Advertisement

ಬಕ್ರೀದ್ ಹಬ್ಬದ ಹಿನ್ನೆಲೆ: ತೀರ್ಥಹಳ್ಳಿ ಡಿವೈಎಸ್ಪಿ ಹೇಳಿದ್ದೇನು?  

05:24 PM Jun 14, 2024 | Shreeram Nayak |

ತೀರ್ಥಹಳ್ಳಿ : ಹೊರ ರಾಜ್ಯಗಳಿಂದ ಕೆಲಸಕ್ಕಾಗಿ ಇಲ್ಲಿಗೆ ಹಲವು ಕಾರ್ಮಿಕರು ಅಥವಾ ಇನ್ನಿತರರು ಆಗಮಿಸಿದ್ದಾರೆ. ಹೊರಗಡೆಯಿಂದ ಬರುವವರಿಗೆ ಬಾಡಿಗೆ ನೀಡುವ ಅಥವಾ ಲೀಸ್ ನೀಡುವ ಮೊದಲು ಕೆಲವೊಂದು ಮಾಹಿತಿಗಳನ್ನು ಪಡೆಯಬೇಕು. ಬಾಡಿಗೆದಾರರ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪಾಸ್‌ಪೋರ್ಟ್‌‌‌‌ ಸೇರಿ ಇತರ ಮಾಹಿತಿ ಪಡೆಯುವುದು ಕಡ್ಡಾಯವಾಗಿರುತ್ತದೆ ಎಂದು ತೀರ್ಥಹಳ್ಳಿ ಡಿವೈಎಸ್ಪಿ ಗಜಾನನ ವಾಮನ ಸುತಾರ ತಿಳಿಸಿದರು.

Advertisement

ಶುಕ್ರವಾರ ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಬಾಡಿಗೆದಾರರು ಮಾಹಿತಿ ಕೊಡಲು ಒಪ್ಪದಿದ್ದಲ್ಲಿ ಅಥವಾ ಅವರ ಬಗ್ಗೆ ಅನುಮಾನ ಬಂದಲ್ಲಿ ತಕ್ಷಣವೇ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ನಾವು ಬಾಡಿಗೆದಾರರನ್ನು ಕರೆಸಿ ಮಾಹಿತಿ ಕಲೆ ಹಾಕಿ, ಕ್ರಿಮಿನಲ್ ಕೇಸ್ ಇದೆಯೋ ಇಲ್ಲವೋ ಎಂಬುದನ್ನು ತಿಳಿಸುತ್ತೇವೆ. ಮನೆ ಬಾಡಿಗೆ, ಲೀಸ್ ಅಥವಾ ಕೆಲಸಕ್ಕೆ ನೇಮಕ ಮಾಡಿಕೊಳ್ಳುವ ಸಂದರ್ಭದಲ್ಲಿ ಅವರ ಪೂರ್ವಪರ ತಿಳಿದುಕೊಳ್ಳಿ. ಅವರ ಜೊತೆಗೆ ಅಗ್ರಿಮೆಂಟ್ ಮಾಡಿಕೊಳ್ಳಿ. ಒಂದು ವೇಳೆ ಕ್ರೈಂ ಮಾಡಿ ಹೋದರೆ ತನಿಖೆ ನಡೆಸಲು ಅವರ ಜಾಡನ್ನು ಹಿಡಿಯಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಸಾಮಾಜಿಕ ಜಾಲತಾಣಗಳ ಮೇಲೆ ಕಣ್ಗಾವಲು!
ಸೋಮವಾರ ಬಕ್ರೀದ್ ಹಬ್ಬ ಇದೆ. ಪ್ರತಿಯೊಂದು ಕಡೆ ಶಾಂತಿ ಸುವ್ಯವಸ್ಥೆ ಬಗ್ಗೆ ಎಲ್ಲಾ ಕ್ರಮಗಳನ್ನು ಅನುಸರಿಸುತ್ತಿದ್ದೇವೆ.ಚೆಕ್ ಪೋಸ್ಟ್ ಹಾಕಿರುವುದು, ರಾತ್ರಿ ಗಸ್ತು ಜಾಸ್ತಿ ಮಾಡಿದ್ದೇವೆ.ಈ ಹಬ್ಬವನ್ನು ಶಾಂತಿಯುತವಾಗಿ ಸೌಹಾರ್ದತೆಯಿಂದ ಆಚರಿಸಬೇಕು. ಶಾಂತಿ ಕದಡುವ ಕೆಲಸ ಮಾಡಬಾರದು. ಈಗಾಗಲೇ ಸಾಮಾಜಿಕ ಜಾಲತಾಣಗಳ ಮೇಲೆ ಕಣ್ಗಾವಲು ಇಡಲಾಗಿದೆ. ಕೋಮು ಪ್ರಚೋದನೆಗೆ ಒಳಗಾಗುವ ಮಾಹಿತಿಯನ್ನು ಎಲ್ಲೂ ಶೇರ್ ಮಾಡುವ ಹಾಗಿಲ್ಲ ಜಾತಿ ಧರ್ಮದ ಬಗ್ಗೆ ದ್ವೇಷ ಪೂರಿತ ಮೆಸೇಜ್ ಹಾಕುವ ಕೆಲಸ ಮಾಡುವುದನ್ನು ಮಾಡಿದರೆ ಅವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುತ್ತದೆ.ಏನಾದರು ಮಾಹಿತಿ ಇದ್ದರೆ ಪೊಲೀಸ್ ಠಾಣೆಗೆ ತಿಳಿಸಬೇಕು ನೈತಿಕ ಪೊಲೀಸ್ ಗಿರಿ ಮಾಡುವ ಹಾಗಿಲ್ಲ ಎಂದು ತಿಳಿಸಿದರು.

ಶಾಲಾ ವಾಹನಗಳ ಬಗ್ಗೆ ಎಚ್ಚರಿಕೆ!
ಶಾಲೆಗಳು ಈಗಾಗಲೇ ಆರಂಭವಾಗಿವೆ. ಖಾಸಗಿ ಬಸ್, ಖಾಸಗಿ ವಾಹನ ಮತ್ತು ಶಾಲಾ ಬಸ್ ಗಳಲ್ಲಿ ಸಾಮರ್ಥ್ಯಕ್ಕಿಂತ ಜಾಸ್ತಿ ವಿದ್ಯಾರ್ಥಿಗಳನ್ನು ಹಾಕಿ ಕರೆದುಕೊಂಡು ಹೋಗುತ್ತಿರುವ ಘಟನೆ ನಡೆಯುತ್ತಿದೆ.ಇದರ ಬಗ್ಗೆ ಶಾಲಾ ಶಿಕ್ಷಣ ಸಂಸ್ಥೆಗಳ ಜೊತೆ ಮಾತನಾಡುತ್ತೇವೆ. ಶಾಲಾ ವಾಹನಗಳಲ್ಲಿ ವಿದ್ಯಾರ್ಥಿಗಳ ಸುರಕ್ಷಿತ ಮುಖ್ಯವಾಗಿರುತ್ತದೆ. ನಿಯಮ ಬಾಹಿರ ಮಾಡುವ ವಾಹನಗಳ ಮೇಲೆ ಕೇಸ್ ದಾಖಲು ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಆನ್ ಲೈನ್ ವಂಚನೆ ಬಗ್ಗೆ ಏನು ಹೇಳಿದ್ರು?
ಇತ್ತೀಚಿನ ದಿನಗಳಲ್ಲಿ ಇಂಟರ್ನೆಟ್ ಅನ್ನು ಸರಿಯಾಗಿ ಉಪಯೋಗ ಮಾಡುತ್ತಿಲ್ಲ. ಫೋಟೋ ಶೇರ್ ಮಾಡುವುದು, ಫೋಟೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ.

Advertisement

ಮೊದಲು ಕರೆ ಮಾಡಿ ಓಟಿಪಿ ಕೇಳುತ್ತಿದ್ದರು. ಆದರೆ ಈಗ ಆಪ್ ಅಥವಾ ಲಿಂಕ್ ಕಳಿಸಿ ಬ್ಯಾಂಕ್ ಖಾತೆ ಲಾಕ್ ಆಗಿದೆ ಸರಿ ಮಾಡುತ್ತೇವೆ ಎನ್ನುತ್ತಾರೆ. ನೀವು ಆಪ್ ಅಥವಾ ಲಿಂಕ್ ಓಪನ್ ಮಾಡಿದರೆ ಬ್ಯಾಂಕ್ ಖಾತೆಯಿಂದ ಹಣ ಹೋಗುತ್ತದೆ. ಈ ರೀತಿ ಹಲವು ಸ್ಕ್ಯಾಮ್ ಗಳು ಹೆಚ್ಚಾಗಿವೆ. ಇದರಿಂದ ಪ್ರತಿಯೊಬ್ಬರು ಎಚ್ಚರಿಕೆ ವಹಿಸಬೇಕು ಎಂದರು.

ತೀರ್ಥಹಳ್ಳಿಯನ್ನು ಗಾಂಜಾ ಮುಕ್ತ ಮಾಡುವುದು ಗುರಿ
ಶಿವಮೊಗ್ಗ ಮತ್ತು ತೀರ್ಥಹಳ್ಳಿಯನ್ನು ಗಾಂಜಾ ಮುಕ್ತ ಮಾಡಬೇಕು ಎಂಬುದು ನಮ್ಮ ಪೊಲೀಸರ ಆದ್ಯ ಕರ್ತವ್ಯವಾಗಿದೆ.ಮೊನ್ನೆ ಕೋಣಂದೂರಿನಲ್ಲಿ ಅಡಿಕೆ ತೋಟದಲ್ಲಿ ಬೆಳೆದ 10 ಕೆಜಿ ಗಾಂಜಾವನ್ನು ಸೀಜ್ ಮಾಡಿ ಹಾಗೂ ಓರ್ವನನ್ನು ವಶಕ್ಕೆ ಪಡೆದಿದ್ದೇವೆ. ಗಾಂಜಾ ಬೆಳೆಯುವುದು, ಮಾರಾಟ ಮಾಡುವುದು ಎಲ್ಲವೂ ಅಪರಾಧವಾಗಿದೆ. ಗಾಂಜಾ ಸೇವನೆ ಮಾಡಿದವರನ್ನು ಟೆಸ್ಟ್ ಮಾಡಿ ಪಾಸಿಟಿವ್ ಬಂದರೆ NDPS ಅಡಿಯಲ್ಲಿ ಪ್ರಕರಣ ದಾಖಲು ಮಾಡುತ್ತೇವೆ. 2023-24 ರಲ್ಲಿ ಇಲ್ಲಿಯವರೆಗೆ 21 ಪ್ರಕರಣ ದಾಖಲಾಗಿದೆ ಎಂದರು.

ಗಾಂಜಾ ಎನ್ನುವುದು ಒಂದು ನರಕ. ಅದರಿಂದ ಎಷ್ಟರ ಮಟ್ಟಿಗೆ ದೂರ ಇರುತ್ತೀವಿ ಅಷ್ಟು ಒಳ್ಳೆಯದು. ಮನುಷ್ಯನ ಮಾನಸಿಕ ಹಾಗೂ ದೈಹಿಕವಾಗಿ ಅವನತಿಗೆ ಕಾರಣವಾಗುತ್ತದೆ. ಪ್ರತಿಯೊಂದು ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಇದರ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ. ಇದರ ಬಗ್ಗೆ ಮುಂದೆಯೂ ಕೂಡ ಅರಿವು ಮೂಡಿಸುವ ಕೆಲಸ ಆಗುತ್ತದೆ.ಈ ವಿಚಾರದಲ್ಲಿ ಮಾಧ್ಯಮದವರು ಹಾಗೂ ಸಾರ್ವಜನಿಕರ ಸಹಾಯ ಬೇಕಿದೆ. ತೀರ್ಥಹಳ್ಳಿ ವ್ಯಾಪ್ತಿಯಲ್ಲಿ ಎಲ್ಲಾದರೂ ಗಾಂಜಾ ವಿಷಯಕ್ಕೆ ಸಂಬಂಧಪಟ್ಟಂತೆ ಮಾಹಿತಿ ಇದ್ದರೆ ( ಗಾಂಜಾ ಬೆಳೆದಿರುವುದು ಅಥವಾ ಮಾರಾಟ ಮಾಡುವುದು ) ನನಗೆ ಅಥವಾ ಪೊಲೀಸ್ ಠಾಣೆಗೆ ಮಾಹಿತಿ ಕೊಡಿ. ಮಾಹಿತಿ ಕೊಟ್ಟವರ ಹೆಸರನ್ನು ಗೌಪ್ಯವಾಗಿ ಇಡುತ್ತೇವೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next