೆಯಲ್ಲಿ ಜು.29ರ ಶನಿವಾರ ಬೃಹತ್ ಪ್ರತಿಭಟನಾ ಸಭೆ ನಡೆಯಿತು.
ಪ್ರತಿಭಟನಾಕಾರರನ್ನುದ್ದೇಶಿಸಿ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮಾತನಾಡಿ, ಮಣಿಪುರದಂತಹ ಸೂಕ್ಷ್ಮ ಪ್ರದೇಶದಲ್ಲಿ ಜನರ ಭದ್ರತೆಗೆ ಸಂಬಂಧಿಸಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ಕೇಂದ್ರ ಸರಕಾರ ಮತ್ತು ಮಣಿಪುರ ಸರಕಾರ ಸಂಪೂರ್ಣ ವಿಫಲವಾಗಿದೆ. ಜನರ ರಕ್ಷಣೆಯಲ್ಲಿ ಸಂಪೂರ್ಣ ವಿಫಲವಾಗಿರುವ ಮಣಿಪುರ ಬಿಜೆಪಿ ಸರಕಾರವನ್ನು ವಜಾ ಮಾಡಿ ಅಧಿಕಾರದಿಂದ ಕೆಳಗಿಳಿಸಿ, ಕೂಡಲೇ ರಾಷ್ಟ್ರಪತಿ ಆಡಳಿತವನ್ನು ಜಾರಿಗೆ ತರುವಂತೆ ಆಗ್ರಹಿಸಿದರು.
ನರೇಂದ್ರ ಮೋದಿ ನೇತೃತ್ವದ ಸರಕಾರದ ಕಾರ್ಯಕ್ರಮವಾದ ಭೇಟಿ ಪಡಾವೋ, ಭೇಟಿ ಬಚಾವೋ ಕೇವಲ ಘೋಷಣೆಗೆ ಸೀಮಿತವಾಗಿದೆ. ಉಡುಪಿ ಜಿಲ್ಲೆಯಲ್ಲಿ ನಡೆಯದೇ ಇರುವ ಘಟನೆಯನ್ನು, ನಡೆದಿದೆ ಎಂದು ಬಿಂಬಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯ ವಿಚಾರವನ್ನಾಗಿ ಪರಿವರ್ತಿಸುತ್ತಿರುವ ಬಿಜೆಪಿಯವರಿಗೆ ಮಣಿಪುರ ಘಟನೆ ಕಾಣಿಸದೇ ಇರುವುದು ಹಾಸ್ಯಾಸ್ಪದವಾಗಿದೆ ಎಂದು ಟೀಕಿಸಿದರು.
ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್ ಚಂದ್ರ ಸುವರ್ಣ, ಕೆಪಿಸಿಸಿ ಮುಖಂಡರಾದ ನವೀನ್ ಚಂದ್ರ ಶೆಟ್ಟಿ, ಎಂ.ಎ. ಗಫೂರ್, ದೇವಿಪ್ರಸಾದ್ ಶೆಟ್ಟಿ, ಪಕ್ಷದ ಪ್ರಮುಖರಾದ ವಿಸ್ವಾಸ್ ಅಮೀನ್, ಶೇಖರ ಹೆಜಮಾಡಿ, ಗೀತಾ ವಾಗ್ಲೆ, ಸರಸು ಡಿ. ಬಂಗೇರ, ಸುನೀಲ್ ಬಂಗೇರ, ಅಮೀರ್ ಕಾಪು, ಅಬ್ದುಲ್ ಅಜೀಜ್, ಮಹಮ್ಮದ್ ಸಾಧಿಕ್, ಶಿವಾಜಿ ಸುವರ್ಣ, ಮೆಲ್ಬಿನ ಡಿ. ಸೋಜ, ಗೋಪಾಲ ಪೂಜಾರಿ ಪಲಿಮಾರು, ಶರ್ಫುದ್ದೀನ್ ಶೇಖ್, ಶಾಂತಲತಾ ಶೆಟ್ಟಿ, ಅಶ್ವಿನಿ ಬಂಗೇರ, ಅಖಿಲೇಶ್ ಕೋಟ್ಯಾನ್, ಸದಾನಂದ ಶೆಟ್ಟಿ,ಜಿತೇಂದ್ರ ಪುರ್ಟಾಡೋ, ವಿನಯ ಬಲ್ಲಾಲ್, ಹರೀಶ್ ನಾಯಕ್, ಯು.ಸಿ. ಶೇಖಬ್ಬ, ರಮೀಜ್ ಹುಸೇನ್, ಪ್ರಭಾ ಶೆಟ್ಟಿ, ಮಾಧವ ಪಾಲನ್, ದಿನೇಶ್ ಪಲಿಮಾರು, ಜಹೀರ್ ಅಹಮದ್, ಪ್ರಭಾಕರ ಆಚಾರ್ಯ, ಮೊದಲಾದವರು ಉಪಸ್ಥಿತರಿದ್ದರು.
ಪ್ರತಿಭಟನಾ ಸಭೆಗೆ ಪೂರ್ವಭಾವಿಯಾಗಿ ಕಾಪು ರಾಜೀವ ಭವನದಿಂದ ಪೇಟೆಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.