Advertisement

ವಿಪಕ್ಷಗಳ ವರ್ತನೆ ಖಂಡಿಸಿ ಪ್ರತಿಭಟನೆ

11:59 AM Apr 13, 2018 | Team Udayavani |

ದಾವಣಗೆರೆ: ಕಾಂಗ್ರೆಸ್‌ ಹಾಗೂ ಮತ್ತಿತರ ವಿಪಕ್ಷಗಳು ಸಂಸತ್‌ನ ಉಭಯ ಸದನದಲ್ಲಿ ಬಜೆಟ್‌ ಅಧಿವೇಶನದ ವೇಳೆಯನ್ನು ಉದ್ದೇಶಪೂರ್ವಕವಾಗಿ ಹಾಳು ಮಾಡಿವೆ ಎಂದು ಆರೋಪಿಸಿ ಗುರುವಾರ ಸಂಸದ ಜಿ.ಎಂ. ಸಿದ್ದೇಶ್ವರ್‌, ಮಾಜಿ ಸಚಿವ ರವೀಂದ್ರನಾಥ್‌, ಬಿಜೆಪಿ ಮುಖಂಡರು ಜಿಲ್ಲಾಧಿಕಾರಿ ಕಚೇರಿ ಎದುರು ಸಾಂಕೇತಿಕ ಉಪವಾಸ ಸತ್ಯಾಗ್ರಹ ನಡೆಸಿದರು.

Advertisement

ಕಾಂಗ್ರೆಸ್‌ ಮತ್ತಿತರ ವಿರೋಧ ಪಕ್ಷಗಳು ಬಜೆಟ್‌ ಅಧಿವೇಶನ ಸಂದರ್ಭದಲ್ಲಿ ಉದ್ದೇಶಪೂರ್ವಕವಾಗಿಯೇ 23 ದಿನಗಳ ಸಂಸತ್‌ನ ಉಭಯ ಕಲಾಪವನ್ನು ಹಾಳು ಮಾಡಿವೆ. ಕಾಂಗ್ರೆಸ್‌ ಮತ್ತಿತರ ಪ್ರತಿಪಕ್ಷಗಳ ಧೋರಣೆ ಖಂಡನೀಯ ಎಂದು ಘೋಷಣೆ ಕೂಗಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಜಿ.ಎಂ. ಸಿದ್ದೇಶ್ವರ್‌, ಬಜೆಟ್‌ ಅಧಿವೇಶನದಲ್ಲಿ ಸರ್ಕಾರ ಎಲ್ಲ ವಿಚಾರಗಳ ಬಗ್ಗೆ ಮುಕ್ತ ಚರ್ಚೆಗೆ ಸಿದ್ಧವಾಗಿತ್ತು. ಆದರೆ, ಕಾಂಗ್ರೆಸ್‌, ಇತರೆ ಪ್ರತಿಪಕ್ಷಗಳು ಕಲಾಪ ನಡೆಯಲು ಬಿಡಲೇ ಇಲ್ಲ. 23 ದಿನಗಳ ಕಾಲ ನಿರಂತರವಾಗಿ ಕಲಾಪ ನಡೆಯದಂತೆ ಅಡ್ಡಿಪಡಿಸಿದರು. ಕಾಂಗ್ರೆಸ್‌ ಇತರೆ ಪಕ್ಷಗಳ ಮೂಲಕ ಕಲಾಪ ನಡೆಸುವುದಕ್ಕೆ ಅವಕಾಶವೇ ಆಗದಂತೆನೋಡಿಕೊಂಡಿತು. 23 ದಿನಗಳ ಕಲಾಪ ನಡೆಯದೇ ಇದ್ದ ಕಾರಣಕ್ಕೆ ಸಾರ್ವಜನಿಕರ ಹಣ ಸುಖಾ ಸುಮ್ಮನೆ ವ್ಯರ್ಥವಾಯಿತು. ಹಲವಾರು ಮಹತ್ತರ ವಿಷಯಗಳ ಚರ್ಚೆಯೂ ನಡೆಯಲಿಲ್ಲ ಎಂದು ಹೇಳಿದರು.

ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ, ಅನುದಾನ ಕೋರಿ ತೆಲುಗುದೇಶಂ ಪಕ್ಷ ಅವಿಶ್ವಾಸ ನಿಲುವಳಿ ಮಂಡನೆ ಮಾಡಿದ್ದ ಸಂದರ್ಭದಲ್ಲಿ ಗೃಹ ಸಚಿವ ರಾಜನಾಥ್‌ಸಿಂಗ್‌, ಸಂಸದೀಯ ವ್ಯವಹಾರ ಇಲಾಖೆ ಸಚಿವ ಅನಂತ್‌ಕುಮಾರ್‌ ಪ್ರತಿಪಕ್ಷಗಳೊಂದಿಗೆ ಮಾತುಕತೆಗೆ ಸಿದ್ಧ ಎಂದು ತಿಳಿಸಿದ್ದರು. ಎಲ್ಲ ವಿಷಯಗಳ ಚರ್ಚೆಗೆ ಸರ್ಕಾರ ಮುಕ್ತ ಅವಕಾಶ ನೀಡಲಿದೆ. ಕಲಾಪದಲ್ಲಿ ಚರ್ಚೆಗೆ ಸಿದ್ಧ ಎಂದು ತಿಳಿಸಿದ್ದರೂ ಕಾಂಗ್ರೆಸ್‌ ಇತರೆ ಪಕ್ಷಗಳು ಕಲಾಪಕ್ಕೆ ಅಡ್ಡಿ ಉಂಟು ಮಾಡಿದರು ಎಂದು ದೂರಿದರು. 

ಕಾಂಗ್ರೆಸ್‌ ಮತ್ತು ವಿರೋಧ ಪಕ್ಷಗಳು ಲೋಕಸಭೆಯ ಬಜೆಟ್‌ ಅಧಿವೇಶನವನ್ನು ಉದ್ದೇಶಪೂರ್ವಕವಾಗಿ ಹಾಳು ಮಾಡಿವೆ ಎಂಬುದನ್ನು ದೇಶದ ಜನರಿಗೆ ತಿಳಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿಯವರು ದೆಹಲಿಯಲ್ಲಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಧಾರವಾಡದಲ್ಲಿ , ಬೆಂಗಳೂರಿನಲ್ಲಿ ಸಚಿವರಾದ ಅನಂತ್‌ಕುಮಾರ್‌, ಡಿ.ವಿ. ಸದಾನಂದಗೌಡ ಸಾಂಕೇತಿಕ ಉಪವಾಸ ಸತ್ಯಾಗ್ರಹ ನಡೆಸುವರು ಎಂದು ತಿಳಿಸಿದರು.

Advertisement

ರಾಜ್ಯ ಬಿಜೆಪಿ ಸಂಸದರು ಸಹ ವಿವಿಧೆಡೆ ಉಪವಾಸ ಸತ್ಯಾಗ್ರಹ ನಡೆಸುವ ಮೂಲಕ 23 ದಿನಗಳ ಕಾಲ ಸಂಸತ್‌ ಕಲಾಪ ನಡೆಯುವುದೇ ಇರುವುದಕ್ಕೆ ಬಿಜೆಪಿ ಕಾರಣ ಅಲ್ಲ ಎಂಬುದನ್ನು ತಿಳಿಸುತ್ತಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಅವರ ಸೂಚನೆ ಮೇರೆಗೆ 23 ದಿನಗಳ ಕಲಾಪದ ಭತ್ಯೆ ಪಡೆಯುತ್ತಿಲ್ಲ ಎಂದು ತಿಳಿಸಿದರು.

ಮಾಜಿ ಸಚಿವ ಎಸ್‌.ಎ. ರವೀಂದ್ರನಾಥ್‌ ಮಾತನಾಡಿ, ದೇಶದ ಇತಿಹಾಸದಲ್ಲೇ 23 ದಿನಗಳ ಕಾಲ ನಿರಂತರತವಾಗಿ ಸಂಸತ್‌ ಕಲಾಪ ನಡೆಯದಂತೆ ಕಾಂಗ್ರೆಸ್‌ ಮತ್ತು ಇತರೆ ವಿರೋಧ ಪಕ್ಷಗಳು ಅಡ್ಡಿ ಉಂಟು ಮಾಡಿರುವುದು ಯಾವ ಕಾರಣಕ್ಕೂ ಒಳ್ಳೆಯದಲ್ಲ. ದೇಶದ ಸಮಸ್ಯೆ ಬಗ್ಗೆ ಚರ್ಚಿಸಿ, ಚಿಂತನೆ ಮಾಡಿ, ಪರಿಹಾರ ಒದಗಿಸಲೆಂದು ದೇಶದ ಜನರು ಆಯ್ಕೆ ಮಾಡಿರುತ್ತಾರೆ. ಮಹತ್ವದ ವಿಚಾರಗಳ ಚರ್ಚೆಗೆ ಅವಕಾಶ ನೀಡದೇ ಗದ್ದಲ, ಹೋರಾಟ ಮಾಡುವುದು. ಸಂಧಾನಕ್ಕೆ ಒಪ್ಪದೆ ಕಲಾಪಕ್ಕೆ ಅಡ್ಡಿಪಡಿಸುವ ಉದ್ಧಟತನದ ವರ್ತನೆ ಶೋಭೆ ತರುವಂತದ್ದಲ್ಲ. ಇನ್ನು ಮುಂದಾದರೂ ಕಾಂಗ್ರೆಸ್‌ ಮತ್ತು ಇತರೆ ವಿರೋಧ ಪಕ್ಷಗಳು ಕಲಾಪ ಸರಿಯಾಗಿ ನಡೆಯುವಂತೆ ವರ್ತಿಸಲಿ ಎಂದು ತಾಕೀತು ಮಾಡಿದರು.

ವಿಧಾನ ಪರಿಷತ್‌ ಮಾಜಿ ಮುಖ್ಯ ಸಚೇತಕ ಡಾ| ಎ.ಎಚ್‌. ಶಿವಯೋಗಿಸ್ವಾಮಿ, ಮಾಜಿ ಶಾಸಕ ಬಿ.ಪಿ. ಹರೀಶ್‌, ಆಂಧ್ರಪ್ರದೇಶ ಹಿಂದುಳಿದ ವರ್ಗಗಳ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸುರೇಶ್‌ ಕುಮಾರ್‌, ಮಹಾನಗರ ಪಾಲಿಕೆ ಸದಸ್ಯ ಕುಮಾರ್‌, ಬಿಜೆಪಿ ಜಿಲ್ಲಾ ಅಧ್ಯಕ್ಷ ಯಶವಂತರಾವ್‌ ಜಾಧವ್‌, ಎಚ್‌.ಎಸ್‌. ನಾಗರಾಜ್‌, ಎಚ್‌.ಎನ್‌. ಶಿವಕುಮಾರ್‌, ಎಚ್‌. ಆನಂದಪ್ಪ, ವೈ. ಮಲ್ಲೇಶ್‌, ಕೆ.ಎನ್‌. ಓಂಕಾರಪ್ಪ, ಎಚ್‌.ಸಿ. ಜಯಮ್ಮ, ಪ್ರೊ. ಎನ್‌. ಲಿಂಗಣ್ಣ, ಪಿ.ಸಿ. ಶ್ರೀನಿವಾಸ್‌, ಡಿ.ಎಸ್‌. ಶಿವಶಂಕರ್‌, ಎನ್‌. ರಾಜಶೇಖರ್‌, ಟಿಪ್ಪುಸುಲ್ತಾನ್‌, ಹೇಮಂತ್‌ಕುಮಾರ್‌, ನಾಗರತ್ನನಾಯ್ಕ, ಲೋಕಿಕೆರೆ ನಾಗರಾಜ್‌, ಧನುಶ್‌ ರೆಡ್ಡಿ, ರಮೇಶ್‌ನಾಯ್ಕ, ಭಾಗ್ಯ ಪಿಸಾಳೆ, ಪ್ರಭು ಕಲುºರ್ಗಿ, ಗೌತಮ್‌ ಜೈನ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next