ಆಳಂದ: ಹೊರಗುತ್ತಿಗೆ ಮತ್ತು ದಿನಗೂಲಿ ನೌಕರರ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ ಎಂದು ಆರೋಪಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಬುಧವಾರ ತಾಲೂಕಿನ ಕಡಗಂಚಿ ಬಳಿ ಇರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಎದುರು ದಿನಗೂಲಿ ನೌಕರರು ಪ್ರತಿಭಟನೆ ನಡೆಸಿದರು.
ಸಂಘಟನೆ ಗೌರವಾಧ್ಯಕ್ಷ ಮಾರುತಿ ಮಾನ್ಪಡೆ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಗೌರಮ್ಮ ಪಾಟೀಲ, ಆಷ್ಪಾಕ್ ಇನಾಂದಾರ, ಕಲ್ಯಾಣಿ ಹಿರೋಳಿ, ಬಾಬುರಾವ್, ಸಾಯಬಣ್ಣ ಪಿ. ನಿಂಬಾಳ, ಸುಧಾಮ ಧನ್ನಿ, ಪುರುಷೋತ್ತಮ ಕಡಗಂಚಿ, ಶಿವಪ್ಪ ಸಾಗರ, ಶಿವಾನಂದ ಕವಲಗಾ, ರಾಚಣ್ಣಾ, ಬಸವರಾಜ ಪಾಟೀಲ, ಕರಿಗೋಳಪ್ಪಾ ಫರತಾಬಾದ, ಶಿವಕಾಂತಮ್ಮ ಕಡಗಂಚಿ, ಗೌರಮ್ಮ ಚಿಂಚೋಳಿ, ಶ್ರೀದೇವಿ ಸುಂಟನೂರ, ಶ್ರೀದೇವಿ ಪಟ್ಟಣ, ಸುಭದ್ರಾಬಾಯಿ ಬೋಳಣಿ, ಸಿದ್ಧಮ್ಮ ನಾವದಗಿ, ಭಾರತಿ ಭೋಳಣಿ, ಮಂಗಲಾ ನಾವದಗಿ, ಮಸೂರಬಾಯಿ ಕಡಗಂಚಿ ಮುಂತಾದವರು ಪಾಲ್ಗೊಂಡಿದ್ದರು.
ಪ್ರತಿಭಟನೆಕಾರರು ನಂತರ ವಿಶ್ವವಿದ್ಯಾಲಯದ ಕುಲಪತಿ ಪ್ರೊ| ಎಚ್.ಎಂ. ಮಹೇಶ್ವರಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿ, ಕಳೆದ ಐದು ವರ್ಷಗಳಿಂದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಬಾಲಕರ ವಸತಿ ನಿಲಯದಲ್ಲಿ ದಿನಗೂಲಿ ಕಾರ್ಮಿಕನಾಗಿ ಕಾರ್ಯ ನಿರ್ವಹಿಸುತ್ತಿರುವ ಗಣೇಶ, ಅತಿಥಿಗೃಹದಲ್ಲಿ ಕಾರ್ಯ ನಿರ್ವಹಿಸುತ್ತಿರುವ ತೌಸೀಫ್ ಅವರ ವೇತನ ತಡೆಯುವ ಮೂಲಕ ದೌರ್ಜನ್ಯ ಎಸಗಿದ್ದಾರೆ. ಈ ಕುರಿತು ಹಲವಾರು ಬಾರಿ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಯಾವುದೇ ತಪ್ಪು ನಡೆದಿಲ್ಲವಾದರೂ ಹಿಂದಿನ ಕುಲಸಚಿವರ ನಿರ್ದೇಶನದ ಮೇರೆಗೆ ಗಣೇಶನಿಂದ ತಪ್ಪೊಪ್ಪಿಗೆ ಪತ್ರ ಬರೆಸಿಕೊಳ್ಳಲಾಯಿತು. ಕುಲಪತಿಗಳು ಗಣೇಶನಿಗೆ ಕೆಲಸಕ್ಕೆ ಹಾಜರಾಗಲು ಕಡತದಲ್ಲಿ ಆದೇಶಿಸಿದ ಮೇಲೂ ಅವರ ಕೆಳ ಅಧಿಕಾರಿಗಳು ಕುಲಪತಿಗಳ ಮಾತು ಕೇಳುವುದಿಲ್ಲ ಎಂದು ನೇರವಾಗಿ ತಿಳಿಸಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೆಲವು ತಿಂಗಳುಗಳಿಂದ ಅಧಿಕಾರಿಗಳು ಆತನಿಗೆ ಕೆಲಸಕ್ಕೆ ಹಾಜರಾಗುವಂತೆ ತಿಳಿಸಿ, ಮತ್ತೆ ಕೆಲ ದಿನ ಕಳೆದ ನಂತರ ಕೆಲಸಕ್ಕೆ ಹಾಜರಾಗದಂತೆ ಹೇಳುತ್ತಿದ್ದಾರೆ. ಈ ಹಿಂದೆ ಕಾರ್ಯನಿರ್ವಹಿಸಿದರೂ ವೇತನ ತಡೆಹಿಡಿಯಲಾಗಿದೆ. ಇದಕ್ಕೆ ಕಾರಣ ಗೊತ್ತಾಗಿಲ್ಲ ಎಂದು ದೂರಿದರು.
ಮನವಿ ಪತ್ರ ನೀಡುವ ಸಂದರ್ಭದಲ್ಲಿ ಕುಲಪತಿ ಮಹೇಶ್ವರಯ್ಯ ಅವರೊಂದಿಗೆ ಮಾರುತಿ ಮಾನ್ಪಡೆ ಮಾತಿನ ಚಕಮಕಿ ನಡೆಸಿದರು. ಡಿಎಸ್‌ಪಿ ಟಿ.ಎಸ್. ಸುಲ್ಪಿ ಮಧ್ಯಸ್ಥಿಕೆಯಿಂದ ಪರಿಸ್ಥಿತಿ ತಿಳಿಗೊಂಡಿತು. ಕುಲಪತಿಗಳು ನೌಕರನಿಗೆ ಸೇವೆ ಮುಂದುವರಿಸಲು ಕ್ರಮ ಕೈಗೊಳ್ಳಬೇಕು ಎಂದು ಸಂಬಂಧಿತರಿಗೆ ಸೂಚಿಸಿ, ಮುಖಂಡರಿಗೆ ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈ ಬಿಡಲಾಯಿತು.