ಮಂಗಳೂರು/ ಉಡುಪಿ: ಫಾಸ್ಟ್ಯಾಗ್ ಕಡ್ಡಾಯ ಬಳಿಕ ಕರಾವಳಿಯ ಎರಡು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಇರುವ ಆರು ಟೋಲ್ ಗೇಟ್‌ಗಳಲ್ಲಿ ಸ್ಥಳೀಯರ ಸಂಚಾರಕ್ಕೆ ಇರುವ ವಿನಾಯಿತಿಗಳನ್ನು ರದ್ದು ಪಡಿಸಿರುವುದರ ವಿರುದ್ಧ ಹೋರಾಟ ತೀವ್ರಗೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಬಿರುಸಾಗುವ ಲಕ್ಷಣಗಳಿವೆ.
ಶುಲ್ಕ ವಿನಾಯಿತಿ ಸ್ಥಗಿತ ವಿರೋಧಿಸಿ ಸ್ಥಳೀಯರು ಸಾಸ್ತಾನ ಟೋಲ್‌ನಲ್ಲಿ ಸಭೆ ಸೇರಿ ಚರ್ಚೆ ನಡೆಸಿದರು. ಫೆ. 22ರಂದು ಕೋಟ ಜಿ.ಪಂ. ವ್ಯಾಪ್ತಿಯ ಎಲ್ಲ ಅಂಗಡಿಗಳನ್ನು ಮುಚ್ಚಿ ಶಾಂತಿಯುತ ಪ್ರತಿಭಟನೆ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಹೆಜಮಾಡಿಯಲ್ಲೂ ಪ್ರತಿ ಭಟನೆ ನಡೆದಿದೆ. ಬಂಟ್ವಾಳದಲ್ಲಿ ನಡೆದ ಸಭೆಯಲ್ಲಿ ಆಕ್ರೋಶ ವ್ಯಕ್ತವಾಯಿತು.
ಸಾಸ್ತಾನದಲ್ಲಿ ಹೋರಾಟಗಾರರು ಮೌನ ಮೆರವಣಿಗೆಯಲ್ಲಿ ಸಾಗಿ ಟೋಲ್‌ಗೆ ಮುತ್ತಿಗೆ ಹಾಕಲು ಯತ್ನಿಸಿದರು. ಪೊಲೀಸರು ತಡೆದು ಎಚ್ಚರಿಕೆ ನೀಡಿದರು. ಜಿಲ್ಲಾ ಮಟ್ಟದ ದಿಶಾ ಸಭೆಯವರೆಗೆ ವಿನಾಯಿತಿ ನೀಡುತ್ತೇವೆ. ಬಳಿಕ ಸಭೆಯ ನಿರ್ಣಯದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ಭರವಸೆ ನೀಡಿದರು. ಜನರು ಸಮಸ್ಯೆ ಅನುಭವಿಸುತ್ತಿದ್ದರೂ ಜನಪ್ರತಿನಿಧಿಗಳು ಸ್ಪಂದಿಸದಿರುವ ಬಗ್ಗೆ ಆಕ್ರೋಶ ವ್ಯಕ್ತವಾಯಿತು.
ತಲಪಾಡಿ: ಇಂದು ಪ್ರತಿಭಟನೆ
ತಲಪಾಡಿಯಲ್ಲಿ ಗುರುವಾರ ಪ್ರತಿಭಟನೆ ನಡೆಯಲಿದೆ. ತಲಪಾಡಿ ಟೋಲ್‌ನಲ್ಲಿ ಬುಧವಾರವೂ ವಾಹನ ಚಾಲಕರು -ಟೋಲ್ ಸಿಬಂದಿ ನಡುವೆ ಮಾತಿನ ಚಕಮಕಿ ನಡೆದಿದೆ.