ನಾಲವಾರ ಗ್ರಾಮದ ಕೋರಿಸಿದ್ದೇಶ್ವರ ಮಠದಿಂದ ಅಧೋನಿ ಸೋಲಾರ್ ವಿದ್ಯುತ್ ಘಟಕದ ಕಾಮಗಾರಿ ಸ್ಥಳದ ವರೆಗೆ ರೈತರು ಪ್ರತಿಭಟನಾ ಮೆರವಣಿಗೆ ನಡೆಸಿದರು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಕರವೇ (ನಾರಾಯಣಗೌಡ) ತಾಲೂಕು ಅಧ್ಯಕ್ಷ ಮಹೇಶ ಕಾಶಿ, ನಾಲವಾರ-ಕುಂಬಾರಹಳ್ಳಿ ಮಧ್ಯೆ ನಿರ್ಮಾಣಗೊಳ್ಳುತ್ತಿರುವ ಅಧೋನಿ ಒಡೆತನದ ಸೋಲಾರ್ ವಿದ್ಯುತ್ ಘಟಕಕ್ಕೆ 4.75 ಲಕ್ಷ ರೂ. ದಂತೆ ಒಟ್ಟು 250 ಎಕರೆ ಜಮೀನು ಖರೀದಿಸಲಾಗಿದೆ. ರೈತರೊಂದಿಗೆ ಸಾಮೂಹಿಕ ಸಭೆ ನಡೆಸಿಲ್ಲ. ಭೂಮಿ ಖರೀದಿ ಪ್ರಕ್ರಿಯೆ ವಿಷಯವನ್ನು ಜಿಲ್ಲಾಧಿಕಾರಿಗಳ ಗಮನಕ್ಕೂ ತಾರದೆ ಅನಧಿಕೃತವಾಗಿ ಸೋಲಾರ್ ಘಟಕ ಸ್ಥಾಪಿಸಲು ಮುಂದಾಗಿರುವ ಅಧೋನಿ ಕಂಪನಿ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಜಿಲ್ಲಾಧಿಕಾರಿಗಳು ಮಧ್ಯೆ ಪ್ರವೇಶಿಸಿ ನಾಲವಾರ ಗ್ರಾಮದಲ್ಲಿಯೇ ರೈತರ ಸಭೆ ನಡೆಸಬೇಕು. ಪ್ರತಿ ಎಕರೆ ಭೂಮಿಗೆ 25 ಲಕ್ಷ ರೂ. ದರ ನಿಗದಿಪಡಿಸಬೇಕು. ಭೂಮಿ
ನೀಡಿದ ರೈತರ ಕುಟುಂಬ ಸದಸ್ಯರೊಬ್ಬರಿಗೆ ಕಂಪನಿಯಲ್ಲಿ ಖಾಯಂ ಉದ್ಯೋಗ ನೀಡಬೇಕು ಎಂದು ಒತ್ತಾಯಿಸಿದರು. ಪ್ರತಿಭಟನಾ ಸ್ಥಳಕ್ಕಾಗಮಿಸಿ ಮನವಿ ಸ್ವೀಕರಿಸಿದ ಚಿತ್ತಾಪುರ ತಹಶೀಲ್ದಾರ ಮಲ್ಲೇಶ ತಂಗಾ, ಈ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಹದಿನೈದು ದಿನದ ಒಳಗಾಗಿ ಕಂಪನಿ ಆಡಳಿತಾಧಿಕಾರಿಗಳು ಮತ್ತು ರೈತರ ಸಭೆ ಏರ್ಪಡಿಸಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು. ಕರವೇ ವಲಯ ಅಧ್ಯಕ್ಷ ಶಿವುಕುಮಾರ ಸುಣಗಾರ, ಮುಖಂಡರಾದ ಸಾಯಬಣ್ಣ ಜಾಲಗಾರ, ನಾಗರಾಜ ಕುಲಕುಂದಿ, ಆನಂದ ಕೊಳ್ಳಿ, ಸಾಬಣ್ಣ ಬರಾಟೆ, ಗಣೇಶ ರಾಠೊಡ, ಮಲ್ಲಿಕಾರ್ಜುನ ಎಣ್ಣಿ, ದೇವ ಪೂಜಾರಿ, ರೈತರಾದ ಅನಿತಾ ರಾಠೊಡ, ಜಮಿಲಿಬಾಯಿ ಬಾಸು, ಲಕ್ಷ್ಮೀ, ಮಹಾದೇವಿ ಸೇರಿದಂತೆ ನೂರಾರು ಜನ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
Advertisement