ಹುಬ್ಬಳ್ಳಿ: ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ ಪೌರತ್ವ ನೋಂದಣಿ ಕಾಯ್ದೆ ವಿರೋಧಿಸಿ ಅಂಜುಮನ್ ಇಸ್ಲಾಂ ಸಂಸ್ಥೆಯಿಂದ ಬೃಹತ್ ಪ್ರತಿಭಟನೆ ನಡೆಯುತ್ತಿದೆ.
ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಬೃಹತ್ ಮೆರವಣಿಗೆ ಆರಂಭವಾಗಿದೆ. ನಂತರ ನೆಹರೂ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಯಲಿದ್ದು, ವೇದಿಕೆ ಸಿದ್ಧಗೊಳಿಸಲಾಗಿದೆ. ನಂತರ ತಹಶೀಲ್ದಾರ ಕಚೇರಿಗೆ ತೆರಳಿ ಅವರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಿದ್ದಾರೆ. ವಿವಿಧೆಡೆಯಿಂದ ಮೆರವಣಿಗೆ ಮೂಲಕ ಜನರು ಆಗಮಿಸುತ್ತಿದ್ದು, ಮೆರವಣಿಗೆ ಹೊರಡುವ ಲ್ಯಾಮಿಂಗ್ಟನ್ ರಸ್ತೆಯುದ್ದಕ್ಕೂ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಒಟ್ಟು 135 ಮಸೀದಿಗಳಿಂದ ಮೆರವಣಿಗೆಗಳ ಮೂಲಕ ಜನರು ಆಗಮಿಸಲಿದ್ದಾರೆ. ಮೆರವಣಿಗೆ ಸಾಗುವ ಮಾರ್ಗಗಳಲ್ಲಿ ವಾಹನ ಸಂಚಾರ ವಿರಳವಾಗದೆ. ಈಗಾಗಲೇ ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿರುವ ಜನರ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಅಲ್ಲಿಯೂ ಕೂಡ ಪೊಲೀಸ್ ಬಿಗಿ ಭದ್ರತೆ ಮಾಡಲಾಗಿದೆ. ಮಹಾನಗರ ಸೇರಿದಂತೆ ವಿವಿಧೆಡೆಯಿಂದ ಪೊಲೀಸರನ್ನು ಕರೆಯಿಸಿಕೊಳ್ಳಲಾಗಿದೆ. ಮಹಾನಗರ ಪೊಲೀಸ್ ಆಯುಕ್ತ ಆರ್.ದಿಲೀಪ್ ನೆಹರು ಮೈದಾನ ಸೇರಿದಂತೆ ಇತರೆಡೆಯ ಭದ್ರತೆ ಪರಿಶೀಲಿಸಿದ್ದಾರೆ.
ಸಂಚಾರ ಅಸ್ತವ್ಯಸ್ತ: ಲ್ಯಾಮಿಂಗ್ಟನ್ ರಸ್ತೆಯಲ್ಲಿ ಮೆರವಣಿಗೆ ನಡೆಯುವುದರಿಂದ ಬಸ್ ಸಂಚಾರ ಸ್ಥಗಿತಗೊಳಿಸಿದ್ದು, ಸಿಟಿ, ರೈಲ್ವೆ ನಿಲ್ದಾಣದಿಂದ ಹಳೇ ಬಸ್ ನಿಲ್ದಾಣದ ಮೂಲಕ ಮುಂದೆ ಸಂಚರಿಸುವವರಿಗೆ ಬಸ್ ಇಲ್ಲದಂತಾಗಿದ್ದು, ಕಾಲ್ನಡಿಗೆ ಮೂಲಕ ತೆರಳುತ್ತಿದ್ದಾರೆ. ಒಂದಿಷ್ಟು ಆಟೋಗಳು ಸಂಚಾರ ಮಾಡುತ್ತಿದ್ದು, ಹೆಚ್ಚಿನ ಹಣ ಕೀಳುತ್ತಿದ್ದಾರೆ.