ಧಾರವಾಡ: ಜಿಲ್ಲೆಯಲ್ಲಿ ಎಲ್ಲ ಇಲಾಖೆಗಳಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಅಭಿವೃದ್ಧಿ ಕಾಮಗಾರಿಗಳಲ್ಲಿ ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆಗಳು ದುರ್ಬಳಕೆ ಆಗಿರುವುದನ್ನು ಖಂಡಿಸಿ ರಾಜ್ಯ ಆದಿಜಾಂಬವ (ಮಾದರ) ಸಂಘದ ನೇತೃತ್ವದಲ್ಲಿ ಡಿಸಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಕಡಪಾ ಮೈದಾನದಿಂದ ಡಿಸಿ ಕಚೇರಿವರೆಗೆ ಸಂಘದ ನೇತೃತ್ವದಲ್ಲಿ ಎಸ್‌ಸಿ-ಎಸ್‌ಟಿ ಸಮುದಾಯದಿಂದ ಪ್ರತಿಭಟನಾ ರ್ಯಾಲಿ ಕೈಗೊಳ್ಳಲಾಯಿತು. ಬಳಿಕ ಡಿಸಿ ಕಚೇರಿ ಎದುರು ಧರಣಿ ಕೈಗೊಂಡು ಜಿಲ್ಲಾಡಳಿತ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು. ಲೋಕೋಪಯೋಗಿ ಇಲಾಖೆ, ಜಿಪಂ, ಸಣ್ಣ ನೀರಾವರಿ, ಹು-ಧಾ ಮಹಾನಗರ ಪಾಲಿಕೆ ಹಾಗೂ ಇನ್ನುಳಿದ ಎಲ್ಲ ಇಲಾಖೆಗಳಲ್ಲಿ ಎಸ್‌ಸಿಪಿ/ಟಿಎಸ್‌ಪಿ, ಶಾಸನ ಬದ್ಧ ಅನುದಾನ ದುರುಪಯೋಗ ಮಾಡಿದ ಅಧಿಕಾರಿಗಳ ಮೇಲೆ ಕೂಡಲೇ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಬಗರಹುಕುಂ ಭೂಮಿ ಸಾಗುವಳಿ ಮಾಡಿದ ಪಜಾ/ಪಪಂ ಜನರಿಗೆ ಕೂಡಲೇ ಸಾಗುವಳಿ ಚೀಟಿ ವಿತರಿಸಬೇಕು ಎಂದು ಆಗ್ರಹಿಸಲಾಯಿತು.
ಸರ್ವೇ ಮಾಡಿ ಮನೆಯಿಲ್ಲದವರಿಗೆ ಕೂಡಲೇ ನಿವೇಶನ ಮತ್ತು ಮನೆಗಳನ್ನು ನೀಡಬೇಕು. ಪಜಾ/ಪಪಂ ಜನರ ಭೂಮಿಯನ್ನು ಕೆಐಎಡಿಬಿಗೆ ಸರಕಾರ ಭೂಸ್ವಾಧೀನ ಮಾಡಿಕೊಂಡಿದ್ದು, ಅವರಿಗೆ ಭೂ ಮಂಜೂರಾತಿ ಮಾಡದೇ ಜಮೀನು ವಶಪಡಿಸಿಕೊಂಡಿದೆ. ಇದು ಕಾನೂನುಬಾಹಿರವಾಗಿದ್ದು, ಅಂತಹ ಅಧಿಕಾರಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಬೇಕು. ಹು-ಧಾ ಮಹಾನಗರ ಪಾಲಿಕೆಯಲ್ಲಿ ಪೌರಕಾರ್ಮಿಕರ ನೇಮಕ ಪ್ರಕ್ರಿಯೆ ನೀಡಬೇಕು ಎಂದು ಒತ್ತಾಯಿಸಲಾಯಿತು.
ಕವಿವಿ, ಕೃವಿವಿ ಹಾಗೂ ಕರ್ನಾಟಕ ರಾಜ್ಯ ಕಾನೂನು ವಿವಿಗಳಲ್ಲಿ ಎಸ್‌ಸಿಪಿ/ಟಿಎಸ್‌ಪಿ ಅನುದಾನ ದುರ್ಬಳಕೆಯಾಗಿದೆ. ಇದನ್ನು ಕೂಡಲೇ ಉನ್ನತ ಮಟ್ಟದ ತನಿಖೆ ಮಾಡಿ ತಪ್ಪಿತಸ್ಥರ ಮೇಲೆ ಕ್ರಿಮಿನಲ್ ಮೊಕದ್ದಮೆ ಮಾಡಬೇಕು. ಸಮಾಜ ಕಲ್ಯಾಣ ಇಲಾಖೆ ಎಲ್ಲಯೋಜನೆಗಳ ಅಭಿವೃದ್ಧಿ ಕಾಮಗಾರಿಗಳನ್ನು ಪಜಾ/ಪಪಂ ಗುತ್ತಿಗೆದಾರರಿಗೆ ಟೆಂಡರ್ ನೀಡಬೇಕು. ಜಿಲ್ಲೆಯ ಎಲ್ಲ ಗ್ರಾಮಗಳಲ್ಲಿ ಪಜಾ/ಪಪಂ ಸಮುದಾಯದವರಿಗೆ ಪ್ರತ್ಯೇಕ ಸ್ಮಶಾನ ಭೂಮಿ ಮಂಜೂರು ಮಾಡಬೇಕು ಎಂದು ಆಗ್ರಹಿಸಲಾಯಿತು.
ಮಾಜಿ ಸಚಿವ ಅಲ್ಕೋಡ್ ಹನುಮಂತಪ್ಪ, ಜಿಲ್ಲಾಧ್ಯಕ್ಷ ಅಶೋಕ ದೊಡಮನಿ, ವೆಂಕಟೇಶ ಸಗಬಾಲ, ಶಂಕರ ದೊಡಮನಿ, ಕಲ್ಮೇಶ ಹಾದಿಮನಿ, ಸಂಗಮೇಶ ಮಾದರ, ಬಸವರಾಜ ಮಾದರ ಇನ್ನಿತರರಿದ್ದರು.