ಬೀದರ: ಸ್ಥಳೀಯ ಶಾಸಕ ರಹೀಮ್ ಖಾನ್ ಅವರು ಅಧಿಕಾರದ ದುರುಪಯೋಗ ಮಾಡಿಕೊಂಡು ಸಾರ್ವಜನಿಕ ಆಸ್ತಿ ಅತಿಕ್ರಮಣ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಪಕ್ಷದ ಜಿಲ್ಲಾಧ್ಯಕ್ಷ ಶೈಲೇಂದ್ರ ಬೆಲ್ದಾಳೆ ನೇತೃತ್ವದಲ್ಲಿ ನಗರದ ಅಂಬೇಡ್ಕರ ವೃತ್ತದಲ್ಲಿ ಸೇರಿದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ವರೆಗೆ ರ್ಯಾಲಿ ನಡೆಸಿ ನಂತರ ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದರು. ಈ ವೇಳೆ ಶಾಸಕ ರಹೀಮ್ ಭಾವಚಿತ್ರ ಸುಟ್ಟು ಆಕ್ರೋಶ ವ್ಯಕ್ತಪಡಿಸಲಾಯಿತು.
ಶಾಸಕ ರಹೀಮ್ ಮತ್ತು ಅವರ ಕುಟುಂಬ ಸದಸ್ಯರು ಸೇರಿ ಸರ್ವೇ ನಂ. 362, 200, 201ರ ಮೇಲೆ ರೂಹಿ ನರ್ಸಿಂಗ್ ಕಾಲೇಜು, ಇಂಡಿಯನ್ ಡಿ.ಇಡಿ ಕಾಲೇಜುಗಳನ್ನು ಅನಧಿಕೃತವಾಗಿ ನಿರ್ಮಿಸಿರುವುದು ಬೆಳಕಿಗೆ ಬಂದಿದೆ. ಇದು ಸರ್ಕಾರದ ಆಸ್ತಿಯಾಗಿದ್ದು, ಶಾಸಕರು ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ದೂರಲಾಗಿದೆ.
ಚಿದ್ರಿಯಲ್ಲಿ ನಡೆಯುತ್ತಿರುವ ರೂಹಿ ಕಾಲೇಜು ಕಟ್ಟಡ ಕಾನೂನು ಬಾಹಿರವಾಗಿದ್ದು, ಒಂದು ಕಾಲೇಜಿನ ಕಟ್ಟಡದಲ್ಲಿ ಸುಮಾರು 5 ಕಾಲೇಜುಗಳನ್ನು ಅನಧೀಕೃತವಾಗಿ ನಡೆಸಲಾಗುತ್ತಿದೆ. ಈ ಅನಧಿಕೃತ ಕೆಲಸ ಮತ್ತು ಜಾಗ ಒತ್ತುವರಿ ಕುರಿತಂತೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ತಾಲೂಕಿಗೆ ಒಂದು ಸಾವಿರ ಕೋಟಿ ರೂ. ಅನುದಾನ ತಂದಿದ್ದೇನೆಂದು ಶಾಸಕರು ಹೇಳುತ್ತಿದ್ದು, ಈ ಹಣವನ್ನು ಯಾವ ಕಾರಣಕ್ಕಾಗಿ ಖರ್ಚು ಮಾಡಿದ್ದಾರೆಂದು ಸ್ಪಷ್ಟ ಮಾಹಿತಿ ನೀಡಬೇಕು. ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಸುಳ್ಳು ಮಾತನಾಡುತ್ತಿದ್ದಾರೆ. 24×7 ಕುಡಿಯುವ ನೀರಿನ ಯೋಜನೆ ಅಪೂರ್ಣದಿಂದಾಗಿ ನಗರದ ಜನ ಧೂಳಿನಿಂದ ಸಂಕಷ್ಟ ಎದುರಿಸುತ್ತಿದ್ದರೂ ಶಾಸಕರಿಗೆ ಕಾಣಿಸುತ್ತಿಲ್ಲ. ಜಿಲ್ಲಾ ಕಚೇರಿಗಳ ಸಂಕಿರ್ಣ ಇನ್ನೂ ನನೆಗುದಿಗೆ ಬಿದ್ದಿದೆ. ಕೇಂದ್ರದ ಹಣವನ್ನು ಸಹ ನಾವು ತಂದಿದ್ದೇವೆ ಎಂದು ಕಾಂಗ್ರೆಸ್ ಹೇಳಿಕೊಳ್ಳುವ ಮೂಲಕ ಜನರ ದಿಕ್ಕು ತಪ್ಪಿಸುತ್ತಿದೆ ಎಂದು ಆರೋಪಿಸಲಾಗಿದೆ. ಪ್ರಮುಖರಾದ ವಿಜಯಕುಮಾರ ಪಾಟೀಲ ಗಾದಗಿ, ರಮೇಶ ಲೌಟೆ, ಶಿವಪುತ್ರ ವೈದ್ಯ, ಕಿರಣ ಪಾಲಂ ಮತ್ತು ಜಗದೀಶ ಬಿರಾದಾರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.