ಹುಣಸೂರು: ಅಂಗನವಾಡಿ ನೌಕರಿಗೆ ಕನಿಷ್ಟ ವೇತನ ಜಾರಿ, ಮೊಬೈಲ್ ಬದಲಾಗಿ ಗುಣಮಟ್ಟದ ಟ್ಯಾಬ್ ನೀಡಿ, ಎನ್.ಇ.ಪಿ-2020ನ್ನು ವಾಪಸ್ಸು ಪಡೆಯಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಓತ್ತಾಯಿಸಿ ಅಂಗನವಾಡಿ ನೌಕರರು ಸಿಐಟಿಯು ನೇತೃತ್ವದಲ್ಲಿ ನಗರದ ಸಿಡಿಪಿಓ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ನಗರಸಭಾ ಮೈದಾನದಿಂದ ಹೊರಟ ಮೆರವಣಿಗೆಯಲ್ಲಿ ಅಂಗನವಾಡಿ ಕಾರ್ಯಕರ್ತರು, ಅಂಗನವಾಡಿ ನೌಕರರ ಬೇಡಿಕೆಗಳು ಈಡೇರಲಿ, ಕೊಟ್ಟ ಮಾತಿನಂತೆ ಸರಕಾರ ನಡೆದುಕೊಳ್ಳಲಿ ಎಂಬಿತ್ಯಾದಿ ಘೋಷಣೆ ಕೂಗುತ್ತಾ ಸಾಗಿ ಬಂದರು.
ಸಿಡಿಪಿಓ ಕಚೇರಿ ಎದುರು ನಡೆಸಿದ ಧರಣಿಯಲ್ಲಿ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಪುಷ್ಪ ಮಾತನಾಡಿ, ಅಂಗನವಾಡಿ ಕಾರ್ಯಕರ್ತರು ತ್ಯಾಗ ಮತ್ತು ಶ್ರಮದಿಂದ ಕೆಲಸ ಮಾಡುತ್ತಿದ್ದು, ಅವರುಗಳ ಸ್ಥಿತಿ ದಯನೀಯವಾಗಿದೆ. ಕಳಪೆ ಮೊಬೈಲ್ ನೀಡಿ ಎಲ್ಲವನ್ನೂ ದಾಖಲಿಸುವಂತೆ ಕಾರ್ಯಕರ್ತರಿಗೆ ಅಧಿಕಾರಿಗಳು ನೋಟೀಸ್ ನೀಡಿ ಕಿರುಕುಳ ನೀಡುತ್ತಿರುವುದನ್ನು ತಪ್ಪಿಸಬೇಕು ಎಂದರು.
1975ರಲ್ಲಿ ಆರಂಭವಾದ ಸಮಗ್ರ ಶಿಶು ಅಭಿವೃದ್ಧಿ ಯೋಜನೆ, ಐಸಿಡಿಎಸ್ ಸೆಕ್ಷನ್, ಅಂಗನವಾಡಿ ಮತ್ತು ಪೋಷಣ್-2ಯೋಜನೆಯಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ನೌಕರರು ಗೋಳು ಹೇಳದಾಗಿದೆ. ಅಂಗನವಾಡಿ ನೌಕರರಿಗೆ ಕನಿಷ್ಠ ವೇತನ ಜಾರಿ ಮಾಡಬೇಕು. ಯಾವುದೇ ಕಾರಣಕ್ಕೂ ಖಾಸಗೀಕರಣ ಮಾಡಬಾರದು ಎಂದು ಹೇಳಿದರು.
ಅಂಗನವಾಡಿ ನೌಕರರಿಂದ ಎಲ್ಲಾ ರೀತಿಯ ಸರ್ವೆ ಇತರ ಸಾಮಾಜಿಕ ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಸರಕಾರಗಳು ಕನಿಷ್ಟ ವೇತನ ನಿಗದಿ ಮಾಡದೆ ಬೇಕಾಬಿಟ್ಟಿಯಾಗಿ ದುಡಿಸಿಕೊಳ್ಳುತ್ತಿರುವುದು ನಾಚಿಕೆಗೇಡಿನ ವಿಚಾರ. ಅಂಗನವಾಡಿ ನೌಕರರಿಗೆ ನೀಡಿರುವ ಕಳಪೆ ಮೊಬೈಲ್ ಬದಲಿಗೆ ಗುಣಮಟ್ಟದ ಟ್ಯಾಬ್ ವಿತರಿಸಬೇಕು ಎಂದು ಆಗ್ರಹಿಸಿದರು.
ಸರಕಾರ ಸಹಭಾಗಿತ್ವ ಪಿಂಚಣಿ ಪದ್ಧತಿ ಎನ್‌ಪಿಎಸ್‌ಅನ್ನು ಜಾರಿ ಮಾಡುತ್ತಿದೆ. ಅದು 40 ವರ್ಷದೊಳಗಿನ ಕಾರ್ಯಕರ್ತರು ಮತ್ತು ಸಹಾಯಕರಿಗೆ ಜಾರಿ ಮಾಡುತ್ತಿದೆ. ಕಳೆದ 45 ವರ್ಷಗಳಿಂದ ಇಲಾಖೆಯಲ್ಲಿ ಕೆಲಸ ನಿರ್ವಹಿಸಿದ ಲಕ್ಷಾಂತರ ಕಾರ್ಯಕರ್ತರು-ಸಹಾಯಕಿಯರನ್ನು ನಿವೃತ್ತಿ ಹೆಸರಿನಲ್ಲಿ ಬೀದಿ ಪಾಲು ಮಾಡುತ್ತಿದೆ ಎಂದು ದೂರಿದರು.
ಆ ಬಳಿಕ ಬೇಡಿಕೆಯುಳ್ಳ ಮನವಿ ಪತ್ರವನ್ನು ಸಿಡಿಪಿಓ ರಶ್ಮಿಯವರಿಗೆ ನೀಡಿದರು.
ಪ್ರತಿಭಟನೆಯಲ್ಲಿ ಸಿಐಟಿಯುನ ಬಸವರಾಜು ವಿ.ಕಲ್ಕುಣಿಕೆ, ಉಪಾಧ್ಯಕ್ಷರಾದ ಲತಾ, ಕಾಮಾಕ್ಷಿ, ಪದ್ಮಭಾಯಿ, ಸಂಘಟನಾ ಕಾರ್ಯದರ್ಶಿ ನಾಗಮ್ಮ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶಾರದಾ, ಖಜಾಂಚಿ ಕಲಾವತಿ ಮುಖಂಡರಾದ ಪ್ರತಿಭಾ, ಮಂಜುಳಾ, ತೇಜಸ್ಮಿತ, ರಾಧಾಬಾಯಿ, ಸಾವಿತ್ರಮ್ಮ, ರೇಖಾ, ಮಣಿ, ಡಿ.ಎಚ್.ಎಸ್.ಜಿಲ್ಲಾ ಸಂಚಾಲಕ ಸತೀಶ್ ಮುಂತಾದವರು ಭಾಗಿಯಾಗಿದ್ದರು.