Advertisement

ಕೋರ್ಟ್‌ ಆದೇಶದಿಂದ ಬಾಲಕಿಯರ ರಕ್ಷಣೆ

04:22 PM May 13, 2019 | Team Udayavani |

ಕೊಪ್ಪಳ: ಬಾಲ್ಯ ವಿವಾಹ ತಡೆಯುವಲ್ಲಿ ಹಲವು ಅಧಿಕಾರಿಗಳು-ಪಾಲಕರ ನಡುವೆ ಜಗಳ ಆಗುವುದನ್ನು ನೋಡಿದ್ದೀರಾ. ಆದರೆ ಇಲ್ಲೊಂದು ಗ್ರಾಮದಲ್ಲಿ ಮಕ್ಕಳಿಗೆ ಬಾಲ್ಯ ವಿವಾಹ ಮಾಡಬೇಡಿ ಎಂದು ಮನವಿ ಮಾಡಿದರೂ ನಿರ್ಲಕ್ಷ ್ಯ ವಹಿಸಿದ ಪಾಲಕರಿಗೆ ಬಿಸಿ ಮುಟ್ಟಿಸಲು ಕೋರ್ಟ್‌ನಿಂದ ಆದೇಶ ತರುವ ಮೂಲಕ ಅಧಿಕಾರಿಗಳು ಮೂವರು ಅಪ್ರಾಪ್ತೆಯರ ವಿವಾಹ ತಡೆದಿದ್ದಾರೆ.

Advertisement

ಹೌದು.. ತಾಲೂಕಿನ ಕುಣಕೇರಿ ತಾಂಡಾದಲ್ಲಿ ಐವರು ಅಪ್ರಾಪ್ತೆಯರಿಗೆ ಮದುವೆ ಮಾಡುವ ಕುರಿತು ಜಿಲ್ಲಾಡಳಿತಕ್ಕೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ನೀಡಿ ಪಾಲಕರಿಗೆ ತಿಳಿವಳಿಕೆ ನೀಡಿ ಬಾಲಕಿಯರನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸುವಂತೆ ಮನವಿ ಮಾಡಿ ನೋಟಿಸ್‌ ನೀಡಿದ್ದರೂ ಪಾಲಕರು ನಿರ್ಲಕ್ಷ್ಯ ವಹಿಸಿದ್ದರಿಂದ ಅಧಿಕಾರಿಗಳು ನ್ಯಾಯಾಲಯದ ಆದೇಶದೊಂದಿಗೆ ಮಕ್ಕಳನ್ನು ತಮ್ಮ ವಶಕ್ಕೆ ಪಡೆದಿದ್ದಾರೆ.

ಇಬ್ಬರು ಮಕ್ಕಳ ವಶಕ್ಕೆ ಪಡೆದಿದ್ದಕ್ಕೆ ಘೇರಾವ್‌: ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಶಿವಲೀಲಾ ವನ್ನೂರು, ಯಮನಮ್ಮ, ರವಿ ಬಡಿಗೇರ, ವಿಜಯ ಬಡೆಗೇರ, ಶಿಶು ಅಭಿವೃದ್ಧಿ ಯೋಜನೆ ಕಚೇರಿಯ ಜಯಶ್ರೀ, ಸುಮಂಗಲಾ, ಚೈಲ್ಡ್ಲೈನ್‌ನ ರಾಘವೇಂದ್ರ, ಸುನೀಲ್ ಮತ್ತು ಪಿಎಸ್‌ಐ ಗುರುರಾಜ ಕಟ್ಟಿಮನಿ ಸೇರಿ ಇತರೆ ಅಧಿಕಾರಿಗಳ ತಂಡ ಇಬ್ಬರು ಬಾಲಕಿಯರನ್ನು ವಶಕ್ಕೆ ಪಡೆದು ವಾಪಾಸ್ಸಾಗುವ ವೇಳೆ ಜನರು ಪೊಲೀಸರ ವಾಹನಕ್ಕೆ ಘೇರಾವ್‌ ಹಾಕಿದ್ದರು. ಅಧಿಕಾರಿಗಳ ಬಳಿ ಇದ್ದ ಇಬ್ಬರು ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಲಾಗಿತ್ತು.

ಕೋರ್ಟ್‌ ಆದೇಶ: ಆದರೆ, ಇನ್ನೂ ಮೂವರು ಬಾಲಕಿಯರನ್ನು ಕುಟುಂಬಸ್ಥರು ಅನ್ಯ ಗ್ರಾಮಗಳಿಗೆ ಕಳುಹಿಸಿದ್ದರು. ಅಲ್ಲದೇ ಗ್ರಾಮದಲ್ಲಿನ ಜಾತ್ರೆಯಲ್ಲಿ ಮದುವೆ ಮಾಡುವುದಾಗಿ ಮತ್ತೆ ಜಿಲ್ಲಾಡಳಿತಕ್ಕೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳ ತಂಡ ನ್ಯಾಯಾಧೀಶರಿಂದ ಮಕ್ಕಳ ರಕ್ಷಣೆಗೆ ಆದೇಶದೊಂದಿಗೆ ಗ್ರಾಮಕ್ಕೆ ತೆರಳಿ ಶನಿವಾರ ಮಧ್ಯ ರಾತ್ರಿಯೇ ಮೂವರು ಬಾಲಕಿಯರನ್ನು ವಶಕ್ಕೆ ಪಡೆದು ಬಾಲ್ಯ ವಿವಾಹದಿಂದ ಮಕ್ಕಳನ್ನು ಪಾರು ಮಾಡಿದ್ದಾರೆ.

ವಾಗ್ವಾದ: ಮೂವರು ಮಕ್ಕಳನ್ನು ವಶಕ್ಕೆ ಪಡೆಯುವಲ್ಲಿಯೂ ಪಾಲಕರು ವಿರೋಧ ವ್ಯಕ್ತಪಡಿಸಿ ಪೊಲೀಸರು ಹಾಗೂ ಅಕಾರಿಗಳೊಂದಿಗೆ ವಾಗ್ವಾದ ನಡೆಸಿದ್ದಾರೆ. ಆದರೆ ನ್ಯಾಯಾಧೀಶರು ಕೊಪ್ಪಳ ಗ್ರಾಮೀಣ ಪೊಲೀಸ್‌ ಠಾಣೆಗೆ ಲಿಖೀತ ಆದೇಶ ಮಾಡಿ ಬಾಲಕಿಯರ ರಕ್ಷಣೆ ಮಾಡುವ ಕುರಿತು ಸೂಚನೆ ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಹಲವು ಕಸರತ್ತು ನಡೆಸಿ ಅನ್ಯ ಗ್ರಾಮದಲ್ಲಿ ವಾಸ್ತವ್ಯ ಮಾಡಿದ್ದ ಮಕ್ಕಳನ್ನು ಶನಿವಾರ ರಾತ್ರಿ ವಶಕ್ಕೆ ಪಡೆದಿದ್ದಾರೆ. ಮಕ್ಕಳ ರಕ್ಷಣಾ ತಂಡದಲ್ಲಿ ಜಯಶ್ರೀ ಕೂಲಿ, ರವಿ ಬಡಿಗೇರ್‌, ಶರಣಪ್ಪ ಹಿರೇತೆಮ್ಮಿನಾಳ, ಶಾಂತಕುಮಾರ ಗೌರಿಪುರ ನಾನಾ ಕಸರತ್ತು ನಡೆಸಿ ಮಕ್ಕಳನ್ನು ಬಾಲ್ಯ ವಿವಾಹದಿಂದ ಪಾರು ಮಾಡಿದ್ದಾರೆ.

Advertisement

ಶನಿವಾರ ರಾತ್ರಿ ಮಕ್ಕಳನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಹಾಜರು ಪಡಿಸಲಾಗಿದೆ. ಒಟ್ಟಿನಲ್ಲಿ ಕುಣಕೇರಿ ತಾಂಡಾದಲ್ಲಿ ಐವರು ಬಾಲಕಿಯರಿಗೆ ಮದುವೆ ಮಾಡಲು ಉದ್ದೇಶಿಸಿದ್ದ ಕುಟುಂಬಸ್ಥರಿಂದ ಮಕ್ಕಳನ್ನು ರಕ್ಷಣೆ ಮಾಡಲಾಗಿದೆ. ಪಾಲಕರ ಹೈಡ್ರಾಮಾದ ಮಧ್ಯೆಯೂ ಅಧಿಕಾರಿಗಳ ಕಾರ್ಯಕ್ಷಮತೆಗೆ ಪ್ರಶಂಸೆ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next