ಕಲಬುರಗಿ: ಜಿಲ್ಲೆಯಲ್ಲಿ ಡೆಂಘೀ ಜ್ವರ ಹೆಚ್ಚಾಗಿ ಕಾಡುತ್ತಿದ್ದು, ಜನರು ಜೀವ ಕಳೆದುಕೊಳ್ಳುತ್ತಿದ್ದಾರೆ. ಸರಕಾರಿ ಆಸ್ಪತ್ರೆಗಳಲ್ಲಿ ಸರಿಯಾದ ಚಿಕಿತ್ಸೆಗೆ ಆಗ್ರಹಿಸಿ ಸರಕಾರ ಆಸ್ಪತ್ರೆ ಮುಂದೆ ಸೋಮವಾರ ಮಧ್ಯಾಹ್ನ ಪ್ರತಿಭಟನೆ ಮಾಡುತ್ತಿದ್ದ ಬೀಯಿಂಗ್ ಹ್ಯೂಮನ್ ಸಂಘಟನೆಯ 8 ಜನ ಕಾರ್ಯಕರ್ತರನ್ನು ಬಂಧಿಸಿ ಬಿಡುಗಡೆ ಮಾಡಲಾಯಿತು.
ಜಿಲ್ಲೆಯ ನಗರ ಮತ್ತು ಪಟ್ಟಣ ಪ್ರದೇಶವಲ್ಲದೆ, ಗ್ರಾಮೀಣ ಪ್ರದೇಶದಲ್ಲಿ ಡೆಂಘೀ ಹಾವಳಿ ತುಂಬಾ ಜೋರಾಗಿದೆ. ಅದಕ್ಕೆ
ಸರಿಯಾದ ಚಿಕಿತ್ಸೆ ಯಾವುದೇ ಸರಕಾರಿ ಆಸ್ಪತ್ರೆ ಸಿಗುತ್ತಿಲ್ಲ. ಅದರಲ್ಲೂ ಪ್ರಮುಖವಾಗಿ ಸಿಂಗಲ್ ಡೋನರ್ ಪ್ಲೇಟ್‌ಲೆಟ್ಸ್ ರಕ್ತ ಖರೀದಿಸಲು ಖಾಸಗಿ ರಕ್ತ ನಿಧಿ ಕೇಂದ್ರಗಳಿಗೆ ಓಡಾಡಬೇಕಾಗುತ್ತದೆ.
ಈ ಕೇಂದ್ರಗಳು 12 ಸಾವಿರ ರೂ. ಪಡೆದು ಸಿಂಗಲ್ ಡೋನರ್ ಪ್ಲೇಟ್‌ಲೆಟ್ಸ್ ನೀಡುತ್ತಿದೆ. ಇದನ್ನೇ ಸರಕಾರ ಆಸ್ಪತ್ರೆಯಲ್ಲಿ ಮಾಡಿದರೆ ಬಡ ಮತ್ತು ಗ್ರಾಮೀಣ ಜನರಿಗೆ ಅನುಕೂಲವಾಗಲಿದೆ. ಆದರೆ, ಇದನ್ನು ಮಾಡದೆ ಖಾಸಗಿ ಅವರಿಗೆ ಸರಕಾರಿ ವೈದ್ಯರು ನೆರವು ನೀಡುತ್ತಿದ್ದಾರೆ ಎಂದು ಪ್ರತಿಭಟನೆಯಲ್ಲಿ ನಿರತ ಬೀಯಿಂಗ್ ಹ್ಯೂಮನ್ ಎಜ್ಯುಕೇಷನ್ ವೆಲಫೇರ್ ಅಂಡ್ ಚಾರಿಟೇಬಲ್ ಟ್ರಸ್ಟನ ಸಂಸ್ಥಾಪಕ ಅಧ್ಯಕ್ಷ ಸಾದಿಕ್ ಅಲಿ ದೇಶಮುಖ ಮತ್ತು ತುಕಾರಾಮ ಮಾನಕರ್ ತಿಳಿಸಿದರು.
ಇನ್ನೂ ಸರಕಾರ ದವಾಖಾನೆಗಳಲ್ಲಿ ಚಿಕಿತ್ಸೆ ಎನ್ನುವುದು ಮರೀಚಿಕೆಯಾಗಿದೆ. ನರ್ಸುಗಳು, ವೈದ್ಯರು ಸರಿಯಾಗಿ ಕೆಲಸವೂ ಮಾಡುತ್ತಿಲ್ಲ. ಎಲ್ಲವೂ ಖಾಸಗಿ ದವಾಖಾನೆಗಳಿಗೆ ರೆಫರ್ ಮಾಡಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಈ ವಿಷಯವನ್ನು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ವೈದ್ಯಕೀಯ ಸಚಿವರು ಆಗಿರುವ ಶರಣಪ್ರಕಾಶ ಪಾಟೀಲ ಅವರಿಗೆ ಮನವಿ ಸಲ್ಲಿಸಲು ಈ ಪ್ರತಿಭಟನೆ ಮಾಡುತ್ತಿದ್ದೇವೆ. ಆದರೆ, ಹೋರಾಟವನ್ನು ಹತ್ತಿಕ್ಕುವ ನಿಟ್ಟಿನಲ್ಲಿ ನಮ್ಮನ್ನು ಪೊಲೀಸರ ಮೂಲಕ ಬಂಧಿಸಿ ಬಿಡುಗಡೆ ಮಾಡಿಸುವುದು ಸತ್ಯವನ್ನು ಕೊಲ್ಲುವುದು ಆಗಿದೆ ಎಂದು ದೂರಿದ್ದಾರೆ.
ಪೊಲೀಸರು ಸಂಘಟನೆಯ 8 ಜನರನ್ನು ಮಧ್ಯಾಹ್ನ ಬಂಧಿಸಿ ಸಂಜೆ 5 ಗಂಟೆಗೆ ಬಿಡುಗಡೆ ಮಾಡಲಾಗಿದೆ. ಈ ಕುರಿತು ಯಾವುದೆ ಪ್ರಕರಣ ದಾಖಲು ಮಾಡಲಾಗಿಲ್ಲ. ಆದರೆ, ಪ್ರತಿಭಟನೆಯಲ್ಲಿ ನಿರತ ಕಾರ್ಯಕರ್ತರು ಆಸ್ಪತ್ರೆಯ ಮುಂಭಾಗದ ರಸ್ತೆಯನ್ನು ಸಂಪೂರ್ಣ ಬಂದ್ ಮಾಡಿದ ಪರಿಣಾಮ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಅದಕ್ಕಾಗಿ ಪ್ರತಿಭಟನಾಕಾರರನ್ನು ಬಂಧಿಸಿ, ನಂತರ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರತಿಭಟನೆಯಲ್ಲಿ ಮಜರ್, ಅಭಿಷೇಕ ಬಾಲಾಜಿ, ಇಮ್ರಾನ್ ಹುಸ್ಸೇನ, ಜುಬೀರ ಶೇಖ್, ಹಾಜಿ ಶೇಖ್, ನವೀನಕುಮಾರ ಮತ್ತು ಆಸೀಪ್ ಎಸ್.ಕೆ. ಇನ್ನು ಹಲವರು ಇದ್ದರು.