ಚಿತ್ರದ ಟ್ರೇಲರ್‌ನಲ್ಲಿ ಯುವಕರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿರುವ ಕೆಲ ಯುವಕರು ನಟಿ ಮೇಘನಾರಾಜ್ ಮನೆಯ ಮುಂದೆ ಭಾನುವಾರ ಪ್ರತಿಭಟನೆ ನಡೆಸಿದ್ದಾರೆ. ಮುಸ್ಸಂಜೆ ನಿರ್ದೇಶನದ “ಜಿಂದಾ’ ಚಿತ್ರಕ್ಕೆ ಮೇಘನಾರಾಜ್ ನಾಯಕಿ. ಆ ಚಿತ್ರದ ಟ್ರೇಲರ್‌ವೊಂದು ಬಿಡುಗಡೆಯಾಗಿದ್ದು, ಆ ಟ್ರೇಲರ್‌ನಲ್ಲಿ ನಟಿ ಮೇಘನಾರಾಜ್ ಕೆಲ ಡೈಲಾಗ್‌ಗಳನ್ನು ಹೇಳಿದ್ದಾರೆ.
ಅವರ ಆ ಸಂಭಾಷಣೆ ಯುವಕರನ್ನು ರೊಚ್ಚಿಗೆಬ್ಬಿಸಿದೆ. ಈ ಹಿನ್ನೆಲೆಯಲ್ಲಿ ಜನ್ಮಭೂಮಿ ಸಂಘಟನೆ ನೇತೃತ್ವದಲ್ಲಿ ಯುವಕರು ಜೆ.ಪಿ.ನಗರದಲ್ಲಿರುವ ಅವರ ಮನೆಯ ಮುಂದೆ ಪ್ರತಿಭಟನೆ ನಡೆಸಿ, ಮೇಘನಾರಾಜ್ ಅವರ ವಿರುದ್ಧ ಧಿಕ್ಕಾರ ಕೂಗಿದ್ದಾರೆ. ಅಷ್ಟಕ್ಕೂ “ಜಿಂದಾ’ ಚಿತ್ರದಲ್ಲಿ ಮೇಘನಾರಾಜ್, ಯುವಕರನ್ನು ಕುರಿತು ಹೇಳಿರುವ ಮಾತುಗಳೇನು ಗೊತ್ತಾ?
“ಈ ಗಂಡು ಅನ್ನೋ ಒಬ್ಬ ಕಚಡ ನನ್ಮಗನೂ ಪ್ರೀತಿ ಮಾಡುವಾಗ ಸತ್ಯ ಹೇಳಲ್ವಲ್ಲಾ. ಯಾಕ್ ಸಾರ್ ಫ್ರೀಯಾಗಿ ಎಲ್ಲಾ ಮುಗಿಸ್ಕೋಬಹುದು ಅಂತಾನಾ..? ಈ ಡೈಲಾಗ್‌ನಿಂದ ಯುವಕರು ಕೋಪಗೊಂಡು, ಸಂಘಟನೆಯ ನೇತೃತ್ವದಲ್ಲಿ ಪ್ರತಿಭಟಿಸಿ, ಮೇಘನಾರಾಜ್, ಕ್ಷಮೆ ಕೇಳಬೇಕು ಎಂದು ಪಟ್ಟು ಹಿಡಿದಿದ್ದಾರೆ. ಪ್ರತಿಭಟನೆ ನಿರತ ಯುವಕರನ್ನು ಕುರಿತು ಪ್ರತಿಕ್ರಿಯಿಸಿರುವ ಮೇಘನಾರಾಜ್, “ಮೊದಲು ನೀವು ಸಿನಿಮಾ ನೋಡಿ.
ಆ ನಂತರ ಮಾತನಾಡಿ. ನಾನು ಎಲ್ಲಾ ಹುಡುಗರು ಮತ್ತು ಗಂಡಸರನ್ನು ಕುರಿತು ಆ ರೀತಿಯ ಸಂಭಾಷಣೆ ಹೇಳಿಲ್ಲ, ವಿನಾಕಾರಣ ತಪ್ಪು ತಿಳಿಯಬೇಡಿ. ಮೊದಲು ನೀವು ಸಿನಿಮಾ ನೋಡಿ. “ಜಿಂದಾ’ ಚಿತ್ರ ಒಂದು ನೈಜ ಘಟನೆ ಆಧಾರಿತ ಸಿನಿಮಾ. ನಾನು ಕೇವಲ ಆ ಚಿತ್ರದ ನಾಯಕಿಯಷ್ಟೇ. ಪಾತ್ರಧಾರಿಯಾಗಿ ನಾನು ಆ ಡೈಲಾಗ್ ಹೇಳಿದ್ದೇನೆಯೇ ಹೊರತು, ಮೇಘನಾರಾಜ್ ಆಗಿ ಮಾತಾಡಿಲ್ಲ. ನಾನು ನಿಜ ಜೀವನದಲ್ಲೂ ಆ ರೀತಿ ಇಲ್ಲ.
ಸಿನಿಮಾ ಕಥೆ ಕೇಳಿದಾಗ ಇದು ಈ ಮಟ್ಟ ತಲುಪುತ್ತೆ ಅಂತ ಅಂದುಕೊಂಡಿರಲಿಲ್ಲ’ ಎಂದು ಮೇಘನಾರಾಜ್ ಹೇಳಿದ್ದಾರೆ. ಅದೇನೆ ಇರಲಿ, ಒಟ್ಟಾರೆ, ನಟಿ ಮೇಘನಾರಾಜ್ ಆಡಿರುವ ಮಾತಿಗೂ “ಬೆಲೆ’ ಜಾಸ್ತಿಯೇ ಇದೆ ಎಂಬುದು ಈಗ ಸಾಬೀತಾಗಿದೆ. ಸದ್ಯ “ಜಿಂದಾ’ ಜೂನ್ 9ಕ್ಕೆ ತೆರೆಕಾಣಲಿದೆ. ಚಿತ್ರದಲ್ಲಿ ಇನ್ನು ಏನೆಲ್ಲಾ ಮಾತಾಡಿದ್ದಾರೆ ಅನ್ನೋದು ಗೊತ್ತಿಲ್ಲ. ಅದು ಬರೀ ಟ್ರೇಲರ್‌ನಲ್ಲಷ್ಟೇ ಕೇಳಿ ಬಂದ ಮಾತು. ಇನ್ನೇನಿದೆ ಎಂಬ ಕುತೂಹಲವಿದ್ದರೆ ಸಿನಿಮಾ ನೋಡಬಹುದು.