Advertisement

ರಂಗಾಯಣದಿಂದ ಕಲೆ-ಸಂಸ್ಕೃತಿ ರಕ್ಷಣೆ

11:35 AM Mar 25, 2022 | Team Udayavani |

ಧಾರವಾಡ: ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ರಂಗಾಯಣಗಳು ನಮ್ಮ ಭಾರತೀಯ ಕಲೆ, ಸಂಸ್ಕೃತಿ, ಪರಂಪರೆಗಳನ್ನು ಉಳಿಸಿ, ಬೆಳೆಸುವುದರ ಜತೆಗೆ ಮುಂದಿನ ಪೀಳಿಗೆಗೂ ಅವುಗಳನ್ನು ವಿಸ್ತರಿಸುವ ಕಾರ್ಯವನ್ನು ಮಾಡುತ್ತಿವೆ ಎಂದು ಜಾನಪದ ತಜ್ಞ ಡಾ| ಶ್ರೀಶೈಲ ಹುದ್ದಾರ ಹೇಳಿದರು.

Advertisement

ನಗರದ ಸುವರ್ಣ ಸಾಂಸ್ಕೃತಿಕ ಸಮುಚ್ಛಯದಲ್ಲಿ ರಂಗಾಯಣವು ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಹಾಗೂ ಗ್ರಾಮ ವಿಕಾಸ ಸಹಯೋಗದಲ್ಲಿ ಮಾ.24ರಿಂದ 28ರ ವರೆಗೆ ಹಮ್ಮಿಕೊಂಡಿರುವ ಗ್ರಾಮ ವಿಕಾಸಕ್ಕಾಗಿ ರಂಗ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ರಂಗಾಯಣವು ಗ್ರಾಮ ವಿಕಾಸಕ್ಕಾಗಿ ರಂಗ ತರಬೇತಿ ಕಾರ್ಯಾಗಾರ ಆಯೋಜಿಸುವ ಮೂಲಕ ರಂಗಭೂಮಿ ಚಟುವಟಿಕೆಗಳನ್ನು ಗ್ರಾಮೀಣ ಪ್ರದೇಶಗಳಿಗೆ ವಿಸ್ತರಿಸುತ್ತಿದೆ. ಇದರಿಂದ ದೇಶೀಯ ಕಲೆಗಳಾದ ದೊಡ್ಡಾಟ, ಸಣ್ಣಾಟ, ಬಯಲಾಟ ಹೀಗೆ ಹಲವಾರು ಕಲೆಗಳನ್ನು ಬೆಳೆಸುತ್ತಿದೆ ಎಂದರು.

ಮೈಸೂರು ಕ್ಯಾಟ ಸಂಸ್ಥೆಯ ನಿರ್ದೇಶಕ ನಾ. ಶ್ರೀನಿವಾಸ ಪಾಪು ಮಾತನಾಡಿ, ಗ್ರಾಮ ವಿಕಾಸಕ್ಕಾಗಿ ರಂಗಭೂಮಿ ಪೂರಕವಾಗಿದೆ. ಕಳೆದ ಒಂಭತ್ತು ತಿಂಗಳಿಂದ ಗ್ರಾಮ ವಿಕಾಸ ಕಾರ್ಯಕ್ರಮಗಳು ನಡೆಯುತ್ತಿವೆ. ಗ್ರಾಮಗಳಲ್ಲಿ ಸಾಮಾಜಿಕ, ಪ್ರಚಲಿತ ವಿದ್ಯಮಾನಗಳು ಮತ್ತು ವಿಚಾರಗಳನ್ನು ರಂಗಭೂಮಿ ಮೂಲಕ ಅರಿವನ್ನು ಮೂಡಿಸುವ ಮೂಲಕ ಗ್ರಾಮ ವಿಕಾಸ ಮಾಡಲು ಸಾಧ್ಯವಿದೆ. ಗ್ರಾಮ ವಿಕಾಸವಾದರೆ ದೇಶವನ್ನು ವಿಕಾಸವಾಗುತ್ತದೆ. ಹಳ್ಳಿಗಳಲ್ಲಿರುವ ಕಲಾವಿದರಿಗೆ ಕಲಾ ಹಸಿವು ಹಾಗೂ ಸಹೃದಯತೆ ಇರುತ್ತದೆ. ನಾಟಕಗಳನ್ನು ಭಾವದಿಂದ ನೋಡುತ್ತಾರೆ. ಹೀಗಾಗಿ ನಮ್ಮ ದೇಶದ ಕಲೆ, ಸಂಸ್ಕೃತಿಗಳನ್ನು ಹುಡುಕಿಕೊಂಡು ಬೇರೆ ದೇಶದವರು ಬರುತ್ತಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿದ್ದ ರಂಗಾಯಣ ನಿರ್ದೇಶಕ ರಮೇಶ ಪರವಿ ನಾಯ್ಕರ ಮಾತನಾಡಿ, ಈ ರಂಗ ತರಬೇತಿ ಕಾರ್ಯಾಗಾರದಲ್ಲಿ ಒಂದು ನಾಟಕವನ್ನು ಸಿದ್ಧಪಡಿಸಿ ಅಥಣಿಯ ಸಂಬರಗಿ ಗ್ರಾಮದಲ್ಲಿ ನಾಟಕವನ್ನು ಪ್ರದರ್ಶಿಸಲಾಗುತ್ತದೆ. ಈ ಮೂಲಕ ಕನ್ನಡ ನಾಡು-ನುಡಿ ಕುರಿತು ಗಡಿ ಪ್ರದೇಶದ ಜನರಿಗೆ ತಿಳಿಸಿಕೊಡಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ಹೊಸ ಕಲಾವಿದರಿಗೆ ಅವಕಾಶಗಳನ್ನು ನೀಡಲಾಗುತ್ತಿದೆ ಎಂದರು.

Advertisement

ಕರ್ನಾಟಕ ನಾಟಕ ಅಕಾಡೆಮಿ ಸದಸ್ಯರಾದ ರಾಧಾ ಕೊಡಗು, ರೆಪರ್ಟರಿ ಕಲಾವಿದರು, ಶಿಬಿರಾರ್ಥಿಗಳು ಸೇರಿದಂತೆ ಹಲವರು ಇದ್ದರು. ಫಕ್ಕೀರಪ್ಪ ಮಾದನಭಾವಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next