Advertisement

ಪ್ರತಿಷ್ಠಿತ ಕಟ್ಟಡ ನಿರ್ಮಾಣ ಸಂಸ್ಥೆಗಳ ವಿರುದ್ಧ ಧರಣಿ

06:53 AM May 19, 2019 | Lakshmi GovindaRaj |

ಬೆಂಗಳೂರು: ನಿಗದಿತ ಅವಧಿಯಲ್ಲಿ ಫ್ಲ್ಯಾಟ್‌ಗಳನ್ನು ಹಸ್ತಾಂತರಿಸದೆ, ಹಣವನ್ನೂ ಹಿಂತಿರುಗಿಸದೆ ಸತಾಯಿಸುತ್ತಿರುವ ಕಟ್ಟಡ ನಿರ್ಮಾಣ ಹಾಗೂ ಅಭಿವೃದ್ಧಿ ಸಂಸ್ಥೆಗಳ ವಿರುದ್ಧ ಹತ್ತಾರು ಗ್ರಾಹಕರು ಪ್ರತಿಭಟನೆ ನಡೆಸಿದರು.

Advertisement

ಫೈಟ್‌ ಫಾರ್‌ ರೇರಾ, ನಮ್ಮ ಬೆಂಗಳೂರು ಫೌಂಡೇಷನ್‌, ಫೋರಂ ಫಾರ್‌ ಪೀಪಲ್ಸ್‌ ಕಲೆಕ್ಟಿವ್‌ ಎಫ‌ರ್ಟ್‌ (ಎಫ್ಪಿಸಿಇ) ಸೇರಿದಂತೆ ವಿವಿಧ ಸಂಘಟನೆಗಳು ಟೌನ್‌ ಹಾಲ್‌ ವೃತ್ತದ ಬಳಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪ್ರತಿಷ್ಠಿತ ಬಿಲ್ಡರ್‌ ಸಂಸ್ಥೆಗಳಿಂದ ತೊಂದರೆಗೆ ಒಳಗಾಗಿರುವ ಗ್ರಾಹಕರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಜತೆಗೆ ಗ್ರಾಹಕರಿಗೆ ನ್ಯಾಯ ಒದಗಿಸುವಲ್ಲಿ ವಿಫ‌ಲವಾಗಿರುವ ರೇರಾ ಪ್ರಾಧಿಕಾರ ಹಾಗೂ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಪ್ರತಿಭಟನೆ ಉದ್ದೇಶಿಸಿದ ಮಾತನಾಡಿದ ಎಫ್ಪಿಸಿಇ ಪ್ರಧಾನ ಕಾರ್ಯದರ್ಶಿ ಎಂ.ಎಸ್‌.ಶಂಕರ್‌, ವಿವಿಧ ಬಿಲ್ಡರ್‌ಗಳಿಂದ ಅನ್ಯಾಯಕ್ಕೆ ಒಳಗಾಗುವ ಗ್ರಾಹಕರಿಗಾಗಿ ರೇರಾ ಕಾಯ್ದೆ ಜಾರಿಗೆ ತರಲಾಗಿದೆ.

ಅದರಂತೆ ಕಳೆದ ಎರಡು ವರ್ಷಗಳಲ್ಲಿ 2500 ಗ್ರಾಹಕರು ದೂರು ಸಲ್ಲಿಸಿದರೂ, ಈವರೆಗೆ 800 ಪ್ರಕರಣಗಳನ್ನು ಇತ್ಯರ್ಥಪಡಿಸಿ ತೀರ್ಪು ನೀಡಲಾಗಿದೆ. ಆದರೂ, ಈವರೆಗೆ ಒಬ್ಬರಿಗೂ ಪರಿಹಾರವೂ ಸಿಕ್ಕಲ್ಲ, ತಾವು ಹೂಡಿಕೆ ಮಾಡಿದ ಹಣವೂ ಸಿಕ್ಕಿಲ್ಲ ಎಂದು ಆಕ್ರೋಶ ವ್ಯಕ್ಯಪಡಿಸಿದರು. ಗ್ರಾಹಕರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.

ಏನಿದು ಪ್ರಕರಣ?: ನಗರದ ವಿವಿಧ ಭಾಗಗಳಲ್ಲಿ ಪ್ರತಿಷ್ಠಿತ ಕಟ್ಟಡ ನಿರ್ಮಾಣ ಸಂಸ್ಥೆಗಳಾದ ಮಂತ್ರಿ, ಪುರವಂಕರ, ಎಸ್‌ಜೆಆರ್‌, ಶೋಭಾ, ದಿ ಗ್ರೀನ್‌ ಸೇರಿದಂತೆ ಹಲವು ಸಂಸ್ಥೆಗಳು ಗ್ರಾಹಕರಿಗೆ ನಿಗದಿತ ಅವಧಿಯಲ್ಲಿ ಫ್ಲ್ಯಾಟ್‌ಗಳನ್ನು ಕಟ್ಟಿಕೊಡುವುದಾಗಿ ಹೇಳಿ ಹಣ ಪಡೆದಿವೆ.

Advertisement

ಆದರೆ, ಅವಧಿ ಮುಗಿದರೂ ಫ್ಲ್ಯಾಟ್‌ಗಳನ್ನು ಕಟ್ಟಿಕೊಡದೆ, ಹಣವನ್ನು ಹಿಂತಿರುಗಿಸದೆ ಸತಾಯಿಸುತ್ತಿವೆ. ಇದನ್ನು ಪ್ರಶ್ನಿಸಿ 2500ಕ್ಕೂ ಹೆಚ್ಚಿನ ಗ್ರಾಹಕರು ರೇರಾ ಪ್ರಾಧಿಕಾರಕ್ಕೆ ದೂರು ನೀಡಿದ್ದು, 800 ಪ್ರಕರಣಗಳನ್ನು ಇತ್ಯರ್ಥಪಡಿಸಿರುವ ರೇರಾ ಗ್ರಾಹಕರಿಗೆ ಬಡ್ಡಿ ಸಹಿತ ಹಣ ನೀಡುವಂತೆ ಆದೇಶ ಹೊರಡಿಸಿವೆ. ಆದರೆ, ಈವರೆಗೆ ಯಾವೊಬ್ಬ ಗ್ರಾಹಕರಿಗೂ ಹಣ ಸಿಕ್ಕಿಲ್ಲ.

ಮುಖ್ಯಮಂತ್ರಿಗಳು ನ್ಯಾಯ ಒದಗಿಸಬೇಕು: ಬಿಲ್ಡರ್‌ಗಳಿಂದ ತೊಂದರೆಗೆ ಒಳಗಾಗುವ ಗ್ರಾಹಕರ ಅನುಕೂಲಕ್ಕಾಗಿ ಜಾರಿಗೊಳಿಸಿದ ರೇರಾ ಕಾಯ್ದೆ ಗ್ರಾಹಕರಿಗಿಂತಲೂ ಬಿಲ್ಡರ್‌ಗಳಿಗೆ ಹೆಚ್ಚು ಅನುಕೂಲವಾಗುತ್ತಿದೆ. ಸಾವಿರಾರು ಜನ ಗ್ರಾಹಕರು ಹಣ ಪಾವತಿಸಿ ಹಲವು ವರ್ಷಗಳಿಂದ ಅಲೆಯುವಂತಾಗಿದ್ದು, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರು ಗ್ರಾಹಕರಿಗೆ ನ್ಯಾಯ ಒದಗಿಸಲು ಮುಂದಾಗಬೇಕು ನಮ್ಮ ಬೆಂಗಳೂರು ಫೌಂಡೇಷನ್‌ ನಿರ್ದೇಶಕ ಸುರೇಶ್‌ ಒತ್ತಾಯಿಸಿದರು.

ಮಂತ್ರಿ ವೆಬ್‌ಸಿಟಿ ಯೋಜನೆಯಲ್ಲಿ 92 ಲಕ್ಷ ರೂ. ನೀಡಿ ಫ್ಲ್ಯಾಟ್‌ ಖರೀದಿಸಲಾಗಿದ್ದು, 2019ರ ವೇಳೆಗೆ ಫ್ಲ್ಯಾಟ್‌ ನೀಡುವುದಾಗಿ ತಿಳಿಸಿದ್ದರು. ಆದರೆ, ಈವರೆಗೆ ಫ್ಲ್ಯಾಟ್‌ಗಳನ್ನು ಹಸ್ತಾಂತರಿಸಿಲ್ಲ. ಈ ಬಗ್ಗೆ ರೇರಾ ಪ್ರಾಧಿಕಾರದಲ್ಲಿ ದೂರು ನೀಡಿದ್ದು, ಬಡ್ಡಿಸಹಿತ ಹಣ ಹಿಂತಿರುಗಿಸುವಂತೆ ತೀರ್ಪು ಬಂದಿದೆ. ಆದರೆ, ಈವರೆಗೆ ಸಂಸ್ಥೆಯವರು ಹಣ ನೀಡಿಲ್ಲ.
-ಲೋಕೇಶ್‌, ಮಂತ್ರಿ ವೆಬ್‌ಸಿಟಿ ಗ್ರಾಹಕ

ಎಸ್‌ಜೆಆರ್‌ ಸರ್ಜಾರಪುರ ರಸ್ತೆಯಲ್ಲಿ ನಿರ್ಮಿಸುತ್ತಿರುವ ಅಪಾರ್ಟ್‌ಮೆಂಟ್‌ನಲ್ಲಿ ಫ್ಲ್ಯಾಟ್‌ನ್ನು 2012ರಲ್ಲಿ ಖರೀದಿಸಿದ್ದು, 2017ರ ವೇಳೆಗೆ ಫ್ಲ್ಯಾಟ್‌ ಹಸ್ತಾಂತರ ಮಾಡುವುದಾಗಿ ತಿಳಿಸಿದ್ದರು. ಆದರೆ, ಈವರೆಗೆ ಹಣ ಪಾವತಿಸಿಲ್ಲ. ಅಪಾರ್ಟ್‌ಮೆಂಟ್‌ನಲ್ಲಿ 1200 ಮಂದಿ ಫ್ಲ್ಯಾಟ್‌ಗಳನ್ನು ಖರೀದಿದ್ದು, ಎಲ್ಲರೂ ಸಮಸ್ಯೆ ಅನುಭವಿಸುವಂತಾಗಿದೆ.
-ಬಸವರಾಜು, ಎಸ್‌ಜೆಆರ್‌ ಬಿಲ್ಡರ್ ಗ್ರಾಹಕ

ಸರ್ಕಾರದಿಂದ ನಿರ್ಮಿಸಿರುವ ರೇರಾ ಪ್ರಾಧಿಕಾರಕ್ಕೆ ಕಳೆದ ಎರಡು ವರ್ಷಗಳಲ್ಲಿ ಬಿಲ್ಡರ್‌ಗಳಿಂದ ತೊಂದರೆಗೆ ಒಳಗಾದ 2500 ಮಂದಿ ದೂರು ನೀಡಿದ್ದಾರೆ. ಆ ಪೈಕಿ 800 ಕೇಸುಗಳಲ್ಲಿ ಬಡ್ಡಿಸಹಿತ ಪರಿಹಾರ ನೀಡಬೇಕೆಂದು ಆದೇಶ ಸಹ ನೀಡಿದೆ. ಆದರೆ, ಅದನ್ನು ಅನುಷ್ಠಾನಗೊಳಿಸುವ ಅಧಿಕಾರ ರೇರಾ ಪ್ರಾಧಿಕಾರ ಹೊಂದಿಲ್ಲ. ಆದೇಶಗಳ ಅನುಷ್ಠಾನ ಜವಾಬ್ದಾರಿ ನಗರ ಜಿಲ್ಲಾಧಿಕಾರಿಗಳು ಹೊಂದಿದ್ದು, ಅವರು ಗ್ರಾಹಕರಿಗೆ ನ್ಯಾಯ ಒದಗಿಸಲು ಮುಂದಾಗುತ್ತಿಲ್ಲ.
-ಮೃತ್ಯುಂಜಯ್ಯ, ರೆಡಿಯೆಂಟ್‌ ಸ್ಟ್ರಕ್ಚರ್‌ ಲಿಮಿಟೆಡ್‌ ಗ್ರಾಹಕ

Advertisement

Udayavani is now on Telegram. Click here to join our channel and stay updated with the latest news.

Next