Advertisement

ಗುಬ್ಬಿ ಗೇಟ್‌ ಬಳಿ ರೈತರ ಬಂಧನ: ಆಕ್ರೋಶ

04:36 PM Feb 07, 2021 | Team Udayavani |

ತುಮಕೂರು: ದೆಹಲಿಯಲ್ಲಿರುವ ನಡೆಯುತ್ತಿರುವ ರೈತರ ಚಳವಳಿ ಬೆಂಬಲಿಸಿ, ದೇಶದೆಲ್ಲಡೆ ರೈತರು ನಡೆಸುತ್ತಿರುವ ಪ್ರತಿಭಟನೆ ಅಂಗವಾಗಿ ತುಮಕೂರಿನಲ್ಲಿ ರೈತ ಸಂಘ, ಹಸಿರು ಸೇನೆ, ಪ್ರಗತಿಪರ ಸಂಘಟನೆಗಳು ಹಮ್ಮಿಕೊಂಡಿದ್ದ ಹೆದ್ದಾರಿ ತಡೆ ಮಾಡಲು ಹೊರಟ ರೈತರನ್ನು ಪೊಲೀಸರು ಬಂಧಿಸಿದರು.

Advertisement

ನಗರದ ಗುಬ್ಬಿ ಗೇಟ್‌ ರಿಂಗ್‌ ರಸ್ತೆ ಸಮೀಪದ ರಾಷ್ಟೀಯ ಹೆದ್ದಾರಿ 206ರಲ್ಲಿ ರೈತ ಮುಖಂಡರು ಶನಿವಾರ ಹೆದ್ದಾರಿ ತಡೆದು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲು ಸೇರುತ್ತಿದ್ದ ವೇಳೆಯಲ್ಲಿ ಅಧಿಕ ಸಂಖ್ಯೆಯಲ್ಲಿ ಜಮಾಯಿಸಿದ ಪೊಲೀಸರು ಹೋರಾಟಕ್ಕೆ ಬಂದಿದ್ದ ರೈತರನ್ನು ಬಂಧಿಸಲು ಮುಂದಾದರು. ರೈತರು ಪೊಲೀಸರ ಒತ್ತಡಕ್ಕೆ ಮಣಿಯದೇ ಹೆದ್ದಾರಿಯಲ್ಲಿ ಕುಳಿತು ಪ್ರತಿಭಟನೆ ಆರಂಭಿಸಿದರು. ಈ ವೇಳೆ ಪೊಲೀಸರಿಗೂ ರೈತ ಮುಖಂಡರಿಗೂ ಮಾತಿನ ಚಕಮಿಕಿ ನಡೆಯಿತು. ಆದರೂ, ಪೊಲೀಸರು ಹೆದ್ದಾರಿ ತಡೆಯಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ತಕ್ಷಣ ಖಾಲಿ ಮಾಡಿ ಎಂದಾಗ, ರೈತರು ರಸ್ತೆಯಲ್ಲಿಯೇ ಮಲಗಿ ತಮ್ಮ ಸಿಟ್ಟು ಪ್ರದರ್ಶಿಸಿದರು.

ಹೆಚ್ಚು ಸಂಖ್ಯೆಯಲ್ಲಿ ಇದ್ದ ಪೊಲೀಸರು ರೈತರು ಪ್ರತಿಭಟನೆ ಮಾಡಿ ರಸ್ತೆ ತಡೆ ಚಳುವಳಿ ಮಾಡಲೂ ಬಿಡದೆ ಎಲ್ಲರನ್ನೂ ಬಂಧಿಸಿದರು. ಈ ವೇಳೆ ರೈತರು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆಯಿತು. ರೈತರ ಹೋರಾಟ ಹತ್ತಿಕ್ಕಿದ ಜಿಲ್ಲಾಡಳಿತ: ಆರೋಪ ದೆಹಲಿಯಲ್ಲಿರುವ ನಡೆಯುತ್ತಿರುವ ರೈತರ ಚಳವಳಿ ಬೆಂಬಲಿಸಿ, ದೇಶದೆಲ್ಲಡೆ ರೈತರು ನಡೆಸುತ್ತಿರುವ ಹೆದ್ದಾರಿ ಪ್ರತಿಭಟನೆಯ ಅಂಗವಾಗಿ ತುಮಕೂರಿನಲ್ಲಿ ರೈತ ಸಂಘ, ಹಸಿರು ಸೇನೆ, ಪ್ರಗತಿಪರ ಸಂಘಟನೆಗಳು ಹಾಗೂ ಕಾರ್ಮಿಕರು ಹಮ್ಮಿಕೊಂಡಿದ್ದ ಶಾಂತಿಯುತ ರಸ್ತೆ ತಡೆ ಕಾರ್ಯಕ್ರಮವನ್ನು ಜಿಲ್ಲಾಡಳಿತ ಪೊಲೀಸರ ಮೂಲಕ ಹತ್ತಿಕ್ಕುವ ಪ್ರಯತ್ನ ನಡೆಸಿದೆ ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ಎ.ಗೋವಿಂದರಾಜು ಆರೋಪಿಸಿದ್ದಾರೆ.

ನಗರದ ಗುಬ್ಬಿಗೇಟ್‌ ಬಳಿ ಶಾಂತಿಯುತ ಪ್ರತಿಭಟನೆಗೆ ಮುಂದಾದ ರೈತರು, ಪ್ರಗತಿಪರ ಸಂಘಟನೆಗಳ ಮುಖಂಡರು ಹಾಗೂ ಕಾರ್ಮಿಕರನ್ನು ಬಂಧಿಸಿದ ಪೊಲೀಸರ ಕ್ರಮ ಸರಿಯಲ್ಲ ಇಂದು ರೈತರ ಸ್ಥಿತಿ ಬೀದಿಗೆ ಬಿದ್ದಿದೆ. ರೈತರ ಹೋರಾಟ ಸಹಿಸದ ಕೇಂದ್ರ ಮತ್ತು ರಾಜ್ಯ ಸರ್ಕಾರ ಪೊಲೀಸ್‌ ಬಲ ಬಳಸಿ ಪ್ರತಿಭಟನೆ ಹತ್ತಿಕ್ಕಲು ಹೊರಟಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಗತಿಪರ ಸಂಘಟನೆಗಳ ಮುಖಂಡ ಡಾ.ಬಸವರಾಜು ಮಾತನಾಡಿ, ರೈತರು ಸಕಾರಣವನ್ನು ಇಟ್ಟುಕೊಂಡು ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿದ್ದು, ಇದರ ಭಾಗವಾಗಿ ಜಿಲ್ಲೆಯಲ್ಲಿಯೂ ಪ್ರತಿಭಟನೆಗೆ ಮುಂದಾಗುವ ಮೊದಲೇ ರೈತರು,ಕಾರ್ಮಿಕರು, ಪ್ರಗತಿಪರ ನಿಲುವು ಉಳ್ಳವರನ್ನು ಬಂಧಿಸಿದ್ದು ಸರಿಯಲ್ಲ. ರೈತರಿಗೆ ಬೇಡವಾದ ಕಾನೂನು ತರುವ ತರಾತುರಿ ಸರ್ಕಾರಕ್ಕೆ ಏಕೆ ಎಂದು ಪ್ರಶ್ನಿಸಿದರು.

Advertisement

ಕಾರ್ಮಿಕ ಮುಖಂಡ ಸೈಯದ್‌ ಮುಜೀಬ್‌ ಮಾತನಾಡಿ, ಸರ್ಕಾರ ರೈತರು ನಡೆಸುತ್ತಿರುವ ಹೋರಾಟವನ್ನು ಪೊಲೀಸ್‌ ಬಲಬಳಸಿ ಹತ್ತಿಕ್ಕುವ ಮೂಲಕ ರೈತರ ಹೋರಾಟವೆಂದರೆ ರೈತರು ಮತ್ತು ಪೊಲೀಸರು ಎಂಬಂತಹ ಸ್ಥಿತಿಯನ್ನು ನಿರ್ಮಾಣ ಮಾಡುತ್ತಿದೆ. ರೈತರು ಯಾವ ಮೂಲಭೂತ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಹೋರಾಟ ನಡೆಸುತ್ತಿದ್ದಾರೆ ಎಂಬುದೇ ಚರ್ಚೆಯಾಗದ ರೀತಿಯಲ್ಲಿ ಸರ್ಕಾರ ನಡೆದುಕೊಳ್ಳುತ್ತಿರುವುದು ದುರಂತ ಎಂದರು.

 ಇದನ್ನೂ ಓದಿ :ರೈತರ ಹೆಸರಿನಲ್ಲಿ ರಾಜಕೀಯ ಪ್ರೇರಿತ ಹೋರಾಟ: ಕಟೀಲ್‌

ಪ್ರತಿಭಟನೆಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಬಿ.ಉಮೇಶ್‌, ರೈತರ ಸಂಘದ ಶಂಕರಪ್ಪ, ಅಜ್ಜಪ್ಪ,  ರೈತ ಸಂಘ ಮತ್ತು ಹಸಿರುಸೇನೆಯ ಚಿಕ್ಕಬೋರೇಗೌಡ, ಚಿರತೆ ಚಿಕ್ಕಣ್ಣ, ಅರುಂಧತಿ, ಮಂಜುಳ, ಪ್ರವೀಣ್‌, ಪೂಜಾರಪ್ಪ, ವೆಂಕಟೇಗೌಡ, ಮೆಳೆಕಲ್ಲ ಹಳ್ಳಿಯ ಯೋಗೀಶ್‌, ನರಸಿಂಹಮೂರ್ತಿ, ಆರ್‌.ಕೆ.ಎಸ್‌ನ ಕಲ್ಯಾಣಿ, ಅಶ್ವಿ‌ನಿ, ಶ್ರೀನಿವಾಸಗೌಡ, ನಾದೂರು ಕೆಂಚಪ್ಪ ಇತರರಿದ್ದರು.

ಬಾರಿ ಭದ್ರತೆ: ತುಮಕೂರಿನಲ್ಲಿ ರೈತರಿಂದ ಹೆದ್ದಾರಿ ತಡೆ ಮಾಡಲು ನಿರ್ದಾರ ಮಾಡಿದ್ದ ಹಿನ್ನೆಲೆಯಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭದ್ರತೆ ಒದಗಿಸಿದ್ದರು. ಅನ್ನದಾತ ರಸ್ತೆ ತಡೆಯಲು ಬಿಡದ ರೀತಿಯಲ್ಲಿ ಪೊಲೀಸರು ಕ್ರಮ ವಹಿಸಿದರು. ರೈತರು ದಾರಿಯಲ್ಲಿ ಮಲಗಿ ರಜೆ ತಡೆಗೆ ಮುಂದಾದರು. ಪೊಲೀಸರು ಅವರನ್ನು ಬಂಧಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next