Advertisement

27ರಂದು ಎಚ್‌ಕೆಆರ್‌ಡಿಬಿ ಅಧ್ಯಕ್ಷರ ನಿವಾಸದ ಎದುರು ಪ್ರತಿಭಟನೆ

11:19 AM Feb 05, 2018 | Team Udayavani |

ಕಲಬುರಗಿ: ಹೈದ್ರಾಬಾದ ಕರ್ನಾಟಕದ ಖಾಸಗಿ ಶಾಲಾ, ಕಾಲೇಜುಗಳಿಗೆ 371ನೇ (ಜೆ) ಅಡಿ ಅನುದಾನ ನೀಡಬೇಕು ಎಂದು ಆಗ್ರಹಿಸಿ ಫೆ. 27ರಂದು ಎಚ್‌ಕೆಆರ್‌ಡಿಬಿ ಅಧ್ಯಕ್ಷರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಅವರ ನಿವಾಸದ ಎದುರು ಧರಣಿ ಸತ್ಯಾಗ್ರಹ ನಡೆಸಲು ನಿರ್ಧರಿಸಲಾಗಿದೆ ಎಂದು ಹೈ.ಕ.ಖಾಸಗಿ ಶಾಲಾ ಕಾಲೇಜುಗಳ ಒಕ್ಕೂಟದ ಅಧ್ಯಕ್ಷ ಎಂ.ಬಿ.ಅಂಬಲಗಿ ಹೇಳಿದರು.

Advertisement

ನಗರದ ಹಳೆ ಜೇವರ್ಗಿ ರಸ್ತೆಯಲ್ಲಿನ ಗುರುಪಾದಲಿಂಗೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 371ನೇ(ಜೆ) ಅಡಿ ಅನುದಾನರಹಿತ ಶಾಲಾ ಕಾಲೇಜುಗಳಿಗೆ ವೇತಾನುದಾನ ಹಾಗೂ ಮೂಲಭೂತ ಸೌಕರ್ಯಗಳಿಗಾಗಿ ಧನಸಹಾಯ ನೀಡುವ ಅವಕಾಶ ಕಲ್ಪಿಸಿರುವುದರಿಂದ ಅದನ್ನು ಜಾರಿಗೆ ತರಬೇಕು ಎಂದು ಹೋರಾಟ ಮಾಡಿದ ಪರಿಣಾಮ 371ನೇ(ಜೆ) ಕಲಂನ ವಿಶೇಷ ಕೋಶದ ಜಂಟಿ ಕಾರ್ಯದರ್ಶಿಗಳು ಹೈ.ಕ.ಪ್ರದೇಶಾಭಿವೃದ್ದಿ ಮಂಡಳಿಗೆ ಸೂಚಿಸಿದರು ಎಂದು ಹೇಳಿದರು.

ವೇತಾನುದಾನ ಹಾಗೂ ಮೂಲಭೂತ ಸೌಕರ್ಯಗಳಾದ ಶುದ್ಧ ಕುಡಿಯುವ ನೀರು, ಶೌಚಾಲಯ, ಆಟದ ಮೈದಾನ,
ಪೀಠೊಪಕರಣ ಮುಂತಾದವುಗಳಿಗಾಗಿ ಖಾಸಗಿ ಸಂಸ್ಥೆಗಳು ನಡೆಸುವ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ಸಂಖ್ಯೆಗಳಿಗೆ ಅನುಗುಣವಾಗಿ ಅಥವಾ ಇತರೆ ಮಾನದಂಡದ ಪ್ರಕಾಶ ಕನಿಷ್ಠ 5ರಿಂದ 50 ಲಕ್ಷ ರೂ.ವರೆಗೆ ಧನಸಹಾಯ ನೀಡುವಂತೆ ಒತ್ತಾಯಿಸಿ ಎಚ್‌ಕೆಆರ್‌ಡಿಬಿ ಕಚೇರಿಗೆ ಬೀಗ ಹಾಕಿ ಪ್ರತಿಭಟಿಸಿದಾಗ ಅಂದಿನ ಕಾರ್ಯದರ್ಶಿಯವರು ಸ್ಪಂದಿಸಿ ವೇತಾನುದಾನ ಹಾಗೂ ಹಣ ಬಿಡುಗಡೆ ಸರ್ಕಾರವೇ ತೀರ್ಮಾನಿಸುತ್ತದೆ ಎಂದು ಉತ್ತರಿಸಿದ್ದರು.

ನಂತರ ಮಂಡಳಿ ಕಾರ್ಯದರ್ಶಿ ಹರ್ಷ ಗುಪ್ತಾ ಅವರನ್ನು ಭೇಟಿಯಾಗಿ ಬೇಡಿಕೆ ಬಗ್ಗೆ ವಿವರಿಸಿದಾಗ 371ನೇ(ಜೆ) ಕುರಿತು ರೂಪಿಸಿರುವ ನಿಯಮಗಳಿಗನುಸಾರವಾಗಿ ಕಾರ್ಯ ನಿರ್ವಹಿಸುವುದಾಗಿ ತಿಳಿಸಿರುವುದು ಸ್ವಾಗತಾರ್ಹ ಎಂದು ಹೇಳಿದರು. 

ಪ್ರಸಕ್ತ ಸಾಲಿನಿಂದ ವೇತಾನುದಾನ ಹಾಗೂ ಮೂಲಭೂತ ಸೌಕರ್ಯಗಳಿಗಾಗಿ ಹಣ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಅನೇಕ ಬಾರಿ ಮನವಿ ಸಲ್ಲಿಸಲಾಗಿದೆ. ಪ್ರಸಕ್ತ ವರ್ಷದಿಂದ ಜಾರಿಗೊಳಿಸುವಂತೆ ಆಗ್ರಹಿಸಿ ನಡೆಯುವ ಧರಣಿಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.  ಡಾ| ಪರಮೇಶ್ವರ ಬನಸೂಡೆ, ಚನ್ನವೀರಪ್ಪ ಸಲಗರ, ಸಿದ್ರಾಮಪ್ಪ ಡಬಾಲೆ, ಗುಂಡು ಬಡಿಗೇರ, ಅಪ್ಪಾರಾವ ಪಾಟೀಲ, ಗೌರಿ ಎಸ್‌., ಗುರುಪಾದಪ್ಪ ಬಿರಾದಾರ, ಅಡಿವೆಪ್ಪ ಚಿಂಚೋಳಿ, ಸಂಗನಗೌಡ ಪಾಟೀಲ, ಅಪ್ಪಣ್ಣ ಕುಲಕರ್ಣಿ, ಸಾಯಬಣ್ಣ ಪುರ್ಲೆ, ನೀತಿನ ಕೋಸಗಿ, ನಾಗರಾಜ ಚಿತ್ತಾಪುರ, ಸುನೀಲ ಸೇಡಂ, ಬಾಬುರಾವ ಸುಳ್ಳದ, ಮಲ್ಲಿಕಾರ್ಜುನ ಅಲ್ಲಾಪುರ, ಅರುಣಕುಮಾರ ಪೂಚುಲ್‌, ಬಸವರಾಜ ಹಡಪದ, ಶಾಂತಯ್ಯ ಹಿರೇಮಠ ಸಭೆಯಲ್ಲಿದ್ದರು.  

Advertisement
Advertisement

Udayavani is now on Telegram. Click here to join our channel and stay updated with the latest news.

Next