Advertisement

ಸಿಎಎ, ಎನ್‌ಆರ್‌ಸಿ ವಿರೋಧಿಸಿ ಪ್ರತಿಭಟನೆ

12:22 AM Jan 05, 2020 | Team Udayavani |

ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ರಾಷ್ಟ್ರೀಯ ಪೌರತ್ವ ನೋಂದಣಿ (ಸಿಎಎ) ವಿರೋಧಿಸಿ ನಗರದ ಹಲವು ಭಾಗಗಳಲ್ಲಿ ಶನಿವಾರ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆಗಳು ನಡೆದವು.

Advertisement

ಪುರಭವನ ಮುಂಭಾಗ, ಫ್ರೀಡಂ ಪಾರ್ಕ್‌, ಆರ್‌.ಟಿ ನಗರ, ಹೊಸೂರು ರಸ್ತೆ, ಬನ್ನೇರುಘಟ್ಟ ಮುಖ್ಯ ರಸ್ತೆಗಳಲ್ಲಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆಗಳು ಜರುಗಿದವು. ಧರ್ಮದ ಆಧಾರದಲ್ಲಿ ರೂಪಿತವಾಗಿರುವ ಸಿಎಎ, ಸಂವಿಧಾನ ಬಾಹಿರ ಎಂದು ಪ್ರತಿಭಟನಾಕಾರರು ಆರೋಪಿದರು. ಅಷ್ಟೇ ಅಲ್ಲದೆ ಕಾಯಿದೆ ಹಿಂಪಡೆಯಬೇಕು ಎಂದು ಒತ್ತಾಯ ಮಾಡಲಾಯಿತು.

ಫ್ರೀಡಂ ಪಾರ್ಕ್‌ನಲ್ಲಿ “ನಾವು ಭಾರತೀಯರು’ ಸಂಘಟನೆ ನೇತೃತ್ವದಲ್ಲಿ ನಡೆದ ಸತ್ಯಾಗ್ರಹದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ, ಸುಪ್ರೀಂಕೋರ್ಟ್‌ನ ಹಿರಿಯ ವಕೀಲ ಸಂಜಯ್‌ ಹೆಗ್ಗಡೆ ಪಾಲ್ಗೊಂಡಿದ್ದರು. ಈ ವೇಳೆ ಸಿಎಎ ವಿರೋಧಿಸಿ ಸುಪ್ರೀಂಕೋರ್ಟ್‌ ರಿಜಿಸ್ಟ್ರಾರ್‌ಗೆ ಪತ್ರ ಬರೆದು ಕಳುಹಿಸಿಕೊಡಲಾಯಿತು.

ಬನ್ನೇರುಘಟ್ಟ ಮುಖ್ಯರಸ್ತೆಯ ಬಿಲಾಲ್‌ ಈದ್ಗಾ ಮೈದಾನದಲ್ಲಿ ಜಯನಗರ ಸಮಸ್ತ ಮಸೀದಿಗಳ ಒಕ್ಕೂಟದ ನೇತೃತ್ವದಲ್ಲಿ ನೂರಾರು ಮಂದಿ ಪ್ರತಿಭಟನೆ ನಡೆಸಿದರು. ಮಾಜಿಸಚಿವ ರಾಮಲಿಂಗಾ ರೆಡ್ಡಿ, ಶಾಸಕಿ ಸೌಮ್ಯಾ ರೆಡ್ಡಿ, ಮೈಸೂರಿನ ಉರಿಲಿಂಗ ಪೆದ್ದಿ ಮಠದ ಜ್ಞಾನ ಪ್ರಕಾಶ್‌ ಸ್ವಾಮೀಜಿ, ಜಮಾಯತ್‌ ಉಲಮಾ ಕರ್ನಾಟಕದ ಇಸ್ತಿಕಾರ್‌ ಹಾಶ್ಮಿ ಹಾಗೂ ಮುಸ್ಲಿಂ ಮುಖಂಡರು ಪಾಲ್ಗೊಂಡಿದ್ದರು.

ಈ ವೇಳೆ ಮಾತನಾಡಿದ ರಾಮಲಿಂಗಾ ರೆಡ್ಡಿ ಅವರು, ಎನ್‌ಆರ್‌ಸಿ ಮತ್ತು ಸಿಎಎ ಜಾರಿಗೊಳಿಸಿರುವ ಕೇಂದ್ರ ಸರ್ಕಾರ ಪಾಕಿಸ್ತಾನ, ಅಫ್ಘಾನಿಸ್ತಾನ, ಮತ್ತು ಬಾಂಗ್ಲಾ ದೇಶಗಳ ಮುಸ್ಲಿಮೇತರರ ಬಗ್ಗೆ ಕಾಳಜಿ ವಹಿಸುತ್ತಿದೆ. ಜಾತ್ಯತೀತವಾಗಿರುವ ದೇಶವನ್ನು ಹಿಂದೂ ರಾಷ್ಟ್ರವಾಗಿಸುವ ಉದ್ದೇಶ ಬಿಜೆಪಿ ನಾರಕರದ್ದು. ಸಂವಿಧಾನ ಬಾಹಿರವಾಗಿರುವ ಸಿಎಎ ಹಾಗೂ ಎನ್‌ಆರ್‌ಸಿ ವಾಪಾಸ್‌ ಪಡೆಯಬೇಕು ಎಂದು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದರು.

Advertisement

ಹೆಬ್ಟಾಳದ ಶಾಂತಿ ಒಕ್ಕೂಟದ ವತಿಯಿಂದ ಆರ್‌.ಟಿ ನಗರದ ಈದ್ಗಾ ಮೈದಾನದಲ್ಲಿ ಸಿಎಎ ವಿರೋಧಿ ಪ್ರತಿಭಟನೆ ನಡೆಯಿತು. ದೇಶವನ್ನು ಒಡೆಯುವ ಕಾಯ್ದೆಗೆ ಧಿಕ್ಕಾರ ಎಂಬ ಘೋಷಣೆಗಳನ್ನು ಪ್ರತಿಭಟನಾಕಾರರು ಕೂಗಿದರು.

ಹೊಸೂರು ರಸ್ತೆಯ ಆಸರಿ ಬಳಿ ಕರ್ನಾಟಕ ಅಲ್ಪಸಂಖ್ಯಾತರ ವೇದಿಕೆ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಸಿಎಎ ಮೂಲಕ ಕೇಂದ್ರ ಸರ್ಕಾರ ದೇಶವನ್ನು ಒಡೆಯಲು ಪ್ರಯತ್ನಿಸಿದೆ ಎಂದು ಆರೋಪಿಸಲಾಯಿತು. ಪ್ರಜಾಪ್ರಭುತ್ವದ ಉಳಿವಿಗಾಗಿ ಸಿಎಎ, ಎನ್‌ಆರ್‌ಸಿ ವಿರುದ್ಧ ದೇಶದ ಜನ ಧ್ವನಿ ಎತ್ತಬೇಕಿದೆ ಎಂದು ಪ್ರತಿಭಟಕಾರರು ಹೇಳಿದರು.

ಸಂವಿಧಾನ ರಕ್ಷಣೆಗೆ ಹೋರಾಟ
ಬೆಂಗಳೂರು: ಪೌರತ್ವ ಕಾಯ್ದೆ ತಿದ್ದುಪಡಿ ಸಂಬಂಧ ಜನ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿರುವುದು ಮುಸ್ಲಿಮರ ಪರ ಅಲ್ಲ. ಆದರೆ, ಸಂವಿಧಾನವನ್ನು ರಕ್ಷಣೆ ಮಾಡಲು ಆಗಿದೆ ಎಂದು ಸಮಾಜವಾದಿ ಬಾಪು ಹೆದ್ದೂರು ಶೆಟ್ಟಿ ಹೇಳಿದರು. ರಾಜ್ಯ ರೈತ ಸಂಘದಿಂದ ಏರ್ಪಡಿಸಿದ್ದ “ಪೌರತ್ವ ಕಾಯ್ದೆ ತಿದ್ದುಪಡಿ 2019′ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿ, ಭಾರತ ಬಹು ಸಂಸ್ಕೃತಿ ಮತ್ತು ಭಾಷೆ ಹೊಂದಿರುವ ದೇಶ.

ಕೇಂದ್ರ ಸರ್ಕಾರ ಎಲ್ಲರನ್ನೂ ಪರಿಗಣನೆಗೆ ತೆಗೆದುಕೊಳ್ಳಬೇಕು. ಆದರೆ, ಏಕಮುಖವಾಗಿ ಸಾಗುತ್ತಿದೆ ಎಂದು ಆರೋಪಿಸಿದರು. ಭಾರತದಲ್ಲಿ ಹಿಂದೂ-ಮುಸ್ಲಿಮರ ನಡುವೆ ಧರ್ಮ ಯುದ್ಧವನ್ನು ಕೇಂದ್ರ ಸರ್ಕಾರ ಆರಂಭಿಸಿದೆ. ಎರಡು ಧರ್ಮಗಳಲ್ಲೂ ಮೂಲಭೂತವಾದಿಗಳಿದ್ದಾರೆ. ಅದೇ ರೀತಿ ಎರಡರಲ್ಲೂ ವಿಚಾರವಾದಿಗಳಿದ್ದಾರೆ. ಎರಡೂ ಧರ್ಮದ ವಿಚಾರವಾದಿಗಳು ಒಗ್ಗೂಡಿ ಈ ಧಾರ್ಮಿಕ ಸಂಘರ್ಷಕ್ಕೆ ಎಡೆ ಮಾಡಿಕೊಡದೆ ಸೋದರತೆ ಬಿತ್ತಬೇಕಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next