ಕಲಬುರಗಿ: ಅಕ್ರಮ ಕಸಾಯಿ ಖಾನೆ ಬಂದ್ ಮಾಡಬೇಕು. ಪ್ರಾಣಿ ಬಲಿ ನಿಷೇಧ ಕಾಯ್ದೆ ಪರಿಣಾಮಕಾರಿಯಾಗಿ ಜಾರಿಗೆ ತರಬೇಕು ಹಾಗೂ ಕುರ್ಬಾನಿ ನಿಲ್ಲಿಸಬೇಕು ಎಂದು ಒತ್ತಾಯಿಸಿ ಹಿಂದೂ ಜಾಗರಣಾ ವೇದಿಕೆ ಹಾಗೂ ಶ್ರೀರಾಮಸೇನೆ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿದರು. ಸರ್ದಾರ ಪಟೇಲ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಮೆರವಣಿಗೆಯಲ್ಲಿ ತೆರಳಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ನಗರದಲ್ಲಿ ಹಲವಾರು ಅಕ್ರಮ ಕಸಾಯಿಖಾನೆಗಳು ನಡೆಯುತ್ತಿವೆ. ಗೋಹತ್ಯೆ ನಿಷೇಧ ಕಾಯ್ದೆ ಉಲ್ಲಂಘಿಸಿ ಗೋಹತ್ಯೆ ನಡೆಯುತ್ತಿದೆ. ಆದ್ದರಿಂದ ಕೂಡಲೇ ಕಸಾಯಿಖಾನೆಗಳನ್ನು ಮುಚ್ಚಿಸಬೇಕು ಎಂದು ಒತ್ತಾಯಿಸಿದರು. ನಗರದಲ್ಲಿ ನೂರಾರು ಅಕ್ರಮ ಕಸಾಯಿಖಾನೆಗಳಿವೆ. ಇವುಗಳ ತ್ಯಾಜ್ಯ ಸಂಗ್ರಹಕ್ಕೆ ಪಾಲಿಕೆ ಯಾವ ಕ್ರಮ ಕೈಗೊಂಡಿಲ್ಲ. ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯಲಾಗುತ್ತಿದೆ. ಇದರಿಂದ ಪರಿಸರ ಮಾಲಿನ್ಯವಾಗುತ್ತಿದೆ ಎಂದು ಆರೋಪಿಸಿದರು. ಬಕ್ರೀದ್ ಹಿನ್ನೆಲೆಯಲ್ಲಿ ಕಸಾಯಿಖಾನೆಗಳ ಸ್ವತ್ಛತೆಗಾಗಿ ಮಹಾಪೌರರು 10 ಲಕ್ಷ ರೂ. ಅನುದಾನ ನೀಡುತ್ತಿರುವುದು ಕಾನೂನು ಬಾಹಿರ. ಯಾವುದೇ ಕಾರಣಕ್ಕೆ ಅನುದಾನ ನೀಡಬಾರದು ಎಂದು ಆಗ್ರಹಿಸಿದರು. ಸಂತೋಷ ಬೆನಕನಳ್ಳಿ, ಮಹೇಶ ಚವ್ಹಾಣ, ಕಿರಣ ಖೇಳಗಾಂವಕರ, ಶಿವರಾಜ ಸಂಗೋಳಗಿ, ಅಪ್ಪು ಗುಬ್ಯಾಡ್, ಎಂ.ಎಸ್ .ಪಾಟೀಲ ನರಿಬೋಳ, ಮಹೇಶ ಜೇವರ್ಗಿ, ಪ್ರವೀಣ ನಾಯಕ,ಮನೋಹರ ಗೌಳಿ ಪ್ರತಿಭಟನೆಯಲ್ಲಿದ್ದರು.