Advertisement

ತೈಲ ಬೆಲೆ ಏರಿಕೆ ವಿರೋಧಿಸಿ ಪ್ರತಿಭಟನೆ

12:01 PM Jun 12, 2021 | Team Udayavani |

ಚಿತ್ರದುರ್ಗ: ಇಡೀ ದೇಶದ ಜನತೆ ಕೊರೊನಾ ಸಂಕಷ್ಟದಲ್ಲಿ ಸಿಲುಕಿರುವಾಗಿ ಪ್ರಧಾನಿ ನರೇಂದ್ರ ಮೋದಿ ಪೆಟ್ರೋಲ್‌, ಡೀಸೆಲ್‌ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿಸಿ ಅಮಾನವೀಯತೆ ಪ್ರದರ್ಶಿಸುತ್ತಿದ್ದಾರೆ ಎಂದು ಮಾಜಿ ಸಚಿವ ಎಚ್‌.ಆಂಜನೇಯ ಆಕ್ರೋಶ ವ್ಯಕ್ತಪಡಿಸಿದರು.

Advertisement

ರಾಜ್ಯಾದ್ಯಂತೆ ಕಾಂಗ್ರೆಸ್‌ನಿಂದ ಕರೆ ನೀಡಿದ್ದ ಇಂಧನ ಬೆಲೆ ಏರಿಕೆ ಖಂಡಿಸಿ ಪೆಟ್ರೋಲ್‌ ಬಂಕ್‌ಗಳ ಎದುರು ಪ್ರತಿಭಟಿಸುವ ವೇಳೆ ಮಾತನಾಡಿದರು. ಕೊರೊನಾ ಸೋಂಕು ಭೀತಿ, ಲಾಕ್‌ಡೌನ್‌ ಸಂಕಷ್ಟ, ಸಾಲು ಸಾಲು ಸಾವು ದೇಶದಲ್ಲಿ ವಿಜೃಂಭಿಸುತ್ತಿರುವ ಸಂದರ್ಭ ಜನರ ನೆರವಿಗೆ ವಿವಿಧ ರೀತಿಯಲ್ಲಿ ಬರುವ ಹೊಣೆಗಾರಿಕೆ ಸರ್ಕಾರದ್ದಾಗಿದೆ. ಆದರೆ, ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ, ಈ ಸಂದರ್ಭವನ್ನು ತಮ್ಮ ಹಿಟ್ಲರ್‌ ಆಡಳಿತಕ್ಕೆ ಪೂರಕ ಮಾಡಿಕೊಂಡಿದ್ದಾರೆ ಎಂದು ದೂರಿದರು.

ಇಂಧನ ದರ ಏರಿಕೆಯಿಂದ ಕೃಷಿ, ಕೈಗಾರಿಕೆ ಸೇರಿದಂತೆ ಅಗತ್ಯ ವಸ್ತುಗಳ ಉತ್ಪಾದನೆ, ಮಾರಾಟ ಕ್ಷೇತ್ರದ ಮೇಲೆ ಬಹಳಷ್ಟು ದೊಡ್ಡ ಪರಿಣಾಮ ಬೀರಿದೆ. ಇದರಿಂದ ಎಲ್ಲ ಕ್ಷೇತ್ರಗಳಲ್ಲೂ ಬೆಲೆ ಏರಿಕೆಯಾಗಿ ಕೃಷಿಕರು ಕೃಷಿಯಿಂದ ವಿಮುಖರಾಗುವ ಆತಂಕ ಎದುರಾಗಿದೆ ಎಂದರು.

ಹೊಟ್ಟೆಗೆ ಊಟ ಇಲ್ಲದೆ, ದುಡಿಯುವ ಕೈಗೆ ಕೆಲಸವಿಲ್ಲದೆ ಜನ ಜೀವನ ನಡೆಸಲು ಪರದಾಡುತ್ತಿದ್ದಾರೆ. ಮತ್ತೂಂದು ಕಡೆ ಜೀವ ಉಳಿಸಿಕೊಳ್ಳಲು ಇದ್ದಬದ್ದ ಆಸ್ತಿ ಮಾರಾಟ ಮಾಡಿ ಆಸ್ಪತ್ರೆಗೆ ಬಿಲ್‌ ಕಟ್ಟುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಜನಪಯೋಗಿ ಯೋಜನೆ ಘೋಷಿಸುವ ಮಾನವೀಯ ಗುಣ ದೇಶದ ಪ್ರಧಾನಿ ನರೇಂದ್ರ ಮೋದಿಗೆ ಇಲ್ಲದಿರುವುದು ನೋವಿನ ವಿಷಯ ಎಂದರು.

ಈಗಾಗಲೇ ದೇಶದಲ್ಲಿ ಬಹಳಷ್ಟು ಮಂದಿ ಉದ್ಯೋಗ ಇಲ್ಲದಂತಾಗಿದ್ದು, ಇದರಿಂದ ದೇಶದಲ್ಲಿ ನಿರುದ್ಯೋಗ ತಾಂಡಾವವಾಡುತ್ತದೆ ಎಂದು ಎಚ್ಚರಿಸಿದರು. 70 ವರ್ಷ ದೇಶ ಆಳಿದಕಾಂಗ್ರೆಸ್‌ ಪಕ್ಷ ದೇಶಕ್ಕೆ ಏನು ಮಾಡಿಲ್ಲ ಎಂದು ಪದೇ ಪದೇ ಬಿಜೆಪಿ ಸುಳ್ಳು ಆರೋಪ ಮಾಡುತ್ತದೆ. ಆದರೆ, ಕಾಂಗ್ರೆಸ್‌ ಜನರ ಸೇವೆಗಾಗಿ ಸ್ಥಾಪಿಸಿದ್ದ ಬಿಎಸ್‌ಎನ್‌ಎಲ್‌ ಸೇರಿದಂತೆ ಅನೇಕ ಸರ್ಕಾರಿ ಸಂಸ್ಥೆಗಳನ್ನು ಕೇವಲ ಏಳು ವರ್ಷ ಆಡಳಿತದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾರಾಟ ಮಾಡಿದ್ದಾರೆ. ಇನ್ನೂ ಬಹಳಷ್ಟು ಮಾರಾಟ ಮಾಡುವ ಸಂಭವ ಇದೆ ಎಂದು ಹೇಳಿದರು.

Advertisement

ಇವರ ಆಡಳಿತ ವೈಖರಿ, ಅಮಾನವೀಯತೆ ನಡೆಯಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಘನತೆಗೆ ಕುಂದು ಉಂಟು ಆಗುತ್ತಿದೆ. ಕೂಡಲೇ ನರೇಂದ್ರ ಮೋದಿ ಅವರು, ದೇಶದ ಜನರ ಬಳಿ ಬಹಿರಂಗ ಕ್ಷಮೆಯಾಚಿಸಬೇಕು. ಇಂಧನ ಸೇರಿದಂತೆ ಇತರೆ ವಸ್ತುಗಳಬೆಲೆ ಏರಿಕೆ, ಕೃಷಿ, ರೈತ ವಿರೋ ಧಿ ಕಾಯ್ದೆ ಹಿಂಪಡೆಯಬೇಕು. ಇಲ್ಲದಿದ್ದರೆ ಇವೆಲ್ಲ ಯಡವಟ್ಟುಗಳಿಗೆ ನೈತಿಕೆ ಹೊಣೆ ಹೊತ್ತು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಂಜನೇಯ ಆಗ್ರಹಿಸಿದರು.

ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಪ್ರತಿಭಟನೆಯಲ್ಲಿ ಪಾಲ್ಗೊಂಡುಇಂಧನ ಬೆಲೆ ಏರಿಕೆ ನಿಲುವು ಖಂಡಿಸಿದರು. ಪೆಟ್ರೋಲ್‌-ಡೀಸೆಲ್‌ ಬೆಲೆ ಏರಿಸಿ ಜನವಿರೋಧಿ ನೀತಿ ಅನುಸರಿಸುತ್ತಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಸೂಚನೆ ಮೇರೆಗೆ ನಗರದ ವಿವಿಧೆಡೆ ಪೆಟ್ರೋಲ್‌ ಬಂಕ್‌ಗಳ ಎದುರು ಜಿಲ್ಲಾ ಕಾಂಗ್ರೆಸ್‌ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು.

ಜೆಸಿಆರ್‌ ಬಡಾವಣೆಯಲ್ಲಿ ಕೆಪಿಸಿಸಿ ಸದಸ್ಯ ಭೀಮಸಮುದ್ರದ ಜಿ.ಎಸ್‌. ಮಂಜುನಾಥ ಭಾಗವಹಿಸಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಏರಿಕೆಯಾಗಿದೆ ಎನ್ನುವ ನೆಪ ಹೇಳಿಕೊಂಡು ತೆರಿಗೆ ಹೆಚ್ಚಿಸಿ ಪೆಟ್ರೋಲ್‌-ಡೀಸೆಲ್‌ ಬೆಲೆ ಏರಿಸಿರುವುದು ರೈತರು, ಗ್ರಾಹಕರು ಹಾಗೂ ಬಸ್‌ ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕಿದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೆಪಿಸಿಸಿ ಕಾರ್ಮಿಕ ವಿಭಾಗದ ಅಧ್ಯಕ್ಷ ಜಿ.ಎಸ್‌. ಮಂಜುನಾಥ್‌, ನಗರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸೈಯದ್‌ ಅಲ್ಲಾಭಕ್ಷಿ, ಜಿಲ್ಲಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಎ.ಸಾದಿ ಕ್‌ವುಲ್ಲಾ, ಸೈಯದ್‌ ಮೋಹಿದ್ದಿನ್‌, ಜಿಪಂ ಮಾಜಿ ಸದಸ್ಯರಾದ ಬಿ.ಪಿ.ಪ್ರಕಾಶ್‌ಮೂರ್ತಿ, ನರಸಿಂಹರಾಜು, ಲಿಡ್ಕರ್‌ ಅಧ್ಯಕ್ಷ ಓ.ಶಂಕರ್‌, ಅನೀಲ್‌ ಕೋಟಿ, ರವಿಕುಮಾರ್‌, ತಿಪ್ಪೇಸ್ವಾಮಿ ಮತ್ತಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next