ಮಸ್ಕಿ: ನಾರಾಯಣಪುರ ಬಲದಂಡೆ ಕಾಲುವೆಯ 5ಎ ಶಾಖಾ ಕಾಲುವೆ ಜಾರಿಗೆ ಆಗ್ರಹಿಸಿ ತಾಲೂಕಿನ ಪಾಮನಕಲ್ಲೂರು ಹೋಬಳಿಯಲ್ಲಿ ನಡೆಯುತ್ತಿರುವ ರೈತರ ಹೋರಾಟ ಶತಕದತ್ತ ದಾಪುಗಾಲಿಡುತ್ತಿದೆ. ಆದರೆ, ಸರಕಾರ ಮಾತ್ರ ಈ ಬಗ್ಗೆ ಗಂಭೀರವಾಗಿ ಪರಿಗಣಿಸದೇ ಇರುವುದು ರೈತರಲ್ಲಿ ಆಕ್ರೋಶ ಹೆಚ್ಚಾಗುತ್ತಿದೆ.
ಕಳೆದ 85 ದಿನಗಳಿಂದ ಅನಿರ್ದಿಷ್ಠ ಧರಣಿ ಸತ್ಯಾಗ್ರಹ ಆದಿಬಸವೇಶ್ವರ ದೇವಸ್ಥಾನದ ಎದುರು ನಡೆಯುತ್ತಿದೆ. ಆರಂಭದಲ್ಲಿ ನಾಲ್ಕು ಪಂಚಾಯಿತಿಗೆ ಸೀಮಿತವಾಗಿದ್ದ ಹೋರಾಟ ಈಗ ಮಸ್ಕಿ, ಸಿಂಧನೂರು ತಾಲೂಕಿನ ಬಹುತೇಕ ಹಳ್ಳಿಗರು ಇದಕ್ಕೆ ಬೆಂಬಲಿಸುತ್ತಿದ್ದು, ಹೋರಾಟದಲ್ಲಿ ಭಾಗವಹಿಸುವ ಮೂಲಕ ನೀರಾವರಿ ಬೇಕು ಎನ್ನುವ ಪಟ್ಟು ಹಿಡಿದ್ದಾರೆ. ಆದರೆ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಸೇರಿ ಇತರೆ ಬಿಜೆಪಿ ನಾಯಕರು ಈ ಯೋಜನೆ ಜಾರಿ ಕಷ್ಟ ಎಂದು ವಟಗಲ್ ಬಸವೇಶ್ವರ ಏತ ನೀರಾವರಿ ಮೂಲಕ ಈ ಭಾಗಕ್ಕೆ ನೀರಾವರಿ ಕಲ್ಪಿಸಲು ಹೊರಟಿದ್ದಾರೆ. ಆದರೆ ಇಲ್ಲಿನ ರೈತರು ಇದನ್ನು ವಿರೋಧಿ ಸಿ ಹೋರಾಟದ ಕಹಳೆ ಮಾತ್ರ ಇನ್ನು ನಿಲ್ಲಿಸುತ್ತಿಲ್ಲ.
ಹೆಚ್ಚಿದ ಆಕ್ರೋಶ: ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ, ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಸೇರಿ ಬಿಜೆಪಿಯ ಕೆಲ ನಾಯಕರು ಈ ಭಾಗಕ್ಕೆ ಬಂದು ಹೋಗಿದ್ದಾರೆ. ಹೋರಾಟ ಸ್ಥಳಕ್ಕೆ ಹೊಂದಿಕೊಂಡ ಇತರೆ ಹಳ್ಳಿಗಳಿಗೂ ತೆರಳಿ ಸರಕಾರಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ವಾಪಸ್ಸಾದರು. ಆದರೆ ಈ ಧರಣಿ ಸುದ್ದಿ ತಿಳಿದು ಸ್ಥಳಕ್ಕೂ ಬಾರದೆ ಹೋಗಿದ್ದಾರೆ. ಹೀಗಾಗಿ ಇಲ್ಲಿನ ರೈತರಲ್ಲಿ ಆಕ್ರೋಶ ಮತ್ತಷ್ಟು ತೀವ್ರವಾಗಿದೆ.
ಇದನ್ನೂ ಓದಿ :ಬ್ಯಾಡಗಿ ಪುರಸಭೆ: 7.87 ಲಕ್ಷ ರೂ.ಉಳಿತಾಯ ಬಜೆಟ್
ಅನಿರ್ದಿಷ್ಠ ಧರಣಿ ನಡೆದು ಇಷ್ಟು ದಿನಗಳಾದರೂ ಸರಕಾರ ಗಮನ ಹರಿಸದೇ ಇರುವ ನಡೆಯಿಂದ ಸಿಟ್ಟುಗೆದ್ದ ರೈತರು ಎಷ್ಟು ದಿನವಾದರೂ ಸರಿಯೇ 5ಎ ಕಾಲುವೆ ಜಾರಿ ಮಾಡುವವರೆಗೂ ಹೋರಾಟ ನಿಲ್ಲದು ಎಂದು ಪಟ್ಟು ಹಿಡಿದಿದ್ದಾರೆ.