Advertisement

ಸಹಾಯಕಿ ನೇಮಕ ಕ್ರಮ ಖಂಡಿಸಿ ಪ್ರತಿಭಟನೆ

12:39 PM Sep 15, 2018 | Team Udayavani |

ವಿಟ್ಲ : ಉಚಿತವಾಗಿ ಆರು ತಿಂಗಳ ಕಾಲ ಸೇವೆ ಸಲ್ಲಿಸಿದ ಪ. ಜಾತಿಗೆ ಸೇರಿದ ಅಂಗನವಾಡಿ ಸಹಾಯಕಿಯನ್ನು ಬಿಟ್ಟು 5 ಕಿ.ಮೀ. ದೂರದವರನ್ನು ಅನಿಲ ಕಟ್ಟೆ ಅಂಗನವಾಡಿ ಕೇಂದ್ರಕ್ಕೆ ನೇಮಕ ಮಾಡಿದ ಕ್ರಮವನ್ನು ಖಂಡಿಸಿ ಸ್ಥಳೀಯರು ಅಂಗನವಾಡಿ ತೆರೆಯಲು ಬಿಡದೆ ಪ್ರತಿಭಟಿಸಿದ ಘಟನೆ ಶುಕ್ರವಾರ ಸಂಭವಿಸಿತು.

Advertisement

ಹೊರಗಿನ ಅಭ್ಯರ್ಥಿಗೆ ಬೇಕಾದ ದಾಖಲೆಯನ್ನು ಖುದ್ದು ಇಲಾಖೆಯ ಅಧಿಕಾರಿಗಳೇ ತೆರಳಿ ಮಾಡುವ ಆವಶ್ಯಕತೆ ಏನು ? ಒಬ್ಬರಿಗೆ ಮಾತ್ರ ದಾಖಲೆ ಮಾಡಿಕೊಟ್ಟು ಸಮಜಾಯಿಷಿ ಕೊಡುವ ಆವಶ್ಯಕತೆ ಏನಿದೆ ? ಉಚಿತವಾಗಿ ಸೇವೆ ನೀಡಿದ ಮಮತಾ ಅವರನ್ನೇ ಇಲ್ಲಿ ಖಾಯಂಗೊಳಿಸಬೇಕು. ಇಲ್ಲದಿದ್ದಲ್ಲಿ ಸ್ಥಳೀಯ ಮಕ್ಕಳನ್ನು ಅಲ್ಲಿಗೆ ಕಳುಹಿಸುವುದಿಲ್ಲ ಎಂದು ಪ್ರತಿಭಟನಕಾರರು ಎಚ್ಚರಿಸಿದರು.

ಮೇಲ್ವಿಚಾರಕಿ ರೋಹಿಣಿ ಅವರು ಪ್ರತಿಭಟನಕಾರರ ಮನವೊಲಿಸಲು ಯತ್ನಿಸಿದರೂ ಇದಕ್ಕೆ ಒಪ್ಪದಿದ್ದಾಗ ಮಹಿಳಾ ಮತ್ತು ಅಭಿವೃದ್ಧಿ ಇಲಾಖೆಯ ಸಿಡಿಪಿಒ ಸುಧಾ ಜೋಷಿ ಸ್ಥಳಕ್ಕಾಗಮಿಸಿ, ಹುದ್ದೆಗೆ ಮೂರು ಅರ್ಜಿಗಳು ಬಂದಿದ್ದು, ವಯಸ್ಸಿನ ಆಧಾರದಲ್ಲಿ 2 ಅರ್ಜಿಗಳು ಉಳಿದುಕೊಂಡಿವೆ. ವಾಸ್ತವ್ಯ ದೃಢೀಕರಣ ಪತ್ರವನ್ನು ಪ.ಪಂ. ಮುಖ್ಯಾಧಿಕಾರಿಗಳಿಂದ ಪಡೆದಾಗ ಇಬ್ಬರೂ ಒಂದೇ ವಾರ್ಡ್‌ ನವರೆಂಬ ಮಾಹಿತಿ ಸಿಕ್ಕಿದೆ. ಹೆಚ್ಚಿನ ವಿದ್ಯಾರ್ಹತೆ, ವಿಧವೆ ಎಂಬ ಕಾರಣಕ್ಕೆ ಅಪರ ಜಿಲ್ಲಾಧಿಕಾರಿ ಸಭೆಯಲ್ಲಿ ಆಯ್ಕೆ ನಡೆಸಲಾಗಿದೆ. ನಿಯಮ ಉಲ್ಲಂಘಿಸಿ ಸಹಾಯಕಿ ಆಯ್ಕೆ ನಡೆಸಲಾಗುವುದಿಲ್ಲ, ಆದೇಶದ ಪಾಲನೆಗೆ ಅವಕಾಶ ಕೊಡಿ ಎಂದು ಮನವಿ ಮಾಡಿದರು.

ಆದೇಶ ಬದಲಾಯಿಸಿ ಹತ್ತಿರದ ನಿವಾಸಿಗೆ ಮಹತ್ವ ನೀಡದಿದ್ದಲ್ಲಿ, ಸೋಮವಾರ ಬಳಿಕ ಮಕ್ಕಳಿಗೆ ಪರ್ಯಾಯ ವ್ಯವಸ್ಥೆ ಮಾಡುವ ಎಚ್ಚರಿಕೆ ನೀಡಿ ಪ್ರತಿಭಟನೆ ಹಿಂಪಡೆಯಲಾಯಿತು. ಪ.ಪಂ. ಸದಸ್ಯೆ ಸಂಧ್ಯಾ ಮೋಹನ್‌, ಅಬೂಬಕ್ಕರ್‌ ಅನಿಲಕಟ್ಟೆ, ಈಶ್ವರ ಭಟ್‌ ಪೂರ್ಲುಪ್ಪಾಡಿ, ಮೋಹನ್‌ ಸೇರಾಜೆ, ಸ್ತ್ರೀಶಕ್ತಿ ಸದಸ್ಯೆ ಬೇಬಿ, ಹೇಮಾವತಿ, ನಾರಾಯಣ, ವಿವೇಕಾನಂದ ಗೌಡ, ಹರೀಶ್‌ ನಾಯ್ಕ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next