ಹುಬ್ಬಳ್ಳಿ: ಬೆಂಬಲಿಗರ ಒತ್ತಡ ಹಾಗೂ ಕಲಘಟಗಿ ತಾಲೂಕಿನಲ್ಲಿನ ಬೆಳವಣಿಗೆ ಕುರಿತು ಪಕ್ಷದ ಹೈಕಮಾಂಡ್ ಗಮನಕ್ಕೆ ತರುವುದಾಗಿ ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ ಅವರು ಕಲಘಟಗಿ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ವಂಚಿತ ಸಿ.ಎಂ. ನಿಂಬಣ್ಣವರ ಬೆಂಬಲಿಗರಿಗೆ ಭರವಸೆ ನೀಡಿದರು.
ಮಂಗಳವಾರ ಸಂಜೆ ಕಲಘಟಗಿಯಿಂದ ಆಗಮಿಸಿದ್ದ ಸಿ.ಎಂ. ನಿಂಬಣ್ಣವರ ನೂರಾರು ಬೆಂಬಲಿಗರು ಶೆಟ್ಟರ ನಿವಾಸದ ಮುಂದೆ ಪ್ರತಿಭಟನೆ ನಡೆಸಿದರು. ಕೆಲವರ ಒಳಒಪ್ಪಂದದ ಷಡ್ಯಂತ್ರದಿಂದ ನಿಂಬಣ್ಣವರಗೆ ಟಿಕೆಟ್ ತಪ್ಪಿದೆ. ಕ್ಷೇತ್ರಕ್ಕೆ ಪರಿಚಯವಿಲ್ಲದವರಿಗೆ ಟಿಕೆಟ್ ನೀಡಲಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಕಾಲಿಗೆ ಬಿದ್ದರು: ನಿಂಬಣ್ಣವರ ಗೆಲುವಿಗಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್‌ನ ಅನೇಕರು ಬಿಜೆಪಿ ಸೇರಿದ್ದು, ಇಂತಹ ಸಂದರ್ಭದಲ್ಲಿ ಅವರಿಗೆ ಟಿಕೆಟ್ ನೀಡದಿರುವುದು ಸರಿಯಲ್ಲ. ನಿಂಬಣ್ಣವರಗೇ ಟಿಕೆಟ್ ನೀಡಬೇಕೆಂದು ಕೆಲವರು ಶೆಟ್ಟರ ಕಾಲಿಗೆ ಬಿದ್ದು ಬೇಡಿಕೊಂಡರು.
ಪ್ರತಿಭಟನಾ ನಿರತರನ್ನು ಸಮಾಧಾನ ಪಡಿಸುವ ಯತ್ನ ಕೈಗೂಡದ ಹಿನ್ನೆಲೆಯಲ್ಲಿ ಪ್ರಮುಖರನ್ನು ಮಾತ್ರ ಚರ್ಚೆಗೆ ಆಹ್ವಾನಿಸಿದ ಶೆಟ್ಟರ, ಎರಡು ದಿನ ಕಾಲಾವಕಾಶ ನೀಡಿ, ಪಕ್ಷದ ವರಿಷ್ಠರ ಗಮನಕ್ಕೆ ತರುವುದಾಗಿ ಹೇಳಿದರು.
ಇದಕ್ಕೆ ಒಪ್ಪದ ಬೆಂಬಲಿಗರು ಒಂದು ದಿನದೊಳಗಾಗಿ ನಿರ್ಧಾರ ಪ್ರಕಟಿಸಬೇಕೆಂದು ಪಟ್ಟು ಹಿಡಿದರು. ಇದಕ್ಕೆ ಶೆಟ್ಟರ ಒಪ್ಪಿದ್ದರಿಂದ ಪ್ರತಿಭಟನೆ ಹಿಂಪಡೆದರು. ಇದಕ್ಕೂ ಮೊದಲು ಪ್ರತಿಭಟನಾಕಾರರು ಸಂಸದ ಪ್ರಹ್ಲಾದ ಜೋಶಿ ಅವರ ನಿವಾಸಕ್ಕೆ ತೆರಳಿ ಪ್ರತಿಭಟನೆ ನಡೆಸಿದ್ದರು.
ಜೋಶಿ ಬೇರೆ ಕಡೆ ಹೋಗಿದ್ದಾರೆಂದು ತಿಳಿದು ನಂತರ ಶೆಟ್ಟರ ನಿವಾಸಕ್ಕೆ ಆಗಮಿಸಿದ್ದರು. ಮುಖಂಡರಾದ ಕೃಷ್ಣ ಕೋಳಾನಟ್ಟಿ, ಎನ್.ಬಿ. ಕುರಿಯವರ, ಮಹಾಂತೇಶ ತಹಶೀಲ್ದಾರ, ಪರಶುರಾಮ ದುಂಡಿ, ಬಿ.ಎಸ್. ಪಾಟೀಲ, ವೈ.ಕೆ. ಹುಲಗೂರ, ಧರ್ಮಣ್ಣ ಕಟ್ಟಿ, ಶಿವಾನಂದ ಅಂಗಡಿ, ಶಿವನಗೌಡ ಹಿರೇಮಠ ಇನ್ನಿತರರಿದ್ದರು.