Advertisement

ಸಾಸ್ತಾನ ಟೋಲ್‌ಗೆ ಮುತ್ತಿಗೆ : ಶುಲ್ಕ ನಿರಾಕರಿಸಿ ಸ್ಥಳೀಯರಿಂದ ಬೃಹತ್‌ ಪ್ರತಿಭಟನೆ

12:08 AM Feb 17, 2021 | Team Udayavani |

ಕೋಟ: ರಾಷ್ಟ್ರೀಯ ಹೆದ್ದಾರಿಯ ಎಲ್ಲ ಟೋಲ್‌ ಪ್ಲಾಜಾಗಳಲ್ಲಿ ಫಾಸ್ಟಾಗ್‌ ಕಡ್ಡಾಯಗೊಳಿಸಿ ಸ್ಥಳೀಯರಿಗೆ ನೀಡಲಾಗುತ್ತಿರುವ ಶುಲ್ಕ ವಿನಾಯಿತಿ ಸ್ಥಗಿತಗೊಳ್ಳುತ್ತಿದ್ದು ಈ ಕುರಿತು ಆಕ್ರೋಶ ವ್ಯಕ್ತಪಡಿಸಿ ಸಾಸ್ತಾನ ಟೋಲ್‌ ಪ್ಲಾಜಾದಲ್ಲಿ ಸ್ಥಳೀಯರು ಮಂಗಳವಾರ ಬೃಹತ್‌ ಪ್ರತಿಭಟನೆ ನಡೆಸಿದರು.

Advertisement

ಸ್ಥಳೀಯರಿಂದ ಶುಲ್ಕ ವಸೂಲಿ ಮಾಡಲು ತಯಾರಿಗಳನ್ನು ನಡೆಸುತ್ತಿದ್ದಂತೆ ಮೊದಲೇ ತೀರ್ಮಾನವಾದಂತೆ ನೂರಾರು ಸಂಖ್ಯೆಯ ಸ್ಥಳೀಯರು ತಮ್ಮ ವಾಹನಗಳೊಂದಿಗೆ ಟೋಲ್‌ಗೇಟ್‌ಗೆ ಆಗಮಿಸಿದರು ಹಾಗೂ ಜನಪ್ರತಿನಿಧಿಗಳು, ಅಧಿಕಾರಿಗಳು ಭರವಸೆ ನೀಡಿದಂತೆ ದಿಶಾ ಸಭೆಯ ತನಕ ಸ್ಥಳೀಯರಲ್ಲಿ ಶುಲ್ಕ ಸಂಗ್ರಹಿಸಬಾರದು. ಈ ಬಗ್ಗೆ ಸೂಕ್ತ ಭರವಸೆಯನ್ನು ನೀಡಬೇಕು ಎಂದು ಪಟ್ಟುಹಿಡಿದರು.

ಆದರೆ ಟೋಲ್‌ನ ಸಿಬಂದಿ ಯಾವುದೇ ಪ್ರತಿಕ್ರಿಯೆ ನೀಡದಿದ್ದಾಗ ಆಕ್ರೋಶ ವ್ಯಕ್ತಪಡಿಸಿ ಟೋಲ್‌ ಪ್ಲಾಜಾಕ್ಕೆ ಮುತ್ತಿಗೆ ಹಾಕಲಾಯಿತು ಮತ್ತು ನವಯುಗ ವಿರುದ್ಧ ಘೋಷಣೆಗಳನ್ನು ಕೂಗುತ್ತ ಸ್ಥಳೀಯರಿಗೆ ಮೀಸಲಿರಿಸಿದ ಎರಡು ಗೇಟ್‌ಗಳನ್ನು ತಡೆದು, ವಾಹನಗಳನ್ನು ರಸ್ತೆಗೆ ಅಡ್ಡ ಇಟ್ಟು ಪ್ರತಿಭಟಿಸಲಾಯಿತು.

ಹೋರಾಟ ಕೈಬಿಡುವುದಿಲ್ಲ
ಬ್ರಹ್ಮಾವರ ತಹಶೀಲ್ದಾರ್‌ ಕಿರಣ್‌ ಗೋರಯ್ಯ ಸ್ಥಳಕ್ಕಾಗಮಿಸಿ ಪ್ರತಿಭಟನಕಾರರೊಂದಿಗೆ ಮಾತುಕತೆ ನಡೆಸಿ ಹೋರಾಟ ಕೈಬಿಡುವಂತೆ ವಿನಂತಿಸಿದರು. ಶುಲ್ಕ ಸಂಗ್ರಹ ನಿರ್ಧಾರ ಮುಂದೂಡುವ ತನಕ ಯಾವುದೇ ಕಾರಣಕ್ಕೆ ಹೋರಾಟ ಕೈಬಿಡುವುದಿಲ್ಲ ಎಂದು ಹೋರಾಟ ಗಾರರು ತಿಳಿಸಿದರು.

ಬೆಳಗ್ಗೆ 9 ಗಂಟೆಗೆ ಆರಂಭಗೊಂಡ ಪ್ರತಿಭಟನೆ ಮಧ್ಯಾಹ್ನ 12ರ ತನಕ ಮುಂದುವರಿಯಿತು. ಪ್ರತಿಭಟನೆಯ ಬಿಸಿಗೆ ಬೆದರಿದ ಟೋಲ್‌ನವರು ಸ್ಥಳೀಯರಿಂದ ಶುಲ್ಕ ಪಡೆಯಲು ಮುಂದಾಗಲಿಲ್ಲ. ಕೊನೆಗೆ ಪ್ರತಿಭಟನ ನಿರತರು ಸಭೆ ನಡೆಸಿ ಯಾವುದೇ ಕಾರಣಕ್ಕೂ ಸ್ಥಳೀಯರು ಶುಲ್ಕವನ್ನು ಪಾವತಿಸದೆ ಕರ ನಿರಾಕರಣೆಯನ್ನು ಮುಂದುವರಿಸುವುದು. ಬುಧವಾರ ಮತ್ತೂಮ್ಮೆ ಸಭೆ ಸೇರಿ ಮುಂದಿನ ಹೋರಾಟದ ಕುರಿತು ರೂಪರೇಷೆ ಸಿದ್ಧಪಡಿ ಸುವುದು ಎಂದು ತೀರ್ಮಾನಿಸಿದರು.

Advertisement

ಬ್ರಹ್ಮಾವರ ತಾ.ಪಂ. ಅಧ್ಯಕ್ಷೆ ಜ್ಯೋತಿ ಉದಯ ಪೂಜಾರಿ, ಸಾಲಿಗ್ರಾಮ ಪ.ಪಂ. ಅಧ್ಯಕ್ಷೆ ಸುಲತಾ ಹೆಗ್ಡೆ, ಹೆದ್ದಾರಿ ಜಾಗೃತಿ ಸಮಿತಿಯ ಅಧ್ಯಕ್ಷ ಶ್ಯಾಮ್‌ಸುಂದರ್‌ ನಾೖರಿ, ಮಾಜಿ ಅಧ್ಯಕ್ಷ ಪ್ರತಾಪ್‌ ಶೆಟ್ಟಿ, ಕಾರ್ಯದರ್ಶಿ ಅಲ್ವಿನ್‌ ಅಂದ್ರಾಡೆ, ಮಾಜಿ ಕಾರ್ಯದರ್ಶಿ ವಿಟuಲ ಪೂಜಾರಿ, ದಿನೇಶ್‌ ಗಾಣಿಗ ಕೋಟ, ಅಚ್ಯುತ್‌ ಪೂಜಾರಿ, ಭೋಜ ಪೂಜಾರಿ, ಕೆ.ಪಿ.ಶೇಖರ್‌, ನಾಗರಾಜ್‌ ಗಾಣಿಗ ಹಾಗೂ ನೂರಾರು ಸಂಖ್ಯೆಯಲ್ಲಿ ಪ್ರತಿಭಟನಕಾರರು ಉಪಸ್ಥಿತರಿದ್ದರು.

ವಾಹನಗಳನ್ನು ಟೋಲ್‌ನಲ್ಲಿಟ್ಟು ಲಾಕ್‌
ಕುಂದಾಪುರ ಹಾಗೂ ಉಡುಪಿಗೆ ತೆರಳುವ ಕಡೆಗಳಲ್ಲಿ ಸ್ಥಳೀಯರಿಗಾಗಿ ಇದುವರೆಗೆ ಮೀಸಲಿರಿಸಿದ ಲೈನ್‌ನಲ್ಲಿ ವಾಹನಗಳನ್ನು ತಂದಿಟ್ಟು ಲಾಕ್‌ ಮಾಡಿ ಪ್ರತಿಭಟನ ನಿರತರು ತೆರಳಿದರು. ಹೀಗಾಗಿ ಪ್ರತಿಭಟನೆ ನಿಯಂತ್ರಿಸಲು ವಾಹನ ತೆರವುಮಾಡುವುದು ಅಗತ್ಯವಾಗಿತ್ತು. ಆದರೆ ವಾಹನ ತೆರವುಗೊಳಿಸಲಾಗದೆ ಪೊಲೀಸರು ಸಂಕಷ್ಟ ಅನುಭವಿಸಿದರು.

ನೂಕಾಟ-ತಳ್ಳಾಟ
ರಸ್ತೆಯಲ್ಲಿ ಕುಳಿತು ಪ್ರತಿಭಟಿಸುತ್ತಿದ್ದವರನ್ನು ಎಬ್ಬಿಸಲು ಪೊಲೀಸರು ಸಾಹಸಪಡುತ್ತಿದ್ದಾಗ ನೂಕಾಟ-ತಳ್ಳಾಟಗಳು ನಡೆದವು. ಪೊಲೀಸರು ಎಲ್ಲವನ್ನೂ ಶಾಂತಿಯುತವಾಗಿ ನಿಯಂತ್ರಿಸಿದರು.

ಹೋರಾಟಕ್ಕೆ ಬೆಚ್ಚಿದ ಟೋಲ್‌ ಸಿಬಂದಿ
ಸರಕಾರದ ಆದೇಶದಂತೆ ಫೆ. 15ರ ಮಧ್ಯ ರಾತ್ರಿಯಿಂದಲೇ ಸ್ಥಳೀಯರಿಂದ ಟೋಲ್‌ ವಸೂಲಿ ಆರಂಭಿಸಬೇಕಿತ್ತು. ಆದರೆ ಪ್ರತಿ ಭಟನೆಯ ಕಾರಣಕ್ಕೆ ಟೋಲ್‌ನ ವರು ಮಂಗಳವಾರ ಬೆಳಗ್ಗೆ ತನಕ ಶುಲ್ಕ ಸಂಗ್ರಹಕ್ಕೆ ಮುಂದಾಗಿರಲಿಲ್ಲ ಹಾಗೂ ನಿಧಾನವಾಗಿ ಶುಲ್ಕ ಸಂಗ್ರಹಕ್ಕೆ ಮುಂದಾಗುತ್ತಿದ್ದಂತೆ ಸ್ಥಳೀಯರು ಒಮ್ಮೆಲೆ ನೂರಾರು ಸಂಖ್ಯೆಯಲ್ಲಿ ಜತೆಗೂಡಿ ಆಕ್ರೋಶ ಹೊರಹಾಕಿದ್ದರಿಂದ ಪ್ರತಿಭಟನೆಯ ಬಿಸಿಗೆ ಬೆದರಿದ ಟೋಲ್‌ನ ಸಿಬಂದಿ ಶುಲ್ಕ ಸಂಗ್ರಹಕ್ಕೆ ಒತ್ತಡ ಹೇರಲಿಲ್ಲ.

ಪ್ರತಿಭಟನೆ ನಿಯಂತ್ರಿಸಲು ಪೊಲೀಸರ ಹರಸಾಹಸ
ನೂರಾರು ಸಂಖ್ಯೆಯ ಪ್ರತಿಭಟನಕಾರರು ಒಮ್ಮೆಲೆ ಟೋಲ್‌ಗೆ ಮುತ್ತಿಗೆ ಹಾಕಿ ಎಲ್ಲ ಗೇಟ್‌ಗಳನ್ನು ತಡೆದು, ರಸ್ತೆಯಲ್ಲೇ ಕುಳಿತು ಹೋರಾಟ ತೀವ್ರಗೊಳಿಸಿದಾಗ ಜನಾಕ್ರೋಶವನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಡಬೇಕಾಯಿತು. ರಸ್ತೆ ತಡೆಯನ್ನು ಕೈಬಿಟ್ಟು ಶಾಂತಿಯುತವಾಗಿ ಪ್ರತಿಭಟಿಸುವಂತೆ ಪೊಲೀಸರು ಮತ್ತೆಮತ್ತೆ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ. ಈ ಹಂತದಲ್ಲಿ ಪೊಲೀಸರು ಪ್ರತಿಭಟನ ನಿರತರನ್ನು ವಶಕ್ಕೆ ಪಡೆಯದೆ ಸಂಯಮದಿಂದ ಪರಿಸ್ಥಿತಿ ತಿಳಿ ಗೊಳಿಸಲು ಪ್ರಯತ್ನಿಸಿದ್ದು ಕೈಗೂಡಿತು.

Advertisement

Udayavani is now on Telegram. Click here to join our channel and stay updated with the latest news.

Next