ದೇವನಹಳ್ಳಿ: ಸ್ಥಳೀಯರ ಸಹಕಾರದಿಂದ ಅಳಿವಿನಂಚಿನಲ್ಲಿರುವ ಕೆರೆಗಳ ರಕ್ಷಣೆ ಮಾಡಲು ಕೆರೆ ಹೂಳೆತ್ತುವ ಕಾರ್ಯ ಮಾಡಲಾಗಿದೆ ಎಂದು ಕೃಷಿ ಮಾರಾಟ ನಿರ್ದೇಶಕ ಸಿಎಸ್ ಕರೀಗೌಡ ತಿಳಿಸಿದರು.
ತಾಲೂಕಿನ ಕೊಯಿರಾ ಗ್ರಾಮದ ಕೆರೆಗೆ ಮಳೆ ನೀರು ಹರಿದ ಪರಿಣಾಮ ಗ್ರಾಮಸ್ಥರ ವತಿಯಿಂದ ಕೆರೆಗೆ ಬಾಗಿನ ಅರ್ಪಿಸಿ ಮಾತನಾಡಿದ ಅವರು, ನಾನು ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಕೆರೆಗಳ ಹೂಳೆತ್ತಿದರೆ ಜಲ ಸಂರಕ್ಷಣೆಯಾಗುತ್ತದೆ ಎಂಬ ದೃಷ್ಟಿಯಿಂದ ಸಾರ್ವಜನಿಕರ ಸಹಕಾರ ಪಡೆದು ಜಿಲ್ಲೆಯಲ್ಲಿ 31 ಕೆರೆ ಗಳನ್ನು ಸಾರ್ವಜನಿಕರಿಂದ ಅಭಿವೃದ್ಧಿ ಪಡಿಸಲಾಯಿತು ಎಂದರು.
ದೇವನಹಳ್ಳಿ ತಾಲೂಕಿನಲ್ಲಿ 12 ಕೆರೆಗಳನ್ನು ಹೂಳೆತ್ತಲಾಗಿದ್ದು, ಮುಂದಿನ ಬೇಸಿಗೆ ವೇಳೆಗೆ ಕೊಯಿರಾ ಗ್ರಾಮದ 19 ಎಕರೆಯ ವಿಸ್ತಿರ್ಣದ ಕೆರೆಯನ್ನು ಹೂಳೆತ್ತುವ ಕಾರ್ಯ ಮಾಡಲಾಗುವುದು. ಈಗಾಗಲೇ ರೋಟರಿ ಸಂಸ್ಥೆ 50 ಲಕ್ಷ ರೂ. ನೀಡಿದ್ದು, ಶೇ.40 ರಷ್ಟು ಕೆಲಸ ಪೂರ್ಣಗೊಂಡಿದೆ. ಮಳೆ ನೀರು ಕೊಯ್ಲು ಅಳವಡಿಸಿಕೊಳ್ಳುವಂತೆ ನೋಟೀಸ್ ನೀಡಲಾಗಿತ್ತು. ದೊಡ್ಡಬಳ್ಳಾಪುರದ ಕಲ್ಯಾಣ ಮಂಟಪಗಳು, ಸೇರಿದಂತೆ ಹಲವು ಕಡೆಗಳಲ್ಲಿ ಮಳೆ ಕೊಯ್ಲು ಪದ್ಧತಿಯನ್ನು ಅಳವಡಿಸಲಾಗಿದೆ ಎಂದರು.
ಮನುಷ್ಯ ಸೇರಿದಂತೆ ಪ್ರತಿ ಜೀವಿಗಳಿಗೂ ನೀರು ಬೇಕು. ಬತ್ತಿ ಹೋಗಿರುವ ಕೆರೆಗಳನ್ನು ಪುನಶ್ಚೇತನ ಮಾಡಬೇಕಾದ ಅನಿವಾರ್ಯತೆ ಇದ್ದು, ಕೆರೆಯ ಅಭಿವೃದ್ಧಿಗಾಗಿ ಎಲ್ಲರ ಸಹಕಾರ ಅತ್ಯವಶ್ಯವಿದೆ. ಕೆರೆ ಹೂಳೆತ್ತು ಜನರು ಸ್ವಯಂ ಪ್ರೇರಿತವಾಗಿ ಮುಂದೆ ಬರುತ್ತಿದ್ದಾರೆ. ಹಿರಿಯರು ತಮ್ಮ ದೂರದೃಷ್ಠಿಯಿಂದ ನಿರ್ಮಿಸಿರುವ ಜಲ ಮೂಲವಾದ ಕೆರೆಗಳ ಪುನಃ ಶ್ಚೇತನಕ್ಕೆ ಒತ್ತು ನೀಡಿದರೆ ಕೆರೆಗಳಲ್ಲಿ ನೀರಿನ ಅಂತರ್ಜಲ ಮಟ್ಟ ಹೆಚ್ಚುತ್ತದೆ ಎಂದರು.
ಸರ್ಕಾರದ ಯಾವುದೇ ಅನುದಾನ ಬಳಸದೆ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಜಿಲ್ಲೆ ಯ ಹಲವು ಕೆರೆಗಳನ್ನು ಹೂಳೆತ್ತುತ್ತಿದ್ದೇವೆ. ಜಲಮೂಲ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಕೆರೆ ಅಭಿವೃದ್ದಿಯಲ್ಲಿ ಸ್ಥಳೀಯರ ಸಹಭಾಗಿತ್ವ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು.
ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಸ್ ಹರೀಶ್ ಮಾತನಾಡಿ, ಅರ್ಕಾವತಿ ನದಿ ಮೂಲದ ವ್ಯಾಪ್ತಿಯಲ್ಲಿ ಅರಣ್ಯ ಮತ್ತು ಕೆರೆಗಳ ಅಭಿವೃದ್ಧಿಯಾಗಬೇಕು. ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನಾ ಪ್ರಾಧಿಕಾರದಲ್ಲಿ ಎಕರೆಗೆ ಇಂತಿಷ್ಟು ಹಣವನ್ನು ಕಟ್ಟಿಸಿಕೊಳ್ಳುತ್ತಾರೆ ಆದರೆ ಅರಣ್ಯ ಮತ್ತು ಕೆರೆಗಳ ಅಭಿವೃದ್ಧಿಗೆ ಆ ಅನುದಾನದ ಬಿಡುಗಡೆ ಮಾಡುತ್ತಿಲ್ಲ ಎಂದು ಆರೋಪಿಸಿದರು.
ಈ ವೇಳೆ ಕೃಷಿ ಮಾರಾಟ ನಿರ್ದೇಶಕ ಸಿಎಸ್ ಕರೀಗೌಡ ಅವರ ಪತ್ನಿ ಹರಿಣಿ , ಸಾಮಾಜಿಕ ಕಾರ್ಯಕರ್ತ ಚಿಕ್ಕೇಗೌಡ, ಗ್ರಾಪಂ ಅಧ್ಯಕ್ಷ ಕೆ.ಎಸ್.ಶ್ರೀನಿವಾಸ್, ಗ್ರಾಪಂ ಸದಸ್ಯ ರಮೇಶ್ ಬಾಬು, ಕೃಷಿಕ ಸಮಾಜದ ತಾಲೂಕು ನಿರ್ದೇಶಕ ಎಚ್.ಎಮ್ ರವಿಕುಮಾರ್, ತಾಲೂಕು ಬಿಜೆಪಿ ಉಪಾಧ್ಯಕ್ಷ ಕೆ.ಸಿ.ಮುನಿರಾಜು, ಮುಖಂಡರಾದ ರವಿಕುಮಾರ್, ವೆಂಕಟೇಶ್, ನಾಗೇಶ್, ಮುನಿರಾಜು ಇದ್ದರು.