ಹೊನ್ನಾಳಿ: ಪ್ರಧಾನಿ ನರೇಂದ್ರ ಮೋದಿಯವರ ಪ್ರಾಮಾಣಿಕತೆ, ದೇಶಪ್ರೇಮ ಹಾಗೂ ಜನರ ಸುರಕ್ಷತೆ ಬಗ್ಗೆ ಇರುವ ಕಾಳಜಿ ಗಮನಿಸಿ ಮೂರನೇ ಅವಧಿಗೂ ಅವರನ್ನೇ ಪ್ರಧಾನಿಯನ್ನಾಗಿಸಲು ಸಹಕರಿಸಬೇಕು ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ ಹೇಳಿದರು.
ಸೋಮವಾರ ತಾಲೂಕಿನ ಹನುಮ ಸಾಗರ, ಎಚ್.ಗೋಪಗೊಂಡನಹಳ್ಳಿ, ಕತ್ತಿಗೆ, ದೊಡ್ಡೇರಹಳ್ಳಿ, ಚಿಕ್ಕೇರಹಳ್ಳಿ ಗ್ರಾಮಗಳಲ್ಲಿ ಮತಯಾಚನೆ ಮಾಡಿ ಅವರು ಮಾತನಾಡಿದರು.
ಕಾಂಗ್ರೆಸ್ ಸರ್ಕಾರ ನೀಡಿರುವ ಗ್ಯಾರಂಟಿ ಯೋಜನೆಗಳು ತಾತ್ಕಾಲಿಕ. ಲೋಕಸಭೆ ಚುನಾವಣೆ ಮುಗಿದರೆ ಎಲ್ಲಾ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುತ್ತಾರೆ. ಆದ್ದರಿಂದ ಆಮೀಷಗಳಿಗೆ ಆಸೆ ಪಡದೆ ಬಿಜೆಪಿ ಬೆಂಬಲಿಸಬೇಕು. ಮೋದಿಯವರು ಮತ್ತೂಮ್ಮೆ ಪ್ರಧಾನಿಯಾದರೆ ದೇಶ ಮತ್ತಷ್ಟು ಉತ್ತುಂಗಕ್ಕೆ ಹೋಗಲಿದೆ. ನೀವು ಕೊಡುವ ಒಂದೊಂದು ಮತವೂ ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಲು ಹಾಗೂ ದೇಶದ ಅಭಿವೃದ್ಧಿಗಾಗಿ ಎಂಬುದನ್ನು ಗಮನದಲ್ಲಿಟ್ಟಕೊಳ್ಳಬೇಕು ಎಂದರು.
ಕಳೆದ ಹತ್ತು ವರ್ಷಗಳಲ್ಲಿ 1070 ಕೋಟಿ ರೂ. ವೆಚ್ಚದಲ್ಲಿ ಸ್ಮಾರ್ಟ್‌ಸಿಟಿ, 20 ಕೋಟಿ ರೂ. ವೆಚ್ಚದಲ್ಲಿ ರೈಲ್ವೆ ನಿಲ್ದಾಣ, ವಂದೇಭಾರತ್ ರೈಲು ಸಂಚಾರ, 51 ಸಾವಿರಕ್ಕೂ ಹೆಚ್ಚು ಪಾಸ್ ಪೋರ್ಟ್ ವಿತರಣೆ, 2888 ಕೋಟಿ ರೂ. ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ, 790 ಕಿಮೀ ಗ್ರಾಮ್ ಸಡಕ್ ರಸ್ತೆಗಳು, 29 ಕೇಂದ್ರಗಳಲ್ಲಿ ಜನೌಷಧ ಕೇಂದ್ರಗಳು, ತುಂಗಾ ನಾಲಾ ಆ ಧುನೀಕರಣ, 13.5 ಕೋಟಿ ರೂ. ವೆಚ್ಚದಲ್ಲಿ ಕೇಂದ್ರಿಯ ವಿದ್ಯಾ ಶಾಲೆ, ಶಾಲಾ ಕಟ್ಟಡ, ಕುಡಿಯುವ ನೀರು, ಆಸ್ಪತ್ರೆ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಸಂಸದ ಜಿ.ಎಂ. ಸಿದ್ದೇಶ್ವರ ಮಾಡಿದ್ದಾರೆ. ಕಳೆದ 50 ವರ್ಷಗಳ ಕಾಲ ಕಾಂಗ್ರೆಸ್ ಆಡಳಿತ ನಡೆಸಿದೆ. ಅಂದು “ಗರೀಬಿ ಹಟಾವೋ’ ಎಂಬ ಘೋಷಣೆ ಕೂಗಲಾಗುತ್ತಿತ್ತು. ಈಗಲೂ ಅದೇ ಘೋಷಣೆ ಮುಂದುವರಿದೆ. ಹಾಗಾದರೆ 50 ವರ್ಷ ಇವರು ಯಾವ ರೀತಿ ಆಡಳಿತ ನಡೆಸಿದರು ಎಂದು ಪ್ರಶ್ನಿಸಿದರು.
ಮಾಜಿ ಸಚಿವ ಮುರುಗೇಶ ನಿರಾಣಿ ಸೊಸೆ ಡಾ| ದಾಕ್ಷಾಯಣಮ್ಮ ಮಾತನಾಡಿ, ಗಾಯಿತ್ರಿ ಸಿದ್ದೇಶ್ವರ ಅವರಿಗೆ ಮೊದಲಿನಿಂದಲೂ ರಾಜಕೀಯ ಅನುಭವ ಇದೆ. ಅಲ್ಲದೆ ಅವರು ರೈತ ಮಹಿಳೆಯೂ ಆಗಿದ್ದಾರೆ. ಆದ್ದರಿಂದ ಅವರಿಗೆ ಮತ ಚಲಾಯಿಸಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ತಾಲೂಕು ಬಿಜೆಪಿ ಅಧ್ಯಕ್ಷ ಜೆ.ಕೆ. ಸುರೇಶ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ತರಗನಹಳ್ಳಿ ರಮೇಶ ಗೌಡ, ಮುಖಂಡರಾದ ಡಿ.ಜಿ. ರಾಜಪ್ಪ, ಅರಕೆರೆ ನಾಗರಾಜ್, ಸಿ.ಆರ್. ಶಿವಾನಂದ, ಕೆ.ಇ.ನಾಗರಾಜ್, ಶಾಂತರಾಜ್ ಪಾಟೀಲ್, ಎ.ಬಿ. ಹನುಮಂತಪ್ಪ, ಕೆ.ವಿ. ಚನ್ನಪ್ಪ, ಎಂ.ಆರ್. ಮಹೇಶ್ ಇದ್ದರು.