ಸೈದಾಪುರ: ಕಡೇಚೂರ-ಬಾಡಿಯಾಳ ಕೈಗಾರಿಕ ಪ್ರದೇಶದಲ್ಲಿ ಭೂಮಿ ಕಳೆದುಕೊಂಡ ರೈತರು ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಯಾದಗಿರಿ-ರಾಯಚೂರ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಧರಣಿ ನಡೆಸಿದರು.
ಕಡೇಚೂರ-ಬಾಡಿಯಾಳ ಹಾಗೂ ಶಟ್ಟಿಹಳ್ಳಿ ಗ್ರಾಮದ ರೈತರಿಂದ ಕರ್ನಾಟಕ ಕೈಗಾರಿಕ ಅಭಿವೃದ್ಧಿ ಮಂಡಳಿ ಸುಮಾರು 3,300 ಎಕರೆ ಭೂಮಿ ಪಡೆದುಕೊಂಡಿದೆ. ನಿಗದಿತ ಕೈಗಾರಿಕ ಪ್ರದೇಶದಲ್ಲಿ ಭೂ ಸಂತ್ರಸ್ತರಿಗೆ ನಿವೇಶನ ಹಾಗೂ ಉದ್ಯೋಗ ಕೊಡಲಾಗುವುದು ಎಂದು ಭರವಸೆ ನೀಡಿತ್ತು. ಭೂ ಕಳೆದುಕೊಂಡು ಏಳು ವರ್ಷ ಕಳೆದರೂ ಯಾವುದೇ ಕಾರ್ಖಾನೆಗಳು ಸ್ಥಾಪನೆಯಾಗಿಲ್ಲ. ಇದರಿಂದ ಭೂಮಿ ಕಳಕೊಂಡ ರೈತರು, ಯುವಕರು ಉದ್ಯೋಗವಿಲ್ಲದೆ ಕಂಗಾಲಾಗಿ ಗುಳೆ ಹೋಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈಚೆಗೆ ಉದ್ಘಾಟನೆಗೊಂಡ ರೈಲ್ವೆ ಕೋಚ್ ಫ್ಯಾಕ್ಟರಿಯಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡದೆ, ಅನ್ಯ ರಾಜ್ಯದವರಿಗೆ ಉದ್ಯೋಗ ನೀಡಿದ್ದಾರೆ. ಸ್ಥಳೀಯರಿಗೆ ಕೆಲಸ ಕೊಡದ ಕೋಚ್ ಫ್ಯಾಕ್ಟರಿ ಬಂದ್ ಮಾಡಬೇಕು. ಯುವಕರಿಗಾಗಿ ಕೈಗಾರಿಕ ತರಬೇತಿ ಕೇಂದ್ರ ಆರಂಭಿಸಬೇಕು. ಆರೋಗ್ಯ ಹಿತದೃಷ್ಟಿಯಿಂದ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡಬೇಕು. ನೆನಗುದಿಗೆ ಬಿದ್ದಿರುವ 33 ಕೆ.ವಿ ವಿದ್ಯುತ್ ಘಟಕ ಕಾಮಗಾರಿಯನ್ನು ತಕ್ಷಣ ಪೂರ್ಣಗೊಳಿಸಬೇಕು.
ಆರಂಭದಲ್ಲಿ ಪ್ರತಿ ಎಕರೆ ಭೂಮಿಗೆ ಕೇವಲ ಆರು ಲಕ್ಷ ಮಾತ್ರ ನೀಡಿದ್ದು, ಅದರ ಬೆಲೆಯನ್ನು ಸುಮಾರು 24 ಲಕ್ಷ ರೂಪಾಯಿಗೆ ಹೆಚ್ಚಿಸಬೇಕು ಎಂಬ ಇತ್ಯಾದಿ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಧರಣಿ ಸತ್ಯಾಗ್ರಹ ನಡೆಸಿದರು. ಕಡೇಚೂರು-ಬಾಡಿಯಾಳ ಮತ್ತು ಶಟ್ಟಿಹಳ್ಳಿ ಭೂ ಸಂತ್ರಸ್ಥರ ಧರಣಿ ನಿರತ ಸ್ಥಳಕ್ಕೆ ಜಿಲ್ಲಾಡಳಿತದ ಪರವಾಗಿ ಯಾದಗಿರಿ ತಹಶೀಲ್ದಾರ್ ಮಲ್ಲೇಶ ತಂಗಾ ಆಗಮಿಸಿ, ರೈತರ ಅಹವಾಲನ್ನು ಸ್ವೀಕರಿಸಿದರು. ರೈತರ ಸಮಸ್ಯೆಗಳ ಕುರಿತು ಜಿಲ್ಲಾಡಳಿತದ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದ ನಂತರ ರೈತರು ಧರಣಿ ವಾಪಾಸ್ ಪಡೆದರು.
ಕಡೇಚೂರ ಸಂಸ್ಥಾನ ಮಠದ ಪೀಠಾಧಿಪತಿ ಗುರುಮೂರ್ತಿ ಶಿವಚಾರ್ಯ, ಸಿದ್ದಣ್ಣಗೌಡ ಕಡೇಚೂರ, ಭೀಮಣ್ಣಗೌಡ ಕ್ಯಾತನಾಳ, ಶರಣಗೌಡ ಬಾಡಿಯಾಳ, ಬಸವರಾಜಪ್ಪಗೌಡ ಬೆಳಗುಂದಿ, ಚಂದಪ್ಪ ಕಾವಲಿ, ಗೌಸುದ್ದಿನ್ ಚಂದಾಪುರ, ಸೂಗುರಪ್ಪ ಸಾಹುಕಾರ, ವೆಂಕಟರೆಡ್ಡಿ ಪಾಟೀಲ್, ವೀರೇಶ ಆವಂಟಿ, ಆಮೀರಲಿ ಕೊಣಂಪಲ್ಲಿ, ತಿಪ್ಪಣ್ಣ ನೀಮಕರ್, ಎಂ. ಬೀಮಣ್ಣ, ಖಾಜಿ ಖೈಯಿಮ್ ಪಾಷಾ, ಸಿದ್ದರಾಮಪ್ಪ ಪಾಟೀಲ್, ಬಿ. ಬಸವರಾಜ, ಶ್ರೀನಿವಾಸ ಪೊರ್ಲಾ, ಚಂದ್ರು ಗಡ್ಡಮಿದಾ ಸೇರಿದಂತೆ ನೂರಾರು ರೈತರು ಇದ್ದರು.
ಧರಣಿ ಸ್ಥಳಕ್ಕೆ ಡಿವೈಎಸ್‌ಪಿ ಪಾಂಡುರಂಗ, ಸಿಪಿಐ ಶಿವಾನಂದ ವಾಲಿಕರ್, ಪಿಎಸ್‌ಐ ಎನ್. ಜನಗೌಡ ಹಾಗೂ ಪೊಲೀಸ್ ಸಿಬ್ಬಂದಿ ಬಿಗಿ ಬಂದೋಬಸ್ತ್ ಕಲ್ಪಿಸಿದರು.