Advertisement

Tiger Claw Case: ಪ್ರಭಾವಿಗಳಿಗೆ ಅರಣ್ಯ ಅಧಿಕಾರಿಗಳ ಶ್ರೀರಕ್ಷೆ ?

11:23 PM Oct 27, 2023 | Team Udayavani |

ಬೆಂಗಳೂರು: ಹುಲಿ ಉಗುರು ಪ್ರಕರಣದಲ್ಲಿ ಸೆಲೆಬ್ರೆಟಿಗಳು, ಪ್ರಭಾವಿ ರಾಜಕಾರಣಿಗಳ ಸಂಬಂಧಿಕರ ಬಂಧನ ಯಾಕಿಲ್ಲ ಎಂಬ ಪ್ರಶ್ನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ಯಾಗುತ್ತಿದ್ದು, ಅರಣ್ಯ ಅಧಿಕಾರಿಗಳ ನಡೆ ಅನುಮಾನಕ್ಕೀಡು ಮಾಡಿದೆ.

Advertisement

ಆದರೆ ಈ ಆರೋಪವನ್ನು ತಳ್ಳಿ ಹಾಕಿರುವ ತನಿಖಾಧಿಕಾರಿಗಳು, ನೈಜ ಹುಲಿ ಉಗುರು ಹೊಂದಿರುವವರನ್ನು ನಿರ್ದಾಕ್ಷಿಣ್ಯವಾಗಿ ಬಂಧಿಸುತ್ತೇವೆ. ಸೆಲೆಬ್ರೆಟಿಗಳಲ್ಲಿ ಪತ್ತೆಯಾಗಿರುವ ಹುಲಿ ಉಗುರು ನಕಲಿ ಎಂದು ವಾದಿಸಿದ್ದಾರೆ.

ಬಿಗ್‌ಬಾಸ್‌ ಸ್ಪರ್ಧಿ ವರ್ತೂರು ಸಂತೋಷ್‌ ಬಂಧನದ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಹುಲಿ ಉಗುರು ಧರಿಸಿದ್ದ ನಟರಾದ ದರ್ಶನ್‌, ಜಗ್ಗೇಶ್‌, ನಿಖೀಲ್‌ ಕುಮಾರಸ್ವಾಮಿ, ರಾಕ್‌ಲೈನ್‌ ವೆಂಕಟೇಶ್‌, ಆರ್ಯವರ್ಧನ ಗುರೂಜಿ ಸಹಿತ ಹಲವು ಸೆಲೆಬ್ರೆಟಿಗಳ ಫೋಟೋಗಳು ವೈರಲ್‌ ಆಗಿದ್ದವು. ವರ್ತೂರು ಸಂತೋಷ್‌ನನ್ನು ಬಂಧಿಸಿರುವ ಅರಣ್ಯ ಅಧಿಕಾರಿಗಳು ಸೆಲೆಬ್ರೆಟಿಗಳ ವಿಚಾರದಲ್ಲಿ ಯಾಕೆ ಮೃದು ಧೋರಣೆ ತಳೆದಿದ್ದಾರೆ? ಹುಲಿ ಉಗುರು ಹೊಂದಿದ್ದ ಸಾಮಾನ್ಯ ಜನರನ್ನು ಮಾತ್ರ ಬಂಧಿಸಿರುವುದು ಒಂದು ಕಣ್ಣಿಗೆ ಸುಣ್ಣ, ಮತ್ತೂಂದು ಕಣ್ಣಿಗೆ ಬೆಣ್ಣೆ ಎಂಬಂತಾಗಿದೆ ಎಂದು ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಹೊರ ಹಾಕಿದ್ದಾರೆ. ಹುಲಿ ಉಗುರು ಧರಿಸಿರುವ ಆರೋಪದಲ್ಲಿ ಚಿಕ್ಕಮಗಳೂರಿನ ಇಬ್ಬರು ಅರ್ಚಕರನ್ನು ಬಂಧಿಸಿರುವುದು ಹಿಂದೂ ಕಾರ್ಯಕರ್ತರ ತಾಳ್ಮೆ ಕಟ್ಟೆಯೊಡೆಯುವಂತೆ ಮಾಡಿದೆ.

ಮೂಲಗಳ ಪ್ರಕಾರ, ಹುಲಿ ಉಗುರು ಪ್ರಕರಣದಲ್ಲಿ ಸೆಲೆಬ್ರೆಟಿಗಳ ಹೆಸರು ಪ್ರಸ್ತಾವವಾಗುತ್ತಿದ್ದಂತೆ ಅವರು ಅಲರ್ಟ್‌ ಆಗಿದ್ದರು. ವೈರಲ್‌ ಆಗಿರುವ ಫೋಟೋದಲ್ಲಿದ್ದ ಮಾದರಿಯ ನಕಲಿ ಹುಲಿ ಉಗುರನ್ನು ತಂದು ಅರಣ್ಯ ಅಧಿ ಕಾರಿಗಳ ದಾರಿ ತಪ್ಪಿಸಿದ್ದಾರೆ ಎನ್ನಲಾಗಿದೆ. ಇಲಾಖೆ ಸಿಬಂದಿ ನಡೆಗೆ ಸಾರ್ವಜನಿಕ ವಲಯದಲ್ಲಿ ಅಸಮಾಧಾನ ಭುಗಿಲೆದ್ದ ಬೆನ್ನಲ್ಲೇ ಹುಲಿ ಉಗುರು ಕಾರ್ಯಾಚರಣೆಗೂ ಇಲಾಖೆ ಸಿಬಂದಿ ತಾತ್ಕಾಲಿಕವಾಗಿ ಬ್ರೇಕ್‌ ಹಾಕಿದ್ದಾರೆ.

ಅರಣ್ಯ ಅಧಿಕಾರಿಗಳು ಹೇಳುವುದೇನು?
ವನ್ಯ ಜೀವಿಗಳ ಅವಯವ ಹೊಂದಿರುವವರ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳುತ್ತೇವೆ. ಸೆಲೆಬ್ರೆಟಿಗಳ ಮನೆಗಳಿಂದ ಜಪ್ತಿ ಮಾಡಿರುವ ಹುಲಿ ಉಗುರು ಅಸಲಿಯಲ್ಲ ಎಂಬುದು ಮೇಲ್ನೋಟಕ್ಕೆ ದೃಢಪಟ್ಟಿದೆ. ಜಗ್ಗೇಶ್‌ ಮನೆಯಿಂದ ಜಪ್ತಿ ಮಾಡಿರುವುದು ನೈಜ ಹುಲಿ ಉಗುರಿನಂತೆ ಕಂಡಿದ್ದರೂ ಎಫ್ಎಸ್‌ಎಲ್‌ ವರದಿ ಬಂದ ಬಳಿಕವೇ ಈ ಗೊಂದಲಕ್ಕೆ ತೆರೆ ಬೀಳಲಿದೆ. ವರ್ತೂರು ಸಂತೋಷ್‌ ಅವರದ್ದು ಅಸಲಿ ಹುಲಿ ಉಗುರು ಎಂಬುದು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಬಂಧಿಸಿದ್ದೇವೆ. ಇದರಲ್ಲಿ ಬೇರೆ ದುರುದ್ದೇಶ ಇಲ್ಲ ಎಂದು ಹುಲಿ ಉಗುರು ಪ್ರಕರಣದ ತನಿಖಾಧಿಕಾರಿ ರವೀಂದ್ರ ಸ್ಪಷ್ಟಪಡಿಸಿದ್ದಾರೆ.

Advertisement

ವರ್ತೂರು ಸಂತೋಷ್‌ಗೆ ಜಾಮೀನು

ವರ್ತೂರ್‌ ಸಂತೋಷ್‌ಗೆ ನ್ಯಾಯಾಲಯವು ಷರತ್ತುಬದ್ದ ಜಾಮೀನು ಮಂಜೂರು ಮಾಡಿದೆ. 4 ಸಾವಿರ ರೂ. ಭದ್ರತೆ, ಒಬ್ಬರ ಜಾಮೀನು ಒದಗಿಸುವಂತೆ ಸಂತೋಷ್‌ಗೆ ಇಲ್ಲಿನ 2ನೇ ಎಸಿಜೆಎಂ ನ್ಯಾಯಾಲಯ ಜಾಮೀನು ನೀಡಿದೆ. ವರ್ತೂರು ಸಂತೋಷ್‌ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ತೀರ್ಪನ್ನು ನ್ಯಾಯಾಲಯವು ಶುಕ್ರವಾರಕ್ಕೆ ಕಾದಿರಿಸಿತ್ತು.

ಚಿನ್ನದಂಗಡಿಗಳಲ್ಲಿ ಪರಿಶೀಲನೆ
ಬೆಂಗಳೂರು ಸಹಿತ ಕೆಲವು ಜಿಲ್ಲೆಗಳಲ್ಲಿರುವ ಚಿನ್ನದ ಅಂಗಡಿಗಳಲ್ಲಿ ಶುಕ್ರವಾರ ಅರಣ್ಯ ಇಲಾಖೆ ಅಧಿಕಾರಿಗಳು ಹುಲಿ ಉಗುರಿಗಾಗಿ ಶೋಧ ನಡೆಸಿದ್ದಾರೆ. ಅರಣ್ಯ ಇಲಾಖೆಯ ಬೇಟೆ ಬಗ್ಗೆ ಸುದ್ದಿ ಹರಡುತ್ತಿದ್ದಂತೆ ಜುವೆಲರಿ ಮಾಲಕರೂ ಅಲರ್ಟ್‌ ಆಗಿದ್ದರು ಎನ್ನಲಾಗಿದೆ. ಹೀಗಾಗಿ ಅರಣ್ಯ ಅಧಿಕಾರಿಗಳಿಗೆ ವನ್ಯ ಜೀವಿಗಳ ಅಂಗಾಂಗ ಸಿಕ್ಕದೇ ಬರಿಗೈಲಿ ವಾಪಸಾಗಿದ್ದಾರೆ ಎಂದು ತಿಳಿದು ಬಂದಿದೆ.

ಕಾನೂನು ಎಲ್ಲರಿಗೂ ಒಂದೇ
ದರ್ಗಾ, ಮಸೀದಿಗಳಲ್ಲಿ ನವಿಲುಗರಿ ಇಡಲಾಗುತ್ತಿದೆ. ಅವರ ವಿರುದ್ಧವೂ ಕ್ರಮ ಕೈಗೊಳ್ಳಬೇಕಲ್ಲವೇ ಎಂಬ ಬಿಜೆಪಿ ಆರೋಪದ ಬಗ್ಗೆ ಗೃಹ ಸಚಿವ ಡಾ| ಜಿ.ಪರಮೇಶ್ವರ್‌ ಪ್ರತಿಕ್ರಿಯಿಸಿ, ಕಾನೂನು ಎಲ್ಲರಿಗೂ ಒಂದೇ. ವನ್ಯ ಜೀವಿ ಅವಯವಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದರೆ ಕಾನೂನು ಚೌಕಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಅರಣ್ಯ ಸಚಿವರು ಈಗಾಗಲೇ ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next