Advertisement
ತಾಪಂ ಸಭಾಂಗಣದಲ್ಲಿ ಮಲ್ಲಿಕಾ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸಾಮಾನ್ಯ ಸಭೆಯಲ್ಲಿ ಅಭಿವೃದ್ಧಿ ವಿಚಾರದ ಬಗ್ಗೆ ಚರ್ಚೆ ನಡೆಯುತ್ತಿದ್ದಾಗ ಸದಸ್ಯ ಚಂದ್ರಶೇಖರ್ ಏರಿದ ಧ್ವನಿಯಲ್ಲಿ ತಮ್ಮ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಿದರು.
Related Articles
Advertisement
ಅಧ್ಯಕ್ಷೆ ಮಲ್ಲಿಕಾ ಮಾತನಾಡಿ, ನಾನು ಕಾರ್ಯನಿರ್ವಹಣಾಧಿಕಾರಿಗಳನ್ನು ಅಭಿವೃದ್ಧಿ ವಿಚಾರ ಮತ್ತು ಕಚೇರಿಗೆ ಸರಿಯಾಗಿ ಹಾಜರಾಗದೆ ಇರುವ ಬಗ್ಗೆ ಕೇಳಿದರೆ ನನ್ನನ್ನು ಪ್ರಶ್ನಿಸಿದ ಮೊದಲ ಮಹಿಳೆ ನೀವೇ ಎಂದು ಕೇವಲವಾಗಿ ಮಾತನಾಡುತ್ತಾರೆ. ಚುನಾಯಿತ ಸದಸ್ಯರ ಬಗ್ಗೆ ಗೌರವವಿಲ್ಲದ ಇವರ ಅವಶ್ಯಕತೆ ನಮಗಿಲ್ಲ. ಆದ್ದರಿಂದ ಅವರ ವಿರುದ್ಧ ಜಿಲ್ಲಾಧಿಕಾರಿ ಮತ್ತು ಜಿಪಂ ಸಿಇಒಗೆ ದೂರು ಕೊಡೋಣ ಎಂದರು.
ಕ್ಷಮೆಗೆ ಆಗ್ರಹ: ಈ ವೇಳೆ ಮಧ್ಯ ಪ್ರವೇಶಿಸಿದ ಸದಸ್ಯೆಯರಾದ ಸುನೀತಾ, ಮಮತಾ ಮತ್ತು ಶೋಭಾ ಅವರು, ಲಕ್ಷ್ಮಿಮೋಹನ್ ವಿರುದ್ಧ ಮೇಲಧಿಕಾರಿಗಳಿಗೆ ದೂರು ನೀಡುವುದು ನಂತರದ ವಿಚಾರ. ಈಗ ಅವರು ಸದಸ್ಯ ಚಂದ್ರಶೇಖರ್ ಸೇರಿದಂತೆ ಸಭೆಯ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದಾಗ ಇದಕ್ಕೆ ಬೆಂಬಲ ಸೂಚಿಸಿದ ಶ್ರೀನಿವಾಸಪ್ರಸಾದ್ ಕ್ಷಮೆ ಕೇಳದಿದ್ದರೆ ದಿಗ್ಬಂಧನ ಹಾಕುವುದಾಗಿ ಎಚ್ಚರಿಕೆ ನೀಡಿದರು.
ವಾದ ವಿವಾದಗಳು ನಡೆಯುತ್ತಿದ್ದಾಗ ಸಭೆಯಿಂದ ಏಕಾ ಏಕಿ ಹೊರ ನಡೆದ ತಾಪಂ ಕಾರ್ಯನಿರ್ವಹಣಾಧಿಕಾರಿ ಅಧ್ಯಕ್ಷೆ ಸೇರಿದಂತೆ ಸದಸ್ಯರು ಕರೆದರೂ ಕಿವಿಗೊಡದೆ ಸಭಾಂಗಣದಿಂದ ಹೊರ ಬಂದು ಕಾರು ಹತ್ತಿ ಹೊರಟೇ ಹೋದರು.
ಪ್ರತಿಭಟನೆ: ಅಧ್ಯಕ್ಷರು ಮತ್ತು ಸಭೆಯ ಅನುಮತಿ ಪಡೆಯದೆ ಕಾರ್ಯನಿರ್ವಹಣಾಧಿಕಾರಿ ಹೊರ ಹೋಗಿದ್ದರಿಂದ ಆಕ್ರೋಶಗೊಂಡ ಅಧ್ಯಕ್ಷೆ, ಉಪಾಧ್ಯಕ್ಷೆ ಮತ್ತು ಎಲ್ಲಾ ಸದಸ್ಯರು ತಾಲೂಕು ಪಂಚಾಯ್ತಿ ಕಚೇರಿಯ ಮುಂದೆ ವಿರುದ್ಧ ಪ್ರತಿಭಟನೆ ನಡೆಸಿ ಮಹಿಳೆಯರಿಗೆ ಅಗೌರವ ತೋರಿ ಸದಸ್ಯರ ಹಕ್ಕುಗಳಿಗೆ ಚ್ಯುತಿ ತರುತ್ತಿರುವ ಲಕ್ಷ್ಮೀಮೋಹನ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದರ ಜತೆಗೆ ಬೇರೆಡೆಗೆ ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿದರು.
ದೂರು: ತಾಪಂ ಸದಸ್ಯರಾದ ಎಚ್.ಟಿ.ಮಂಜುನಾಥ್, ಶ್ರೀನಿವಾಸಪ್ರಸಾದ್, ಕುಮಾರ್, ಕೆ.ಎಲ್.ಲೋಕೇಶ್, ಬಿ.ಎಂ.ಮಹದೇವ್ ಮಾತನಾಡಿ, ಕಾರ್ಯನಿರ್ವಹಣಾಧಿಕಾರಿಯ ದುರ್ವರ್ತನೆ ಮತ್ತು ಕರ್ತವ್ಯ ಲೋಪದ ಬಗ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವರು, ಕ್ಷೇತ್ರದ ಶಾಸಕರೂ ಆದ ರೇಷ್ಮೆ ಮತ್ತು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಹಾಗೂ ಸಂಬಂಧಿತ ಎಲ್ಲಾ ಮೇಲಧಿಕಾರಿಗಳಿಗೂ ಲಿಖೀತ ದೂರು ನೀಡುವುದಾಗಿ ತಿಳಿಸಿದರು.
ಪ್ರತಿಭಟನೆ ವೇಳೆ ಅಧ್ಯಕ್ಷೆ ಮಲ್ಲಿಕಾ ಮತ್ತು ಸದಸ್ಯ ಎಚ್.ಟಿ.ಮಂಜುನಾಥ್ ಘಟನೆಯ ಬಗ್ಗೆ ಜಿಲ್ಲಾಧಿಕಾರಿಗಳು ಮತ್ತು ಜಿಪಂ ಸಿಇಒಗೆ ಘಟನೆಯ ಬಗ್ಗೆ ದೂರವಾಣಿಯಲ್ಲಿ ಮಾಹಿತಿ ನೀಡಿದರು.ಉಪಾಧ್ಯಕ್ಷೆ ಸಾಕಮ್ಮಸಣ್ಣಪ್ಪ, ಸದಸ್ಯರಾದ ಜಯರಾಮೇಗೌಡ, ಜಿ.ಎಸ್.ಮಂಜುನಾಥ್, ವೀಣಾ, ಶೋಭಾ, ಸಿದ್ದಮ್ಮ, ರತ್ನಮ್ಮ, ಪುಟ್ಟಗೌರಮ್ಮ, ನಾಗರಾಜು, ನೀಲಮಣಿ, ಲಲಿತಾ, ಕೆ.ಪಿ.ಯೋಗೇಶ್ ಇತರರಿದ್ದರು. ತಾಲೂಕಿನ ಅಭಿವೃದ್ಧಿಗೆ ಚುನಾಯಿತ ಸದಸ್ಯರೊಡನೆ ಕೆಲಸ ಮಾಡದೆ ನಿರಂತರವಾಗಿ ಸಬೂಬು ಹೇಳಿಕೊಂಡು ಕಾಲ ಕಳೆಯುತ್ತಿರುವ ಇಂತಹ ಅಧಿಕಾರಿಯಿಂದ ಜನರ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಿಲ್ಲ. ಆದ್ದರಿಂದ ಕೂಡಲೇ ಕೆ.ಆರ್.ನಗರ ತಾಲೂಕು ಪಂಚಾಯ್ತಿಗೆ ಬೇರೆ ಕಾರ್ಯನಿರ್ವಹಣಾಧಿಕಾರಿಗಳನ್ನು ನೇಮಕ ಮಾಡಬೇಕು.
-ಮಲ್ಲಿಕಾ, ತಾಪಂ ಅಧ್ಯಕ್ಷೆ