Advertisement

ಸಮನ್ವಯದಿಂದ ಪಶ್ಚಿಮಘಟ್ಟಗಳ ರಕ್ಷಣೆ ಮಾಡಿ

03:34 PM Apr 21, 2022 | Team Udayavani |

ಚಿಕ್ಕಮಗಳೂರು: ಅರಣ್ಯ ಇಲಾಖೆ, ಕಂದಾಯ ಇಲಾಖೆ ಸಮನ್ವಯದಿಂದ ಕಾರ್ಯನಿರ್ವಹಿಸಿ ಪಶ್ಚಿಮಘಟ್ಟಗಳ ಸಂರಕ್ಷಣಾ ಕಾರ್ಯದಲ್ಲಿ ಕೈಜೋಡಿಸಬೇಕು ಎಂದು ರಾಜ್ಯ ಪಶ್ಚಿಮಘಟ್ಟಗಳ ಸಂರಕ್ಷಣಾ ಪಡೆ ಅಧ್ಯಕ್ಷ ರವಿಕುಶಾಲಪ್ಪ ಹೇಳಿದರು.

Advertisement

ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪಶ್ಚಿಮಘಟ್ಟ ಕಾರ್ಯ ಪಡೆ ಹಾಗೂ ವಿವಿಧ ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪರಿಸರ, ಅರಣ್ಯದ ಬಗ್ಗೆ ಅರಿವು ಮೂಡಿಸದೇ ಹೋದರೆ ಮುಂದಿನ ದಿನಗಳಲ್ಲಿ ಕಷ್ಟ ಎದುರಾಗಲಿದೆ. ವಿದ್ಯಾರ್ಥಿಗಳು, ಯುವಸಮೂಹಕ್ಕೆ ಈ ಬಗ್ಗೆ ಅರಿವು ಮೂಡಿಸುವ ಕಾರ್ಯಗಳಾಗಬೇಕು. ಹೆಚ್ಚು ಗಿಡ ನೆಡುವ ಕಾರ್ಯಗಳಾಗಬೇಕು ಎಂದರು.

ಅರಣ್ಯ ಸಂರಕ್ಷಣೆಗೆ ಸರ್ಕಾರ ಹೆಚ್ಚಿನ ಆರ್ಥಿಕ ನೆರವು ನೀಡುತ್ತಿದೆ. ಮಾನವ-ವನ್ಯಜೀವಿ ಸಂಘರ್ಷ ತಡೆಗಟ್ಟಲು ಗಮನ ಹರಿಸಬೇಕಿದೆ. ಆನೆ ಹಾವಳಿ ತಪ್ಪಿಸಲು ಬ್ಯಾರಿಕೇಡ್‌ಗಳ ನಿರ್ಮಾಣ ಮಾಡಬೇಕು. ಕಾಡಿನೊಳಗೆ ಅವುಗಳಿಗೆ ಆಹಾರ, ನೀರು ಮುಂತಾದ ಸೌಲಭ್ಯ ಒದಗಿಸುವ ಕಾರ್ಯವನ್ನು ಅರಣ್ಯ ಇಲಾಖೆ ಮಾಡಬೇಕು ಎಂದರು.

ಅರಣ್ಯ ಮೂಲನಿವಾಸಿಗಳಿಗೆ ನಿಯಮಾನು ಸಾರ ಸೌಲಭ್ಯಗಳನ್ನು ಒದಗಿಸಬೇಕು. ಕೆಳಹಂತದ ಅರಣ್ಯ ಸಿಬ್ಬಂದಿಗಳಿಗೆ ಸಮರ್ಪಕ ವಸತಿ ವ್ಯವಸ್ಥೆ ಕಲ್ಪಿಸಬೇಕು. ಸಕಾಲದಲ್ಲಿ ಅವರಿಗೆ ವೇತನ ಪಾವತಿಯಾಗಲು ಕ್ರಮವಹಿಸಬೇಕು. ರೈತರು ಜಮೀನುಗಳಲ್ಲಿ ಗಿಡಗಳನ್ನು ನೆಡಲು ಪ್ರೋತ್ಸಾಹಿಸಬೇಕು. ಇದಕ್ಕಾಗಿ ಪ್ರೋತ್ಸಾಹಧನವನ್ನು ನೀಡಲು ಸೂಚಿಸಿದರು.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಶೇ.30 ಕ್ಕಿಂತಲೂ ಹೆಚ್ಚು ಅರಣ್ಯ ಪ್ರದೇಶವಿದೆ. ಅದರಲ್ಲಿ ಬೇರೆ ಬೇರೆ ವಿಭಾಗಗಳಿದ್ದು, ಜಿಲ್ಲೆಯಲ್ಲಿ ಮುಖ್ಯವಾದ ಹಾಗೂ ಇಲ್ಲಿಗೆ ಸೀಮಿತವಾದ ವಿಶೇಷ ಪ್ರಬೇಧದ ಮರ ಗಿಡಗಳು, ಪ್ರಾಣಿ ಪಕ್ಷಿಗಳಿವೆ. ಸಾಮಾಜಿಕ ಅರಣ್ಯ ವತಿಯಿಂದ ಪ್ರತೀ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಜೀವ ವೈವಿಧ್ಯತೆ ನಿರ್ವಹಣಾ ಸಮಿತಿಗಳನ್ನು ರಚಿಸಲಾಗಿದೆ ಎಂದು ಚಿಕ್ಕಮಗಳೂರು ಉಪವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿ ಎನ್‌. ಇ.ಕಾಂತಿ ಸಭೆಗೆ ಮಾಹಿತಿ ನೀಡಿದರು.

Advertisement

2018-19 ಸಾಲಿನ ಹುಲಿ ಗಣತಿ ಪ್ರಕಾರ ಸುಮಾರು 35 ಹುಲಿಗಳು ಜಿಲ್ಲೆಯ ಅರಣ್ಯ ಗಳಲ್ಲಿವೆ. ಕೃಷಿಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರೈತರಿಗೆ ಸಬ್ಸಿಡಿ ದರದಲ್ಲಿ ಸಸಿಗಳನ್ನು ವಿತರಣೆ ಮಾಡಿ ನಿರ್ವಹಣೆಗಾಗಿ ಮೂರು ವರ್ಷಗಳಿಗೆ ಧನ ಸಹಾಯ ನೀಡಲಾಗುತ್ತಿದೆ. 2018-19 ಸಾಲಿನಲ್ಲಿ ಸುಮಾರು 4,62,662 ಸಾವಿರ ಸಸಿಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಅರಣ್ಯಕ್ಕೆ ಸಂಬಂಧಿಸಿದಂತೆ ಹಲವಾರು ಪ್ರಕರಣಗಳಿದ್ದು, ಅವುಗಳಲ್ಲಿ ಒತ್ತುವರಿ, ಶ್ರೀಗಂಧ ಮರ ಕಳ್ಳಸಾಗಣೆ, ವನ್ಯಮೃಗ ಬೇಟೆ ಸೇರಿದಂತೆ ಒಟ್ಟು 9,227 ಪ್ರಕರಣಗಳು ದಾಖಲಾಗಿದ್ದು, ಹಂತಹಂತವಾಗಿ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗುತ್ತಿದೆ ಎಂದರು.

ಜಿಲ್ಲಾಧಿಕಾರಿ ಕೆ.ಎನ್.ರಮೇಶ್‌ ಮಾತನಾಡಿ, ಅರಣ್ಯ ಮತ್ತು ಗೋಮಾಳ ಜಮೀನು ವಿಭಾಗಗಳಿದ್ದು, ಅರ್ಜಿಗಳನ್ನು ವಿಲೇವಾರಿ ಮಾಡುವ ಸಂದರ್ಭಗಳಲ್ಲಿ ತೊಂದರೆಯಾಗಬಹುದು ಎಂಬ ನಿಟ್ಟಿನಲ್ಲಿ ಯಾವ ವಿಭಾಗ ಎಂದು ಗುರುತಿಸಿ, ಸರ್ವೆ ಮಾಡಿ ಪ್ರತ್ಯೇಕಿಕರಣ ಮಾಡಲಾಗುತ್ತದೆ. ದಾಖಲೆಯಲ್ಲಿ ಅರಣ್ಯ ಎಂದು ದಾಖಲಾಗಿವೆ. ಅಂತಹ ಜಮೀನಿನಲ್ಲಿ ಜನವಸತಿ, ಶಾಲೆ, ಆಸ್ಪತ್ರೆ, ವಿವಿಧ ಕಟ್ಟಡಗಳಿವೆ ಅದನ್ನು ಏನು ಮಾಡಬೇಕು ಎನ್ನುವ ಸಮಸ್ಯೆ ಎದುರಾಗುತ್ತದೆ. ಈ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗಿದೆ ಎಂದರು. ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next