Advertisement

ಬ್ಯಾಂಕ್‌ ಖಾಸಗೀಕರಣ-ವಿಲೀನ ವಿರೋಧಿಸಿ ಪ್ರತಿಭಟನೆ

03:07 PM Mar 16, 2021 | Team Udayavani |

ಹುಬ್ಬಳ್ಳಿ: ರಾಷ್ಟ್ರೀಕೃತ ಬ್ಯಾಂಕ್‌ಗಳ ಖಾಸಗೀಕರಣ ವಿರೋ ಧಿಸಿ ಬ್ಯಾಂಕ್‌ ಯೂನಿಯನ್‌ಗಳ ಸಂಯುಕ್ತ ವೇದಿಕೆ ಅಶ್ರಯದಲ್ಲಿ ವಿವಿಧ ಬ್ಯಾಂಕ್‌ಗಳ ನೌಕರರು ಸೋಮವಾರ ಕರ್ತವ್ಯ ಬಹಿಷ್ಕರಿಸಿ ಕೇಂದ್ರ ಸರಕಾರ ಹಾಗೂ ಆರ್‌ಬಿಐ ನೀತಿಗಳನ್ನು ಖಂಡಿಸಿ ಪ್ರತಿಭಟನೆ ನಡೆಸಿದರು.

Advertisement

ಡಾ| ಬಿ.ಆರ್‌. ಅಂಬೇಡ್ಕರ್‌ ವೃತ್ತ ಬಳಿಯ ಯೂನಿಯನ್‌ ಬ್ಯಾಂಕ್‌ ಆವರಣದಲ್ಲಿ ಪ್ರತಿಭಟನೆ ನಡೆಸಿದ ನೌಕರರು, ಶತಮಾನಗಳಿಂದ ಜನರ ಆರ್ಥಿಕ ಪರಿಸ್ಥಿತಿ ಸುಧಾರಿಸುವಲ್ಲಿ ಮಹತ್ತರ ಪಾತ್ರ ವಹಿಸಿರುವ ರಾಷ್ಟ್ರೀಕೃತ ಬ್ಯಾಂಕ್‌ಗಳನ್ನು ಬಂಡವಾಳಶಾಹಿಗಳ ತೆಕ್ಕೆಗೆ ನೀಡಲು ಕೇಂದ್ರ ಸರಕಾರ ಮುಂದಾಗಿದೆ. ಕೇಂದ್ರ ಸರಕಾರದ ಈ ನೀತಿ ದೇಶದ ಆರ್ಥಿಕ ವ್ಯವಸ್ಥೆಗೆ ದೊಡ್ಡ ಪೆಟ್ಟು ನೀಡಲಿದ್ದು, ಜನಸಾಮಾನ್ಯರು ಬ್ಯಾಂಕ್‌ಗಳ ಆರ್ಥಿಕ ಸೇವೆಯಿಂದ ವಂಚಿತರಾಗಲಿದ್ದಾರೆ. ಮುಂದಿನ ದಿನಗಳಲ್ಲಿ ಬ್ಯಾಂಕ್‌ ಹುದ್ದೆಗಳು ಕೂಡ ಕಡಿತಗೊಂಡು ನಿರುದ್ಯೋಗ ಸೃಷ್ಟಿಯಾಗಲಿದೆ. ಕೂಡಲೇ ಕೇಂದ್ರ ಸರಕಾರ ಈ ನೀತಿಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಬ್ಯಾಂಕ್‌ ನೌಕರರ ಮುಖಂಡ ಸ್ಟೀಫನ್‌ ಜಯಚಂದ್ರ ಮಾತನಾಡಿ, ಕೇಂದ್ರ ಸರಕಾರದ ಈ ನೀತಿಯ ಹಿಂದೆ ಬಂಡವಾಳಶಾಹಿಗಳಿದ್ದಾರೆ. ಅವರ ತಾಳಕ್ಕೆ ಕೇಂದ್ರ ಸರಕಾರ ಕುಣಿಯುತ್ತಿದೆ. ಬ್ಯಾಂಕ್‌ ಗಳು ಖಾಸಗೀಕರಣವಾದರೆ ಮುಂದಿನ ತಲೆಮಾರಿಗೆ ಬ್ಯಾಂಕ್‌ ಉದ್ಯೋಗಗಳು ಇರುವುದಿಲ್ಲ. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿರುವ ಜನಸಾಮಾನ್ಯರ ಠೇವಣಿ ಮೇಲೆ ಬಂಡವಾಳಶಾಹಿಗಳ ಹಾಗೂ ಕೇಂದ್ರ ಸರಕಾರದ ವಕ್ರದೃಷ್ಟಿ ಬಿದ್ದಿದೆ. ಬ್ಯಾಂಕ್‌ ನೌಕರರು ಎಲ್ಲರೂ ಒಟ್ಟಾಗಿ ಖಾಸಗೀಕರಣದ ವಿರುದ್ಧ ನಿಲ್ಲದಿದ್ದರೆ ಗಂಡಾಂತರ ಎದುರಿಸಬೇಕಾಗುತ್ತದೆ ಎಂದರು.

ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ ಪತ್ತಾರ ಮಾತನಾಡಿ, ಜನಸಾಮಾನ್ಯರ ಬದುಕು ಉಳಿಯಬೇಕಾದರೆ ರಾಷ್ಟ್ರೀಕೃತ ಬ್ಯಾಂಕ್‌ಗಳು ಉಳಿಯಬೇಕು ಎಂದು ಹೇಳಿದರು. ಬ್ಯಾಂಕ್‌ ನೌಕರರ ಒಕ್ಕೂಟದ ಪ್ರಮುಖರಾದ ಬಾಲಕೃಷ್ಣ, ರಾಮ ಮೋಹನ, ರುದ್ರಗೌಡ ಪಾಟೀಲ, ಸಂತೋಷ ಮಿರಜಕರ, ಮಾಲತೇಶ ಕುಲಕರ್ಣಿ, ಜಂಟಿ ಕಾರ್ಮಿಕ ಒಕ್ಕೂಟದ ಬಷೀರ್‌ ಅಹ್ಮದ್‌ ಮುಧೋಳ, ಎ.ಎಚ್‌. ಮುಲ್ಲಾ, ಅಮೃತ ಇಜಾರೆ, ಬಾಬಾಜಾನ್‌ ಮುಧೋಳ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next