ಮೈಸೂರು: ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಭಾನುವಾರ ಮೈಸೂರಿನಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುವುದಾಗಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು. ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೌರತ್ವ ತಿದ್ದುಪಡಿ ಮಸೂದೆ ವಿರುದ್ಧ ದೇಶಾದ್ಯಂತ ಜನ ಪ್ರತಿಭಟನೆ ನಡೆಸುತ್ತಿದ್ದಾರೆ. ಡಿ.19ರಂದು ನಗರದಲ್ಲಿ ಪ್ರತಿಭಟನೆಗೆ ತೀರ್ಮಾನಿಸಲಾಗಿತ್ತಾದರೂ ಅಂದು ನಿಷೇಧಾಜ್ಞೆ ಜಾರಿ ಮಾಡಿದ್ದರಿಂದ ಪ್ರತಿಭಟನೆಗೆ ಮುಂದಾಗಲಿಲ್ಲ ಎಂದರು.
ಅನುಮಾನದಿಂದಲೇ ನೋಡೋದು ಸರಿಯಲ್ಲ: ಭಾನುವಾರ ನಿಷೇಧಾಜ್ಞೆ ಇರುವುದಿಲ್ಲವಾದ್ದರಿಂದ ಪ್ರತಿಭಟನೆಗೆ ಪೊಲೀಸರ ಅನುಮತಿ ಕೇಳಿದ್ದೇವೆ, ಅವರು ಅನುಮತಿ ಕೊಡದಿದ್ದರೂ ಶಾಂತಿಯುತವಾಗಿ ಪ್ರತಿಭಟನೆ ಮಾಡೇ ಮಾಡುತ್ತೇವೆ. ಪ್ರತಿಭಟನೆ ಮಾಡುವುದು ನಮ್ಮ ಹಕ್ಕು, ಪೊಲೀಸರು ಅದನ್ನು ಕಸಿದುಕೊಳ್ಳಲಾಗಲ್ಲ. ಪ್ರತಿಭಟನೆ ಮಾಡಿದಾಕ್ಷಣ ಶಾಂತಿಭಂಗವಾಗುತ್ತೆ ಎಂದು ಎಲ್ಲರನ್ನೂ ಅನುಮಾನದಿಂದಲೇ ನೋಡುವುದು ಸರಿಯಲ್ಲ ಎಂದರು.
ರಾಜಕೀಯ ಲಾಭಕ್ಕಾಗಿ ಬಿಜೆಪಿ ತಂತ್ರ: ಪೌರತ್ವ ತಿದ್ದುಪಡಿ ಮಸೂದೆಯನ್ನು ಬಿಜೆಪಿ ಸರ್ಕಾರ ಮಾನವೀಯತೆ ಆಧಾರದ ಮೇಲೆ ತಂದಿಲ್ಲ. ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ರಾಜಕೀಯ ಲಾಭಕ್ಕಾಗಿ ಈ ಮಸೂದೆ ತರಲು ಹೊರಟಿದ್ದಾರೆ. ಈ ಕಾಯ್ದೆ ಅನಗತ್ಯವಾದದ್ದು, ಈ ಕಾರಣಕ್ಕಾಗಿಯೇ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಕಾಂಗ್ರೆಸ್ ಪಕ್ಷ ಈ ವಿಧೇಯಕದ ವಿರುದ್ಧ ಮತ ಹಾಕಿದೆ ಎಂದರು.
ನಿಜವಾದ ಪ್ರಜೆಗಳೂ ಪೌರತ್ವ ಕಳೆದುಕೊಳ್ಳಬೇಕಾಗುತ್ತೆ: ಭಾರತದಲ್ಲಿ ಜಾತ್ಯತೀತ ಮತ್ತು ಧರ್ಮ ನಿರಪೇಕ್ಷಿತ ಸಂವಿಧಾನವನ್ನು ಅಳವಡಿಸಿಕೊಂಡಿದ್ದೇವೆ. ಪೌರತ್ವ ತಿದ್ದುಪಡಿ ಮಸೂದೆ ಮೂಲಕ ಪಾಕಿಸ್ತಾನ, ಬಾಂಗ್ಲಾ ದೇಶ, ಆಫ್ಘಾನಿಸ್ತಾನದಿಂದ ಬರುವ ಮುಸ್ಲಿಮರಿಗೆ ಆಶ್ರಯ ಕೊಡುವುದಿಲ್ಲ ಎನ್ನುವುದು ಸರಿಯಲ್ಲ. ಸಿಎಎ ಒಂದೇ ಅಲ್ಲ, ಅದರ ಜತೆಗೆ ಎನ್‌ಆರ್‌ಸಿ ತರುವ ಉದ್ದೇಶ ಕೂಡ ಬಿಜೆಪಿ ಸರ್ಕಾರಕ್ಕಿದೆ. ಗೃಹ ಸಚಿವ ಅಮಿತ್‌ಶಾ ಹಲವು ಬಾರಿ ಇದನ್ನು ಹೇಳಿದ್ದಾರೆ. ಹೀಗಾಗಿ ಸಿಎಎ ಅನ್ನು ಎನ್‌ಆರ್‌ಸಿ ಜತೆಗೆ ನೋಡಬೇಕು.
ಎನ್‌ಆರ್‌ಸಿ ತಂದರೆ ಮುಸ್ಲಿಮರಿಗೆ ಮಾತ್ರವಲ್ಲ, ಸೂಕ್ತ ದಾಖಲೆ ಒದಗಿಸದಿದ್ದರೆ ಈ ದೇಶದ ನಿಜವಾದ ಪ್ರಜೆಗಳೂ ಪೌರತ್ವ ಕಳೆದುಕೊಳ್ಳಬೇಕಾಗುತ್ತದೆ ಎಂದರು. ಕೇಂದ್ರ ಸರ್ಕಾರ ಕೂಡಲೇ ಈ ಮಸೂದೆಯನ್ನು ವಾಪಸ್ ಪಡೆದು ಜನರಲ್ಲಿರುವ ಗೊಂದಲವನ್ನು ನಿವಾರಿಸುವ ಕೆಲಸ ಮಾಡಬೇಕು. ಈ ಮಸೂದೆ ಜಾರಿಯಿಂದ ಬಡವರು, ಆದಿವಾಸಿಗಳು ತೊಂದರೆಗೆ ಸಿಲುಕುತ್ತಾರೆ ಎಂದು ಹೇಳಿದರು.
ಪ್ರತಿಭಟಿಸು ಹಕ್ಕು ಕಸಿಯಬಾರದು: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಮಂಗಳೂರು ಭೇಟಿಗೆ ಅವಕಾಶ ನೀಡದಿರುವುದು ಸರಿಯಲ್ಲ. ಸಾವನ್ನಪ್ಪಿರುವವರ ಮನೆಗೆ ಸಾಂತ್ವನ ಹೇಳಲು ಹೋಗುವುದು ತಪ್ಪಾ ಎಂದು ಪ್ರಶ್ನಿಸಿದ ಅವರು, ಇದು ಸರ್ವಾಧಿಕಾರಿ ಧೋರಣೆಯನ್ನು ತೋರಿಸುತ್ತದೆ. ಜನರ ಪ್ರತಿಭಟಿಸುವ ಹಕ್ಕನ್ನು ಕಸಿದುಕೊಳ್ಳಲಾಗದು ಎಂದರು.
ಮಾಜಿ ಸಚಿವ ಯು.ಟಿ.ಖಾದರ್, ಸಚಿವ ಸಿ.ಟಿ.ರವಿ ಅವರಂತೆ ಪ್ರಚೋದನಾಕಾರಿ ಹೇಳಿಕೆ ನೀಡಿಲ್ಲ. ಖಾದರ್ ಬೆಂಕಿ ಹಚ್ಚುತ್ತೇವೆ ಎಂದು ಎಲ್ಲೂ ಹೇಳಿಲ್ಲ. ಅವರ ಹೇಳಿಕೆಯನ್ನು ತಿರುಚಲಾಗಿದೆ ಎಂದು ಹೇಳಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ನಗರ ಅಧ್ಯಕ್ಷ ಆರ್.ಮೂರ್ತಿ, ಜಿಪಂ ಸದಸ್ಯ ಡಿ.ರವಿಶಂಕರ್, ಮುಖಂಡ ಎಸ್.ಸಿ.ಬಸವರಾಜು, ನಗರಪಾಲಿಕೆ ಸದಸ್ಯರಾದ ಹಾಜೀರಾ ಸೀಮಾ, ಶ್ರೀಧರ್ ಸುದ್ದಿಗೋಷ್ಠಿಯಲ್ಲಿದ್ದರು.