ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಭಾರಿ ಹೆಚ್ಚಳ ಮಾಡಿರುವುದನ್ನು ಖಂಡಿಸಿ ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರು ಸಾಮಾನ್ಯ ಸಭೆಯಲ್ಲಿ ತೀವ್ರ ಪ್ರತಿಭಟನೆ ನಡೆಸಿದ್ದು ಎರಡೆರಡು ಬಾರಿ ಸಾಮಾನ್ಯ ಸಭೆಯಿಂದ ಮೇಯರ್ ಎದ್ದು ಹೋದ ಪ್ರಸಂಗ ಗುರುವಾರ ನಡೆಯಿತು.
ಸಭೆಯ ಆರಂಭದಲ್ಲೇ ಆಸ್ತಿ ತೆರಿಗೆ ಹೆಚ್ಚಳದ ಕುರಿತು ಆಡಳಿತ ಪಕ್ಷದ ಸದಸ್ಯೆ ಸಂಗೀತ ನಾಯಕ್ ಅವರು ಮಾತನಾಡಲು ಮುಂದಾದಾಗ ಕಾಂಗ್ರೆಸ್ ಸದಸ್ಯರು ಮಧ್ಯ ಪ್ರವೇಶಿಸಿ ಭಿತ್ತಿ ಪತ್ರ ಹಿಡಿದು ಮೇಯರ್ ಪೀಠದೆದುರು ತೆರಳಿ ಪ್ರತಿಭಟನೆ ಆರಂಭಿಸಿದರು. ಧಿಕ್ಕಾರ ಘೋಷಣೆಗಳನ್ನು ಕೂಗಿದರು. ಪ್ರತಿಭಟನೆ ತೀವ್ರ ಗೊಳ್ಳುವುದನ್ನು ಅರಿತ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಬೆಲ್ ಬಾರಿಸಿ ಸಭೆಯಿಂದ ಹೊರ ನಡೆದರು. ಕೆಲಹೊತ್ತು ಬಿಜೆಪಿ ಕಾಂಗ್ರೆಸ್ ಸದಸ್ಯರು ಘೋಷಣೆ ಕೂಗಿದರು. ಬಳಿಕ ಬಿಜೆಪಿ ಸದಸ್ಯರು ಸಭೆಯಿಂದ ಹೊರ ನಡೆದರು. ವಿಪಕ್ಷ ಸದಸ್ಯರು ಸದನದಲ್ಲೇ ಉಳಿದರು. ಸಭೆ ಮೊಟಕು, ಮುಂದೂಡಿಕೆ ಅಥವಾ ರದ್ದಾಗಿದೆ ಯೆ ಎಂದು ತಿಳಿಯದೇ ಅಧಿಕಾರಿಗಳೂ ಸದನದಲ್ಲೇ ಉಳಿದರು.
ಸುಮಾರು 20 ನಿಮಿಷಗಳ ಬಳಿಕ ಮತ್ತೆ ಸಭೆ ಆರಂಭವಾಯಿತಾದರೂ ಕಾಂಗ್ರೆಸ್ ಸದಸ್ಯರು ಪಟ್ಟು ಬಿಡಲಿಲ್ಲ. ಪ್ಲೆಕಾರ್ಡ್ ಗಳನ್ನು ಹಿಡಿದು ಮತ್ತೆ ಸದನದ ಬಾವಿಗೆ ಇಳಿದು ತೀವ್ರ ಹೋರಾಟ ನಡೆಸಿದರು. ಸಾಮಾನ್ಯ ಸಭೆಯಲ್ಲಿ ಇದು ತೀವ್ರ ಗದ್ದಲಕ್ಕೆ ಕಾರಣವಾಯಿತು. ಇತ್ತ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದರೆ ಅತ್ತ ಬಿಜೆಪಿ ಸದಸ್ಯರು ಕೂಡ ಸದನದ ಬಾವಿಗಿಳಿದು ರಾಜ್ಯ ಸರ್ಕಾರಕ್ಕೆ ಧಿಕ್ಕಾರ ಘೋಷಣೆಗಳನ್ನು ಕೂಗಿದರು. ಈ ಕಾರಣದಿಂದಾಗಿ ಸದನವನ್ನು ಎರಡನೇ ಬಾರಿಗೆ ಮೊಟಕು ಗೊಳಿಸಿ ಮೇಯರ್ ಹೊರ ನಡೆದರು.
ಇದನ್ನೂ ಓದಿ: ಸಾಕ್ಷ್ಯಾಧಾರಗಳ ಕೊರತೆ… 1993ರ ರೈಲು ಸ್ಫೋಟದ ಪ್ರಮುಖ ಆರೋಪಿ ಅಬ್ದುಲ್ ಕರೀಂ ತುಂಡಾ ಖುಲಾಸೆ