ಮೈಸೂರು: ಟಿಪ್ಪು ಸುಲ್ತಾನನಂತೆ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನೂ ಹೊಡೆದು ಹಾಕಬೇಕು ಎಂಬ ಹೇಳಿಕೆ ನೀಡಿದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ವಿರುದ್ಧ ಶನಿವಾರ ಇಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ಇಲ್ಲಿನ ಸ್ವಾಭಿಮಾನಿ ಹೋರಾಟ ಸಮಿತಿ ಯಿಂದ ನಡೆದ ಈ ಪ್ರತಿಭಟನೆಯಲ್ಲಿ ನನ್ನನ್ನೂ ಹತ್ಯೆ ಮಾಡಿ ಎಂಬ ಭಿತ್ತಿಪತ್ರವನ್ನು ಪ್ರತಿಭಟನಾಕಾರರು ಪ್ರದರ್ಶಿಸಿದರು.
ಸಚಿವ ಅಶ್ವತ್ಥನಾರಾಯಣ ಅವರ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಮೈಸೂರಿನ ವಿವಿಧ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಕೋಟೆ ಆಂಜನೇಯ ಸ್ವಾಮಿ ದೇವಾಲಯ ಬಳಿಯಿಂದ ಹೊರಟ ಪ್ರತಿಭಟನಾ ಮೆರವಣಿಗೆ ದೊಡ್ಡಗಡಿಯಾರ ವೃತ್ತ, ಗಾಂಧಿ ಚೌಕ, ಸಯ್ನಾಜಿರಾವ್ ರಸ್ತೆ, ದೇವರಾಜ ಅರಸು ರಸ್ತೆ, ಜೆಎಲ್‌ಬಿ ರಸ್ತೆ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿ ತಲುಪಿತು.
ರಂಗಕರ್ಮಿ ಬಸವಲಿಂಗಯ್ಯ ಮಾತನಾಡಿ, ಸರ್ವಜನಾಂಗದ ಶಾಂತಿಯ ತೋಟಕ್ಕೆ ಬೆಂಕಿ ಹಚ್ಚುವ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆ. ಜನರ ಮುಂದೆ ಯಾವುದೇ ಕಾರ್ಯಕ್ರಮ ನೀಡಲು ಸಾಧ್ಯ ಆಗದಿದ್ದಾಗ ಈ ರೀತಿ ಮಾತುಗಳನ್ನು ಆಡುತ್ತಾರೆ. ತಾತ್ವಿಕವಾಗಿ ಪ್ರತಿರೋಧ ವ್ಯಕ್ತಪಡಿಸಲು ಸಾಧ್ಯವಿಲ್ಲ. ಆದ್ದರಿಂದ ದೈಹಿಕವಾಗಿ ಮುಗಿಸುವಂತೆ ಹೇಳುತ್ತಾರೆ. ಸಿದ್ದರಾಮಯ್ಯ ಎಲ್ಲಾ ವರ್ಗದ ಜನರನ್ನು ಸೆಳೆಯುತ್ತಿದ್ದಾರೆ. ಆದ್ದರಿಂದ ಅವರಿಗೆ ಬೆದರಿಕೆ ಇದೆ. ಯಾವ ನಾಯಕರು ಭ್ರಷ್ಟಾಚಾರದ ವಿರುದ್ಧ ಮಾತಾಡುತ್ತಾರೋ ಅವರನ್ನು ದೈಹಿಕವಾಗಿ ಮುಗಿಸಿ ಎಂದು ಹೇಳುತ್ತಾರೆ. ಇದೇ ರೀತಿ ಕಲ್ಬುರ್ಗಿ, ಗೌರಿ ಲಂಕೇಶ್ ಅವರನ್ನು ಮುಗಿಸಿದರು. ಇವರನ್ನು ಯಾರು ಕೊಂದರು ಎಂದು ಗೊತ್ತಿದ್ದರೂ ಸುಮ್ಮನಿದ್ದಾರೆ. ಅವರ ಚಿಂತನೆಗಳನ್ನು ಕೊಲ್ಲಲು ಇವರಿಂದ ಸಾಧ್ಯವಿಲ್ಲ ಎಂದರು.
ಈ ಸಂದರ್ಭದಲ್ಲಿ ಕುರುಬರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಮಾತನಾಡಿ, ಬಿಜೆಪಿ ಪಕ್ಷಕ್ಕೆ ಕಿವಿ, ಮೂಗು, ಗಂಟಲು ಇಲ್ಲ, ನಮ್ಮ ಪ್ರತಿಭಟನೆ ಅವರಿಗೆ ಅರ್ಥ ಆಗಲ್ಲ. ಸಚಿವ ಅಶ್ವತ್ಥನಾರಾಯಣ ಅವರನ್ನು ಮುಂದಿನ 10 ದಿನಗಳಲ್ಲಿ ಸಚಿವ ಸಂಪುಟದಿಂದ ಕೈಬಿಡದಿ ದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದರು.
ಪತ್ರಕರ್ತ ಟಿ.ಗುರುರಾಜ್, ಮಾವಿನಹಳ್ಳಿ ಸಿದ್ದೇಗೌಡ ಮಾತನಾಡಿದರು.