ಮದ್ದೂರು: ತಾಲೂಕಿನ ಹೂತಗೆರೆ ಗ್ರಾಪಂ ವ್ಯಾಪ್ತಿಯ ದೊಡ್ಡಅಂಕನಹಳ್ಳಿ ಗ್ರಾಮ ಠಾಣಾ ವ್ಯಾಪ್ತಿಯ ಸರ್ಕಾರಿ ನಿವೇಶನ ಒತ್ತುವರಿ ಮಾಡಿಕೊಂಡಿದ್ದು, ಕೂಡಲೇ ತೆರವುಗೊಳಿಸುವಂತೆ ಒತ್ತಾಯಿಸಿ ದೊಡ್ಡಅಂಕನಹಳ್ಳಿ, ಮಾದಪ್ಪನಕೊಪ್ಪಲು ಗ್ರಾಮಾಭಿವೃದ್ಧಿ ಸಮಿತಿ ಪದಾಧಿಕಾರಿಗಳು ತಾಪಂ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.
ಪಟ್ಟಣದ ತಾಪಂ ಕಚೇರಿ ಬಳಿ ಜಮಾವಣೆಗೊಂಡ ಸಂಘಟನೆ ಕಾರ್ಯಕರ್ತರು, ಸ್ಥಳೀಯ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ, ಒತ್ತುವರಿ ಜಾಗ ತೆರವುಗೊಳಿಸುವಂತೆ ಹಲವು ಬಾರಿ ಅಧಿಕಾರಿಗಳಿಗೆ ದೂರು ನೀಡಿದ್ದರೂ, ಯಾವುದೇ ಕ್ರಮಕ್ಕೆ ಮುಂದಾಗದಿರುವ ಬಗ್ಗೆ ಕಿಡಿಕಾರಿದರು.
ಗ್ರಾಮದ ಕೆಲ ವ್ಯಕ್ತಿಗಳೂ ಅಕ್ರಮವಾಗಿ ಆಕ್ರಮಿಸಿಕೊಂಡು ಅಂಗಡಿ ಮಳಿಗೆ ನಿರ್ಮಾಣ ಮಾಡಲು ಮುಂದಾಗಿದ್ದು, ಈ ಸಂಬಂಧ ತಾಪಂ ಇಒ, ಪಿಡಿಒಗೆ ಮನವಿ ಮಾಡಿದ್ದರೂ ಕ್ರಮಕೈಗೊಂಡಿಲ್ಲ. ಅಕ್ರಮ ಒತ್ತುವರಿ ಮಾಡಿಕೊಂಡಿರುವ ವ್ಯಕ್ತಿಗಳ ಜತೆ ಅಧಿಕಾರಿಗಳೇ ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು.
ಕಾಮಗಾರಿ ನಡೆಯುತ್ತಿರುವ ಸ್ಥಳವನ್ನು ಪರಿಶೀಲಿಸಿ, ತಡೆಹಿಡಿಯುವ ಸಂದರ್ಭದಲ್ಲಿ ಕೆಲ ವ್ಯಕ್ತಿಗಳು ಏಕಾಏಕಿ ಹಲ್ಲೆ ನಡೆಸಿದ್ದು, ಈ ಸಂಬಂಧ ಕೆಸ್ತೂರು ಠಾಣೆಗೂ ದೂರು ನೀಡಲಾ ಗಿದೆ. ಇದುವರೆಗೂ ಯಾವುದೇ ಕ್ರಮಕ್ಕೆ ಮುಂದಾಗದಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಕೂಡಲೇ ಒತ್ತುವರಿ ತೆರವುಗೊಳಿಸಿ ಸಾರ್ವ ಜನಿಕ ಕೆಲಸಕ್ಕೆ ಬಳಕೆ ಮಾಡಿಕೊಳ್ಳುವಂತೆ ಒತ್ತಾಯಿಸಿದರು. ವಾರದೊಳಗಾಗಿ ತೆರವುಗೊಳಿಸದಿದ್ದಲ್ಲಿ ಡೀಸಿ ಕಚೇರಿ ಎದುರು ಗ್ರಾಮಸ್ಥರ ಜತೆಗೂಡಿ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದರು.
ಪ್ರತಿಭಟನೆ ವೇಳೆ ಡಾ.ರಾಘವೇಂದ್ರ, ಚನ್ನಸಂದ್ರ ಲಕ್ಷ್ಮಣ್, ಪುಟ್ಟರಾಮು, ಹನುಮಂತಪ್ಪ, ನಂಜುಂಡ, ಸತೀಶ್, ಅಭಿಷೇಕ್, ಡಿ.ಎನ್.ರಂಜಿತ್, ಯಶವಂತ್, ಪ್ರಸನ್ನ ನೇತೃತ್ವವಹಿಸಿದ್ದರು.