ಗಜೇಂದ್ರಗಡ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿಕೆ ಖಂಡಿಸಿ ಜಯಕರ್ನಾಟಕ ಸಂಘಟನೆ ಕಾರ್ಯಕರ್ತರು ಪಟ್ಟಣದ ಕಾಲಕಾಲೇಶ್ವರ ವೃತ್ತದಲ್ಲಿ ಠಾಕ್ರೆ ಪ್ರತಿಕೃತಿ ದಹಿಸಿ ಶನಿವಾರ ಪ್ರತಿಭಟನೆ ನಡೆಸಿದರು.
ಕರ್ನಾಟಕದಲ್ಲಿರುವ ಮರಾಠಿ ಭಾಷೆ ಹಾಗೂ ಸಂಸ್ಕೃತಿ ಪ್ರಧಾನ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳುವುದಾಗಿ ಹೇಳಿಕೆ ನೀಡಿರುವುದು ಖಂಡನೀಯ. ರಾಜ್ಯ ವಿಭಜನೆಗೆ ಸಂಬಂಧಿಸಿದಂತೆ ಮಹಾಜನ್ ವರದಿಯೇ ಅಂತಿಮ. ರಾಜ್ಯದಲ್ಲಿರುವ ಮರಾಠಿಗರು ಕನ್ನಡಿಗರೊಂದಿಗೆ ಅನ್ಯೋನ್ಯತೆಯಿಂದ ಬೆರೆತು ಜೀವನ ನಡೆಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಉದ್ಧವ್ ಠಾಕ್ರೆ ಶಾಂತಿ ಕದಡುವ ನಿಟ್ಟಿನಲ್ಲಿ ಇಂತಹ ಹೇಳಿಕೆ ನೀಡಿರುವುದು ಖಂಡನೀಯ. ಪದೇ ಪದೆ ಕನ್ನಡಿಗರ ಸಹನೆಯನ್ನು ಪರೀಕ್ಷಿಸಿದರೆ ತಕ್ಕ ಬೆಲೆ ತೆರಬೇಕಾದೀತು. ಮುಖ್ಯಮಂತ್ರಿಸ್ಥಾನದಲ್ಲಿರುವ ಠಾಕ್ರೆ ತನ್ನ ಸ್ಥಾನಕ್ಕಾದರೂ ಗೌರವ ನೀಡುವ ನಿಟ್ಟಿನಲ್ಲಿ ನಡೆದುಕೊಂಡರೆ ಒಳಿತು ಎಂದು ಕಿಡಿಕಾರಿದರು.
ರಾಜ್ಯದಲ್ಲಿರುವ ಯಾರಾದರೂ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಿ ಎಂದು ಹೇಳಿದರೆ ಅಂತಹವರನ್ನು ನಾವೇ ಮಹಾರಾಷ್ಟ್ರಕ್ಕೆ ಕಳುಹಿಸಿಕೊಡುತ್ತೇವೆ. ರಾಜ್ಯದ ಎಲ್ಲ ಪಕ್ಷಗಳ ಸಂಸದರು, ಶಾಸಕರು, ಮುಖಂಡರು ಠಾಕ್ರೆ ಹೇಳಿಕೆ ಖಂಡಿಸಬೇಕು. ಅವರು ಕ್ಷಮೆ ಕೇಳುವಂತೆ ಮಾಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಇದನ್ನೂ ಓದಿ:ಕನ್ನಡ ಭಾಷೆಯಲ್ಲಿದೆ ಉಜ್ವಲ ಶಕ್ತಿ
ಈ ಸಂದರ್ಭದಲ್ಲಿ ತಹಶೀಲ್ದಾರ್ ಎ.ಬಿ. ಕಲಘಟಗಿ ಅವರಿಗೆ ಮನವಿ ಸಲ್ಲಿಸಿದರು. ನಂತರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಭಾವಚಿತ್ರಕ್ಕೆ ಚಪ್ಪಲಿ ಸೇವೆ ಮಾಡಿ, ಪ್ರತಿಕೃತಿ ಧಹಿಸಿ, ಆಕ್ರೋಶ ವ್ಯಕ್ತಪಡಿಸಿದರು. ಭೀಮಣ್ಣ ಇಂಗಳೆ, ಕಳಕಪ್ಪ ಪೋತಾ, ಶರಣಪ್ಪ ಚವ್ಹಾಣ, ಜಗದೀಶ ಮಡಿವಾಳರ, ಷಣ್ಮುಖ ಕಾತರಕಿ, ವೀರೇಶ ಶಿವಶಿಂಪಗೇರ, ಸಂಗಪ್ಪ ಪತಂಗರಾಯ್, ಮುತ್ತಯ್ಯ ಬಿನ್ನಾಳಮಠ, ಈರಣ್ಣ ಪುಲಗಟ್ಟಿ, ಶಿವು ರಾಠೊಡ, ಮಂಜುನಾಥ ಚಂದೂಕರ, ಮಂಗಳೇಶ ಹಾಳಕೇರಿ, ಕಳಕಪ್ಪ ಹಾಳಕೇರಿ, ಪೀರು ರಾಠೊಡ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.