Advertisement

ಕೇಂದ್ರ-ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಗೆ ಖಂಡನೆ

03:50 PM Oct 03, 2020 | Suhan S |

ಸಿಂಧನೂರು: ಕೇಂದ್ರ ಮತ್ತು ರಾಜ್ಯ ಸರ್ಕಾರದ ರೈತ, ಕಾರ್ಮಿಕ, ಜನವಿರೋಧಿ ನೀತಿ ಖಂಡಿಸಿ ನಗರ, ಗ್ರಾಮೀಣ ಬ್ಲಾಕ್‌ ಕಾಂಗ್ರೆಸ್‌ ಮತ್ತು ಯುವ ಕಾಂಗ್ರೆಸ್‌ ತಾಲೂಕು ಘಟಕದಿಂದ ಶುಕ್ರವಾರ ಪ್ರತ್ಯೇಕ ಪ್ರತಿಭಟನೆ ನಡೆಸಲಾಯಿತು. ಇದು ತಾಲೂಕಿನ ಕಾಂಗ್ರೆಸ್‌ ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದಕ್ಕೆ ಪುಷ್ಠಿ ನೀಡಿತು.

Advertisement

ಮಾಜಿ ಶಾಸಕ ಹಂಪನಗೌಡ ಬಾದರ್ಲಿ ನೇತೃತ್ವದಲ್ಲಿ ಗ್ರಾಮೀಣ ಬ್ಲಾಕ್‌ ಕಾಂಗ್ರೆಸ್‌ ವತಿಯಿಂದ ಹಾಗೂ ಯುವ ಕಾಂಗ್ರೆಸ್‌ ರಾಜ್ಯ ಅಧ್ಯಕ್ಷ ಬಸನಗೌಡ ಬಾದರ್ಲಿ ನೇತೃತ್ವದಲ್ಲಿ ರಾಜ್ಯ ಹಾಗೂ ಕೇಂದ್ರ ಸರಕಾರದ ವಿವಿಧ ಕಾಯ್ದೆಗಳ ವಿರುದ್ಧ ಪ್ರತ್ಯೇಕ ಹೋರಾಟ ಹಮ್ಮಿಕೊಂಡಿದ್ದರಿಂದ ಕಾರ್ಯಕರ್ತರಲ್ಲಿ ಗೊಂದಲದ ವಾತಾವರಣ ಕಂಡುಬಂತು

ನಗರ-ಗ್ರಾಮೀಣ ಬ್ಲಾಕ್‌ ಕಾಂಗ್ರೆಸ್‌: ಮಾಜಿ ಶಾಸಕ ಹಂಪನಗೌಡ ಬಾದರ್ಲಿ ನಿವಾಸದಿಂದ ಮಿನಿ ವಿಧಾನಸೌಧದವರೆಗೆ ಮೆರವಣಿಗೆ ನಡೆಸಿ ತಹಶೀಲ್ದಾರ್‌ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.

ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿ, ಬಿಜೆಪಿ ಸರಕಾರ ಜನವಿರೋಧಿ ನೀತಿ ಜಾರಿಗೆ ತರುತ್ತಿದೆ. ಇದನ್ನು ಪ್ರತಿಯೊಬ್ಬರು ವಿರೋಧಿಸಬೇಕು.ರೈತ ವಿರೋಧಿಯಾದ ಭೂ ಸುಧಾರಣೆ, ಎಪಿಎಂಸಿ ಕಾಯ್ದೆ ತಿದ್ದುಪಡಿ ಕಾಯ್ದೆಗಳು ಖಾಸಗಿ ಕಂಪನಿಗಳ ಪರವಾಗಿವೆ ಎಂದು ಆರೋಪಿಸಿದರು.

ನಗರಸಭೆ ಮಾಜಿ ಅಧ್ಯಕ್ಷ ಜಾಫರ್‌ ಸಾಬ್‌ ಜಾಗೀರದಾರ, ಗ್ರಾಮೀಣ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಪಂಪನಗೌಡ ಬಾದರ್ಲಿ, ನಗರ ಘಟಕ ಅಧ್ಯಕ್ಷ ಖಾಜಿ ಮಲ್ಲಿಕ್‌ ವಕೀಲ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

 ಯುವ ಕಾಂಗ್ರೆಸ್‌: ಇನ್ನೊಂದೆಡೆ ಯುವ ಕಾಂಗ್ರೆಸ್‌ ಬಸನಗೌಡ ಬಾದರ್ಲಿ ನೇತೃತ್ವದಲ್ಲಿ ಎಪಿಎಂಸಿ ಗಣೇಶ ದೇವಸ್ಥಾನದಿಂದ ಎತ್ತಿನ ಬಂಡಿಗಳ ಮೆರವಣಿಗೆ ನಡೆಸಿ ತಹಶೀಲ್ದಾರ್‌ ಗೆ ಮನವಿ ಸಲ್ಲಿಸಿದರು. ಯುವ ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ಬಸನಗೌಡ ಬಾದರ್ಲಿ ಮಾತನಾಡಿ, ದೇಶದಲ್ಲಿ ರೈತರ ಹಿತ ಕಾಯುವ ಕಾಯ್ದೆಗಳನ್ನು ಜಾರಿಗೆ ತರದೆ ಅವರಿಗೆ ಅನ್ಯಾಯ ಮಾಡುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಿಎಂ ಯಡಿಯೂರಪ್ಪ ಕಾಯ್ದೆ ಜಾರಿಗೆ ಮುಂದಾಗಿದ್ದಾರೆ ಎಂದು ಆರೋಪಿಸಿದರು.

ದೇಶದಲ್ಲಿ ಬಿಜೆಪಿ ಸರಕಾರ ಆಡಳಿತಕ್ಕೆ ಬಂದು ಒಂದು ವರ್ಷವಾದರೂ ರೈತಪರ ಯಾವುದೇ ಯೋಜನೆ ಜಾರಿಗೆ ತಂದಿಲ್ಲ. ರೈತರ ಜೀವನದ ಜತೆ ಚಲ್ಲಾಟವಾಡುತ್ತಿದೆ. ಕಾರ್ಪೋರೇಟ್‌ ಕಂಪನಿಗಳ ಪರ ಕೆಲಸ ಮಾಡುತ್ತಿದೆ ಎಂದು ದೂರಿದರು. ಕೂಡಲೇ ಭೂ ಸುಧಾರಣೆ, ಎಪಿಎಂಸಿ ತಿದ್ದುಪಡಿ ಕಾಯ್ದೆ ಹಿಂಪಡೆಯಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಕೆಪಿಸಿಸಿ ಕಾರ್ಯದರ್ಶಿ ಕೆ.ಕರಿಯಪ್ಪ, ಹಿರಿಯ ಮುಖಂಡ ಶಿವಕುಮಾರ ಜವಳಿ, ವೆಂಕಟೇಶ ರಾಗಲಪರ್ವಿ, ಖಾಜಾಹುಸೇನ್‌ ರೌಡಕುಂದ, ಪಂಪಾಪತಿ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next