ಬಾಗಲಕೋಟೆ: ಕುರುಬ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಒತ್ತಾಯಿಸಿ ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ಸಂಘಟನೆ ಹಾಗೂ ಜಿಲ್ಲಾ ಕುರುಬರ ಸಂಘದಿಂದ ಹಮ್ಮಿಕೊಂಡಿದ್ದ ಪ್ರತಿಭಟನೆ ಶನಿವಾರ ಹಿಂಸಾರೂಪ ತಾಳಿತು.
ಒಬ್ಬ ಯುವಕ ಬ್ಲೇಡ್ ಮೂಲಕ ಕೈಗೆ ಗಾಯ ಮಾಡಿಕೊಂಡರೆ, ಹಲವರು ಜಿಲ್ಲಾಧಿಕಾರಿ ಕಚೇರಿಗೆ ನುಗ್ಗಿ ದಾಂಧಲೆ ನಡೆಸಿದರು. ಇದಕ್ಕೆ ನೇರ ಪ್ರೇರಣೆ ಎಂಬಂತೆ ಸ್ವಾಮೀಜಿಯೊಬ್ಬರು ಜಿಲ್ಲಾಧಿಕಾರಿ ಕೊಠಡಿಯ ಮೇಜಿನ ಮೇಲೆ ನಿಂತು ಪ್ರಚೋದನಕಾರಿ ಭಾಷಣವನ್ನೂ ಮಾಡಿದರು.
ಸುಮಾರು 2000 ಕುರಿಗಳ ಸಮೇತ 10 ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದ ಬೃಹತ್ ರ್ಯಾಲಿ ಮಧ್ಯಾಹ್ನ ಕಾಳಿದಾಸ ವೃತ್ತದಿಂದ ಆರಂಭಗೊಂಡಿತು. ಅಲ್ಲಿಂದ ಮೆರವಣಿಗೆ ಮೂಲಕ ಡೀಸಿ ಕಚೇರಿಗೆ ತೆರಳಿ ಮನವಿ ಸಲ್ಲಿಸಬೇಕಿತ್ತು. ಕಚೇರಿ ಎದುರಿನ ಮುಖ್ಯ ದ್ವಾರದ ಗೇಟ್ ಬಂದ್ ಮಾಡಿ, ಅಲ್ಲಿಯೇ ಪ್ರತಿಭಟನೆಗೆ ಅವಕಾಶ ಕಲ್ಪಿಸಲಾಗಿತ್ತು. ಸ್ವತಃ ಜಿಲ್ಲಾಧಿಕಾರಿಯೇ ಬಂದು ಮನವಿ ಪಡೆಯಲು ಪಟ್ಟು ಹಿಡಿದ ಪ್ರತಿಭಟನಾಕಾರರು, ಸುಮಾರು ಹೊತ್ತು ಕಾಯ್ದರು. ಬೇರೊಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜಿಲ್ಲಾಧಿಕಾರಿ ಸ್ಥಳಕ್ಕೆ
ಬರುವುದು ತಡವಾಯಿತು.
ಟೇಬಲ್ ಏರಿದ ಸ್ವಾಮೀಜಿ: ಉದ್ರಿಕ್ತ ಗುಂಪೊಂದು ಡೀಸಿ ಕಚೇರಿ ಒಳಗೆ ನುಗ್ಗಿತು. ಕಚೇರಿಯ ಪೀಠೊಪಕರಣ, ಕುರ್ಚಿ, ಗಾಜು, ಜಿಲ್ಲಾಧಿಕಾರಿಗಳ ನಾಮಫಲಕ ಒಡೆಯಿತು. ಡೀಸಿ ಪಿ.ಎ. ಮೇಘಣ್ಣವರ ಮುಖ್ಯ ಚೇಂಬರ್‌ಗೆ ನುಗ್ಗಿ, ಅಲ್ಲಿದ್ದ ಮೇಜಿನ ಮೇಲೆ ಏರಿ ಸ್ವಾಮೀಜಿ ಹಾಗೂ ಕೆಲವರು ಭಾಷಣ ಮಾಡಿದರು.
ಪೊಲೀಸರು ಬಂದು ಉದ್ರಿಕ್ತರನ್ನು ಹೊರ ಹಾಕಲು ಕೆಲವರಿಗೆ ಲಾಠಿ ರುಚಿ ತೋರಿಸಿದರು. ಮನವಿ ಕೊಡಲು ಕುಳಿತಿದ್ದ ಜೆಡಿಎಸ್ ಮುಖಂಡ ಎಚ್. ವಿಶ್ವನಾಥ ಹಾಗೂ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಸ್ವಾಮೀಜಿಯೊಬ್ಬರ ಈ ವರ್ತನೆಗೆ ಅಸಮಾಧಾನ ವ್ಯಕ್ತಪಡಿಸಿದರು. ಮಾಹಿತಿ ತಿಳಿದ ಜಿಲ್ಲಾಧಿಕಾರಿಗಳು, ಕಾರ್ಯಕ್ರಮ ಮೊಟಕುಗೊಳಿಸಿ, ಕಚೇರಿಗೆ ಆಗಮಿಸಿ ಪರಿಶೀಲಿಸಿದರು.