ಕೊಪ್ಪಳ: ನರೇಗಾ ಯೋಜನೆಯಡಿ ದಿನಕ್ಕೆ ಎರಡು ಬಾರಿ ಕೆಲಸಗಾರರ ಹಾಜರಾತಿ ಮತ್ತು ಛಾಯಾಚಿತ್ರವನ್ನು ಆನ್‌ಲೈನ್ ಮಾಡುವ ನಿಯಮ ಖಂಡಿಸಿ ಎಐಎಡಬ್ಲ್ಯೂ ಸಂಘಟನೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಗುರುವಾರದಿಂದ ಅಹೋರಾತ್ರಿ ಧರಣಿ ಆರಂಭಿಸಿದೆ.
ನರೇಗಾ ಯೋಜನೆಯಡಿ ಸರ್ಕಾರ ಕೆಲಸಗಾರರ ಹಾಜರಾತಿ ಮತ್ತು ಛಾಯಾಚಿತ್ರವನ್ನು ದಿನಕ್ಕೆ ಎರಡು ಬಾರಿ ಸೆರೆ ಹಿಡಿದು ಅಪ್‌ಲೋಡ್ ಮಾಡಬೇಕೆಂಬ ಆದೇಶ ಮಾಡಿದೆ. ಕೂಲಿಕಾರರ ಮುಖ ಸ್ಪಷ್ಟವಾಗಿ ಕಾಣಬೇಕಾದರೆ ಗುಣಮಟ್ಟದ ಸ್ಮಾರ್ಟ್‌ಫೋನ್ ಬೇಕಾಗುತ್ತದೆ. ನಮ್ಮ ಮೇಟಿಗಳ ಹತ್ತಿರ, ಕೂಲಿಕಾರರ ಹತ್ತಿರ ಅಂತಹ ಸ್ಮಾರ್ಟ್‌ಫೋನ್ ಇಲ್ಲ. ಕೂಲಿಕಾರರು ದಿನದ ನಿಗದಿತ ಕೆಲಸ ಮುಗಿದ ನಂತರ ಸಂಜೆ 5 ಗಂಟೆವರೆಗೆ ಕೆಲಸದ ಸ್ಥಳದಲ್ಲೇ ಇರಬೇಕೆಂಬ ನಿರ್ದೇಶನ ಕೂಲಿಕಾರರಿಗೆ ಕಿರುಕುಳ ಕೊಟ್ಟು ಕೆಲಸಕ್ಕೆ ಬಾರದಂತೆ ಮಾಡುವ ದುರುದ್ದೇಶ ಇದ್ದಂತೆ ಕಾಣುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಗತ್ಯ ವಸ್ತುಗಳ ಬೆಲೆ ಹೆಚ್ಚಳವಾಗಿವೆ. ಸರ್ಕಾರ ಹೆಚ್ಚಿಸಿದ ಕೂಲಿ ದರ ಏರಿಕೆ ಅಮಾನವೀಯವಾಗಿದೆ. ಕೂಲಿಕಾರರಿಗೆ ದಿನಕ್ಕೆ 600 ರೂ. ಕೊಡಬೇಕು. ನರೇಗಾಕ್ಕೆ ಸರ್ಕಾರ ಅನುದಾನ ಕಡಿತ ಮಾಡಿದೆ. ಈ ಹಿಂದಿನ ವರ್ಷದ ಬಜೆಟ್‌ನಲ್ಲಿ ರೂ. 98,000 ಕೋಟಿ ಅನುದಾನ ನೀಡಲಾಗಿತ್ತು. ಈ ವರ್ಷದ ಬಜೆಟ್‌ನಲ್ಲಿ ಕೇವಲ ರೂ. 73,000 ಕೋಟಿ ರೂ. ಒದಗಿಸಲಾಗಿದೆ. ಈ ಹಣ ಯಾವುದಕ್ಕೂ ಸಾಲದು. ಯೋಜನೆಯಡಿ ಕೆಲಸಕ್ಕೆ ಬೇಡಿಕೆ ಹೆಚ್ಚಾಗಿದೆ. ಹೆಚ್ಚೆಚ್ಚು ಕುಟುಂಬಗಳಿಗೆ ಕೆಲಸ ಒದಗಿಸಲು ಸರ್ಕಾರ ಹೆಚ್ಚೆಚ್ಚು ಅನುದಾನ ನೀಡಬೇಕು. ಪ್ರತಿ ಕುಟುಂಬಕ್ಕೆ ಕನಿಷ್ಟ ವರ್ಷದಲ್ಲಿ 200 ದಿನ ಕೆಲಸ ಕೊಡಬೇಕು ಎಂದು ಒತ್ತಾಯಿಸಿದರು.
ಕೆಲಸಗಾರರಿಗೆ ಅನೇಕ ಕಡೆಗಳಲ್ಲಿ ವೇತನ ಪಾವತಿ ಬಾಕಿಯಿದೆ. ಕೊರೊನಾ ಸಮಯದಲ್ಲಿ ಯಾವುದೇ ಪರಿಹಾರ ಸಿಕ್ಕಿಲ್ಲ. ಕೂಲಿಕಾರರಿಗೆ ಬಾಕಿ ಇರುವ ವೇತನ, ಕೊರೊನಾ ಪರಿಹಾರ ಹಾಗೂ ಮೇಟಿಗಳಿಗೆ ಬಾಕಿ ಪ್ರೋತ್ಸಾಹ ಧನವನ್ನು ಕೂಡಲೇ ಪಾವತಿ ಮಾಡಬೇಕು. ಬೇಸಿಗೆ ದಿನಗಳಲ್ಲಿ ಕೆಲಸದ ಪ್ರಮಾಣವನ್ನು ಕಡಿಮೆ ಮಾಡಬೇಕು. ಮೇಟಿಗಳು ಕಡ್ಡಾಯವಾಗಿ 8ನೇ ತರಗತಿಯಿಂದ 10ನೇ ತರಗತಿ ಪಾಸ್ ಆಗಿರಬೇಕೆಂಬ ಅಸಂಬದ್ಧ ಷರತ್ತನ್ನು ಕೈಬಿಡಬೇಕು. ಓದಲು ಬರೆಯಲು ಬರುವವರಿಗೂ ಮೇಟಿಗಳಾಗಿ ನೇಮಿಸಿಕೊಳ್ಳಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿ ಧರಣಿ ಆರಂಭಿಸಲಾಯಿತು.
ಪ್ರತಿಭಟನೆಯಲ್ಲಿ ನಿತ್ಯಾನಂದ ಸ್ವಾಮಿ, ಎಚ್. ಗಂಗಾಧರಯ್ಯ ಸ್ವಾಮಿ, ಬಸವರಾಜ ಮರಕುಂಬಿ, ಸುಂಕಪ್ಪ ಗದಗ, ಹುಸೇನಪ್ಪ ಕೆ., ರಮೇಶ ಬಡಗಿ, ಮರಿನಾಗಪ್ಪ, ಬಾಲಪ್ಪ, ಯಲ್ಲಪ್ಪ, ಅಂದಪ್ಪ ಬರದೂರ ಸೇರಿದಂತೆ ಇತರರು ಪಾಲ್ಗೊಂಡಿದ್ದರು.