Advertisement

Bakrid: ಅನಧಿಕೃತ ಜಾನುವಾರು ವಧೆ, ಸಾಗಣೆ ಮಾಡದಂತೆ ಜಿಲ್ಲಾಧಿಕಾರಿ ಸೂಚನೆ

11:21 PM Jun 15, 2024 | Team Udayavani |

ಉಡುಪಿ: ಬಕ್ರೀದ್‌ ಹಬ್ಬದ ಆಚರಣೆಯ ಸಂದರ್ಭದಲ್ಲಿ ಸರಕಾರದ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಅನಧಿಕೃತವಾಗಿ ಜಾನುವಾರುಗಳ ವಧೆ ಹಾಗೂ ಸಾಗಾಣಿಕೆ ಮಾಡುವುದು ಕಂಡುಬಂದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ ಹೇಳಿದರು.

Advertisement

ಜಿಲ್ಲಾಧಿಕಾರಿ ಕಚೇರಿಯಲ್ಲಿ ಬಕ್ರೀದ್‌ ಹಬ್ಬದ ಸಂದರ್ಭ ಅನಧಿಕೃತವಾಗಿ ಜಾನುವಾರುಗಳ ವಧೆ ಹಾಗೂ ಸಾಗಾಣಿಕೆಯನ್ನು ತಡೆಗಟ್ಟುವ ಕುರಿತು ಜಿಲ್ಲೆಯಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಅನಧಿಕೃತವಾಗಿ ಜಾನುವಾರುಗಳ ವಧೆ ಹಾಗೂ ಸಾಗಾಟ ಕಂಡುಬಂದಲ್ಲಿ ಹತ್ತಿರದ ಪೋಲೀಸ್‌ ಠಾಣೆಯ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಅಧಿಕೃತ ಜಾನುವಾರು ಸಾಗಾಣಿಕೆ ಮಾಡಬೇಕಾದ ಸಂದರ್ಭದಲ್ಲಿ ಪಶುಸಂಗೋಪನ ಇಲಾಖೆ ನಿಗದಿಪಡಿಸಿದ ನಮೂನೆಯಲ್ಲಿ ಅನುಮತಿ ಹಾಗೂ ಪೋಲಿಸ್‌ ಅನುಮತಿ ಪಡೆಯುವುದು ಕಡ್ಡಾಯವಾಗಿದೆ ಎಂದರು.

ಅನಧಿಕೃತ ಸಾಗಾಣಿಕೆಯಲ್ಲಿ ವಶಪಡಿಸಿಕೊಂಡ ಜಾನುವಾರುಗಳನ್ನು ಸಂರಕ್ಷಿಸಿ, ಹತ್ತಿರದ ಗೋಶಾಲೆಗೆ ಬಿಡಲು ಸಮೀಪದ ಗೋಶಾಲೆಗಳನ್ನು ಗುರುತಿಸುವಂತೆ ಹಾಗೂ ವಶಪಡಿಸಿಕೊಂಡ ಜಾನುವಾರುಗಳಿಗೆ ಅಗತ್ಯವಿರುವ ಚಿಕಿತ್ಸೆಯನ್ನು ನೀಡಲು ಪಶುವೈದ್ಯಾಧಿಕಾರಿಗಳು ಸನ್ನದ್ಧರಾಗಿರಬೇಕು. ಜಾನುವಾರುಗಳಿಗೆ ಅಗತ್ಯವಿರುವ ಮೇವು ಮತ್ತು ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಬಕ್ರೀದ್‌ ಹಬ್ಬ ಶಾಂತಿ ಮತ್ತು ಸೌಹಾರ್ದಯುತವಾಗಿ ನಡೆಯಬೇಕು. ತಾಲೂಕು ಮಟ್ಟದಲ್ಲಿ ತಹಶೀಲ್ದಾರ್‌ಗಳು ಶಾಂತಿ ಸಭೆಗಳನ್ನು ನಡೆಸಬೇಕು. ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಹಾಗೂ ನಗರ ಸ್ಥಳೀಯ ಸಂಸ್ಥೆ, ಗ್ರಾ.ಪಂ. ವ್ಯಾಪ್ತಿಯಲ್ಲಿಯೂ ಅಗತ್ಯ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.

Advertisement

ಜಿಲ್ಲಾ ಪೋಲಿಸ್‌ ಅಧೀಕ್ಷಕ ಡಾ| ಅರುಣ್‌ ಕೆ. ಮಾತನಾಡಿ, ಜಿಲ್ಲಾದ್ಯಂತ ತಪಾಸಣಾ ಕೇಂದ್ರಗಳು ದಿನಪೂರ್ತಿ ಕಾರ್ಯನಿರ್ವಹಿಸಲಿದೆ. ಜಾನುವಾರು ಸಾಗಾಣಿಕೆ ಮಾಡುವ ಕುರಿತು ಹೆಚ್ಚಿನ ನಿಗಾ ವಹಿಸಲಾಗುತ್ತಿದೆ. ಕಾನೂನು ಉಲ್ಲಂಘನೆ ಮಾಡಿ ಜಾನುವಾರು ಸಾಗಾಟ ಮಾಡಿದಲ್ಲಿ ಕ್ರಮ ಕೈಗೊಳ್ಳಲಾಗುದು ಎಂದರು.
ಎಎಸ್‌ಪಿ ಸಿದ್ದಲಿಂಗಪ್ಪ, ಪೌರಾಯುಕ್ತ ರಾಯಪ್ಪ, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next