ಯಾದಗಿರಿ: ರಾಜ್ಯದಲ್ಲಿ ಬಿಜೆಪಿಗರು ಸಂವಿಧಾನ ವಿರೋಧವಾಗಿರುವ ಚಟುವಟಿಕೆ ಮೂಲಕ ಶಾಸಕರನ್ನು ತಮ್ಮತ್ತ ಸೆಳೆಯುವ ಯತ್ನ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಬಿಜೆಪಿ ನಡೆಸುತ್ತಿರುವ ಆಪರೇಷನ್ ಕಮಲದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಬೈಕ್ ರ್ಯಾಲಿ ಮೂಲಕ ಯಡಿಯೂರಪ್ಪ ವಿರುದ್ಧ ಘೋಷಣೆ ಕೂಗುತ್ತ ನಗರದ ಶಾಸ್ತ್ರೀ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಗುರುಮಠಕಲ್ ಬ್ಲಾಕ್ ಅಧ್ಯಕ್ಷ ಮಹಿಪಾಲರೆಡ್ಡಿ ಹತ್ತಿಕುಣಿ, ರಾಜ್ಯದಲ್ಲಿ ಕಾಂಗ್ರೆಸ್, ಜೆಡಿಎಸ್ ಸರ್ಕಾರ ನೆಮ್ಮದಿಯಿಂದ ನಡೆಯಲು ಬಿಜೆಪಿಗರು ಬಿಡುತ್ತಿಲ್ಲ ಎಂದು ಆರೋಪಿಸಿದರು.
ಕಾಡಾ ಮಾಜಿ ಅಧ್ಯಕ್ಷ ಶ್ರೀನಿವಾಸರೆಡ್ಡಿ ಕಂದಕೂರ ಮಾತನಾಡಿ, ರಾಜ್ಯದ ಯಾವುದೋ ಮೂಲೆಯಲ್ಲಿ ಕೇಳುತ್ತಿದ್ದ ಆಪರೇಷನ್ ತಂತ್ರಗಾರಿಕೆ ನಮ್ಮ ಜಿಲ್ಲೆಗೂ ಕಾಲಿಟ್ಟಿದೆ. ಯಡಿಯೂರಪ್ಪ ಅವರು ಜೆಡಿಎಸ್ ಶಾಸಕ ನಾಗನಗೌಡ ಅವರನ್ನು ಸೆಳೆಯಲು ಅವರ ಪುತ್ರನ ಮೂಲಕ ತಂತ್ರಗಾರಿಕೆ ನಡೆಸಿರುವುದು ಬಯಲಾಗಿದೆ. ಇದರಿಂದ ಅವರ ಅಸಲಿ ಮುಖವಾಡ ರಾಜ್ಯಕ್ಕೆ ಗೊತ್ತಾಗಿದೆ ಎಂದರು.
ಮುಖಂಡ ಚನ್ನಾರೆಡ್ಡಿ ಪಾಟೀಲ ತುನ್ನೂರ, ಚಿದಾನಂದಪ್ಪ ಕಾಳಬೆಳಗುಂದಿ, ಮಂಜುಳಾ ಗೂಳಿ, ರಾಘವೇಂದ್ರ ಮಾನಸಗಲ್, ಮರೆಪ್ಪ ಬಿಳಾØರ, ಶ್ಯಾಮಸನ್ ಮಾಳಿಕೇರಿ, ಸಾಯಬಣ್ಣ ಹೂಗಾರ, ನಾರಾಯಣ ಸಿದ್ಧಾಪುರ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.
ನಗರದ ಹೃದಯ ಭಾಗವಾಗಿರುವ ಶಾಸ್ತ್ರೀ ವೃತ್ತದಲ್ಲಿ ರಸ್ತೆ ಮಧ್ಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಅಡ್ಡಾದಿಡ್ಡಿ ದ್ವಿಚಕ್ರ ವಾಹನ ನಿಲ್ಲಿಸಿದ್ದರಿಂದ ಸಂಚಾರಕ್ಕೆ ತೀವ್ರ ಅಡೆತಡೆಯುಂಟಾಯಿತು. ಕಣ್ಣ ಮುಂದೆ ಸಂಚಾರಿ ನಿಯಮ ಉಲ್ಲಂಘಿಸಿದ್ದರು ಸ್ಥಳದಲ್ಲಿಯೇ ಇದ್ದ ಸಂಚಾರಿ ಪೊಲೀಸರು ಕಂಡು ಕಾಣದಂತಿದ್ದರು.