ಬೆಂಗಳೂರು: ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ ಹಿನ್ನೆಲೆಯಲ್ಲಿ ಡಿ.28 ರಂದು ಕೇಂದ್ರ ಸರ್ಕಾರದ ಜನ ವಿರೋಧಿ ನೀತಿ ಖಂಡಿಸಿ ಬೃಹತ್ ಪ್ರತಿಭಟನೆ ನಡೆಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ಸಂವಿಧಾನ ಬಾಹಿರ.
ಜಾತ್ಯತೀತ ಸಂವಿಧಾನವನ್ನು ಬದಿಗಿರಿಸಿ ಜನರನ್ನು ಜಾತಿ ಮತದ ಆಧಾರದಲ್ಲಿ ಒಡೆದು ಆಳುವ ಪ್ರಯತ್ನವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ದೇಶದಲ್ಲಿ ಬೆಲೆ ಏರಿಕೆ, ಮಹಿಳೆಯರ ಮೇಲಿನ ದೌರ್ಜನ್ಯ, ಉನ್ನಾವ್ ಅತ್ಯಾಚಾರ ಪ್ರಕರಣದಲ್ಲಿ ಬಿಜೆಪಿ ಶಾಸಕರೇ ಭಾಗಿ ಯಾಗಿದ್ದು, ಅದರಿಂದ ಬಿಜೆಪಿ ಜನರ ಗಮನವನ್ನು ಬೇರೆಡೆ ಸೆಳೆಯಲು ಈ ರೀತಿಯ ಕಾರ್ಯತಂತ್ರ ಅನು ಸರಿಸುತ್ತಾರೆ.
ಹೀಗಾಗಿ ಕೇಂದ್ರದ ವಿರುದ್ಧ ಬೃಹತ್ ಪ್ರತಿ ಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ಹೇಳಿದರು. ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಮಾತನಾಡಿ, ಇಂದಿರಾ ಕ್ಯಾಂಟೀನ್ ಹೆಸರು ಬದಲಿಸಿ ಮಹರ್ಷಿ ವಾಲ್ಮೀಕಿ ಕುಟೀರ ಎಂದು ಮರು ನಾಮ ಕರಣ ಮಾಡುವುದು ವಾಲ್ಮೀಕಿ ಸಮು ದಾಯದ ಮತ ಗಳಿಸುವ ಉದ್ದೇಶ. ಬಿಜೆಪಿ ಯವರಿಗೆ ವಾಲ್ಮೀಕಿ ಬಗ್ಗೆ ಗೌರವ ಇದ್ದರೆ, ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟುವ ಸ್ಥಳದಲ್ಲಿ ವಾಲ್ಮೀಕಿ ಪುತ್ಥಳಿ ಸ್ಥಾಪನೆ ಮಾಡಲಿ.
ವಾಲ್ಮೀಕಿ ಸಮುದಾಯದವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡುವುದಾಗಿ ಹೇಳಿ, ಇಬ್ಬರೂ ನಾಯಕರ ನಡುವೆ ಕಚ್ಚಾಟ ಉಂಟಾಗುವಂತೆ ಮಾಡಿದ್ದಾರೆ. ಇನ್ನು ಆ ಸಮುದಾಯದ ಮೀಸಲಾತಿ ಪ್ರಮಾಣವನ್ನು ಶೇ 7.5 ಕ್ಕೆ ಹೆಚ್ಚಳ ಮಾಡಿ, ಯಾವುದಾದರೂ ವಿವಿಗೆ ವಾಲ್ಮೀಕಿ ಹೆಸರಿಡಲಿ ಎಂದು ಸಲಹೆ ನೀಡಿದರು.
ಮಾನ್ಯತೆ ಇಲ್ಲ: ಉಪ ಮುಖ್ಯಮಂತ್ರಿ ಹುದ್ದೆಗೆ ಸಂವಿಧಾನಿಕ ಮಾನ್ಯತೆಯೇ ಇಲ್ಲ. ನಾಯಕರಿಗೆ ಗೌರವ ಸೂಚಿಸಲು ಒಬ್ಬರಿಗೆ ಅವಕಾಶ ಕಲ್ಪಿಸುವ ಪ್ರವೃತ್ತಿ ಇದೆ. ಆದರೆ, ಬಿಜೆಪಿಯಲ್ಲಿ ಈಗಾಗಲೇ ಮೂರು ಜನರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಲಾಗಿದೆ. ಇನ್ನೂ ಇಬ್ಬರಿಗೆ ನೀಡುವ ಪ್ರಯತ್ನ ನಡೆದಿದೆ. ಇದರಿಂದ ಆ ಹುದ್ದೆಯ ಗೌರವ ಕಡಿಮೆಯಾಗುತ್ತದೆ ಎಂದು ಹೇಳಿದರು.