ತಿ.ನರಸೀಪುರ: ಕಬ್ಬು ಕಟಾವು ಹಾಗೂ ಸಾಗಾಣಿಕೆಯಲ್ಲಿ ವಿಳಂಬ ಮಾಡುತ್ತಿರುವ ಸಕ್ಕರೆ ಕಾರ್ಖಾನೆಗಳ ಧೋರಣೆಯನ್ನು ಖಂಡಿಸಿ ತಾಲೂಕು ಕಚೇರಿ ಮುಂಭಾಗ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ರೈತರು ಬುಧವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ತಾಲೂಕು ಕಚೇರಿ ಮಿನಿ ವಿಧಾನಸೌಧದ ಮುಂಭಾಗ ಜಮಾಯಿಸಿದ ಕಬ್ಬು ಬೆಳೆಗಾರರ ಸಂಘದ ಮುಖಂಡರು, ಕಾರ್ಯಕರ್ತರು ಸಕ್ಕರೆ ಕಾರ್ಖಾನೆಗಳ ವಿಳಂಬ ಧೋರಣೆ ಖಂಡಿಸಿ ಧಿಕ್ಕಾರ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ನಡೆಸಿದರು.
ರೈತರಿಗೆ ನಷ್ಟ: ಮಹದೇಶ್ವರ ಹಾಗೂ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಗಳು ಕಬ್ಬು ಕಟಾವು ಮಾಡಲು ಹಾಗೂ ಸಾಗಾಣಿಕೆಯಲ್ಲಿ ವಿಳಂಬ ಮಾಡಿ, ನಷ್ಟವನ್ನುಂಟು ಮಾಡುತ್ತಿದೆ. ಹೀಗಾದರೆ ಬೆಳೆಗಾರರು ಭಾರೀ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ. ಕೈಗೆ ಬಂದ ತುತ್ತು ಬಾಯಿ ಬಾರದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆಡಳಿತ ಮಂಡಳಿ ಚೆಲ್ಲಾಟ: ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿರಗಸೂರು ಶಂಕರ್ ಮಾತನಾಡಿ, ರೈತರು ಬೆಳೆದ ಕಬ್ಬು ಕಟಾವಿಗೆ ಬಂದು ಹಲವು ತಿಂಗಳಾಗಿವೆ. ಆದರೂ ಕುಂತೂರಿನ ಮಹದೇಶ್ವರ ಸಕ್ಕರೆ ಕಾರ್ಖಾನೆ ಹಾಗೂ ಅಳಗಂಜಿಯ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಕಟಾವನ್ನೂ ಮಾಡಿಸದೆ, ಕಟಾವು ಮಾಡಿದ ಕಬ್ಬನ್ನು ಸಕಾಲಕ್ಕೆ ಸಾಗಾಣಿಕೆ ಮಾಡಿಕೊಳ್ಳದೇ ರೈತರೊಂದಿಗೆ ಚೆಲ್ಲಾಟ ಆಡುತ್ತಿದೆ.
ಸ್ಥಳೀಯ ಕಬ್ಬನ್ನು ಬಿಟ್ಟು ಬೇರೆ ಜಿಲ್ಲೆಗಳ ಕಬ್ಬನ್ನು ಸರಬರಾಜು ಮಾಡಿಕೊಂಡು ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಆದ್ದರಿಂದ ಸರ್ಕಾರ ಇತ್ತ ಗಮನಹರಿಸಿ ರೈತರ ಹಿತವನ್ನು ಕಾಪಾಡಬೇಕು. ಕಾರ್ಖಾನೆಗಳು ತ್ವರಿತವಾಗಿ ಕಬ್ಬ ಕಟಾವು ಮಾಡಿಸಿಕೊಂಡು ಬೆಳೆಗಾರರಿಗೆ ಅನುಕೂಲ ಕಲ್ಪಿಸಬೇಕು. ಇಲ್ಲದಿದ್ದರೆ ಹೋರಾಟವನ್ನು ತೀವ್ರಗೊಳಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ಎಂ.ದೇವರಾಜು, ತಾಲೂಕು ಅಧ್ಯಕ್ಷ ಕುರುಬೂರು ಸಿದ್ದೇಶ್, ಪ್ರಧಾನ ಕಾರ್ಯದರ್ಶಿ ಪ್ರಸಾದ್ ನಾಯಕ, ಮುಖಂಡರಾದ ಹೆಗ್ಗೂರು ರಂಗರಾಜು, ಆರಾಧ್ಯ, ಗುರುಸ್ವಾಮಿ, ಕೃಷ್ಣಪ್ಪ, ಜಯಸ್ವಾಮಿ, ಮಹದೇವಸ್ವಾಮಿ, ನಂಜುಂಡಸ್ವಾಮಿ, ಶಿವಾಜಿ, ಬಸವರಾಜು, ಗಿರೀಶ, ರೇವಣ್ಣ, ಹಾಡ್ಯ ರವಿ, ಅರುಣಕುಮಾರ, ನವೀನ, ಅಪ್ಪಣ್ಣ, ವಿರೇಶ, ರವೀಶ್, ನವೀನ, ಪುಟ್ಟಸ್ವಾಮಿ, ಸುರೇಶ, ಕೆ.ಎಂ.ಕುಮಾರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.