ಚಿತ್ರದುರ್ಗ: ಹೋಟೆಲ್ ಮಾಲೀಕರು ಮತ್ತು ಕಾರ್ಮಿಕರ ಮೇಲೆ ನಡೆದ ಹಲ್ಲೆ ಖಂಡಿಸಿ ನಗರದ ಹೋಟೆಲ್‌ಗಳ ಮಾಲೀಕರು ಹಾಗೂ ಕಾರ್ಮಿಕರು ಚಿತ್ರದುರ್ಗ ಹೋಟೆಲ್ ಮತ್ತು ಉಪಹಾರ ಮಂದಿರಗಳ ಸಂಘದ ನೇತೃತ್ವದಲ್ಲಿ ಸೋಮವಾರ ಕಪ್ಪುಪಟ್ಟಿ ಧರಿಸಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದರು.
ಹೋಟೆಲ್ ಮಾಲೀಕರು, ಕಾರ್ಮಿಕರಿಗೆ ಆಯಾ ಜಿಲ್ಲೆಗಳಲ್ಲಿ ಪೊಲೀಸ್ ಇಲಾಖೆ ಸೂಕ್ತ ರಕ್ಷಣೆ ನೀಡಬೇಕು. ಹೋಟೆಲ್ ಕಾರ್ಮಿಕರು, ಮಾಲೀಕರ ಮೇಲೆ ಹಲ್ಲೆ ಮಾಡುವುದೆಂದರೆ ನಿತ್ಯ ಅನ್ನ ನೀಡುವ ತಾಯಿ ಮೇಲೆ ಹಲ್ಲೆ ಮಾಡಿದಂತಾಗಲಿದೆ. ಹಲ್ಲೆಕೋರರನ್ನು ಕೂಡಲೇ ಬಂಧಿಸಬೇಕು. ಕಾನೂನಾತ್ಮಕವಾಗಿ ಸೂಕ್ತ ಶಿಕ್ಷೆಯಾಗಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಹುಬ್ಬಳ್ಳಿಯ ಕಿತ್ತೂರು ಚನ್ನಮ್ಮ ವೃತ್ತದ ಬಳಿ ಇರುವ ಹೋಟೆಲ್‌ವೊಂದಕ್ಕೆ ಜೂನ್ 6 ರಂದು ರಾತ್ರಿ ರೌಡಿಯಂತಿದ್ದ ಯುವಕರ ಗುಂಪು ಆಗಮಿಸಿ ಹೋಟೆಲ್‌ನಲ್ಲಿ ಆಹಾರ ಸೇವನೆ ಮಾಡಿದೆ. ಬಿಲ್ ನೀಡುವ ಸಂದರ್ಭದಲ್ಲಿ, ಆಹಾರ ಸರಿ ಇಲ್ಲ ಎಂದು ಜಗಳ ತೆಗೆದು ಮೂವರು ಕಾರ್ಮಿಕರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ನಾಗರಿಕ ಸಮಾಜವನ್ನು ಬೆಚ್ಚಿ ಬೀಳಿಸಿದೆ. ಹೆಲ್ಮೆಟ್, ಕುಡಿಯುವ ನೀರಿನ ಜಗ್ ನಿಂದ ಮನಬಂದಂತೆ ಹಲ್ಲೆ ಮಾಡಿರುವುದೇ ಅಲ್ಲದೆ ಮಂಜುನಾಥ ಬಾಗಲಕೋಟಿ ಎನ್ನುವ ವ್ಯಕ್ತಿ ಹೋಟೆಲ್ ಮಾಲೀಕ ನಾರಾಯಣ ಶೆಟ್ಟಿ ಹಾಗೂ ಸಿಬ್ಬಂದಿ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲು ಮಾಡಿದ್ದಾನೆ. ಹೋಟೆಲ್ ಮಾಲೀಕರು, ಕಾರ್ಮಿಕರಿಗೆ ಬೆದರಿಕೆ ಹಾಕಲಾಗುತ್ತಿದೆ. ಸಮಾಜದಲ್ಲಿ ಈ ರೀತಿಯಾದರೆ ಉದ್ಯಮ ನಡೆಸುವುದು ಹೇಗೆಂದು ಪ್ರಶ್ನಿಸಿದರು.
ದುಷ್ಕರ್ಮಿಗಳು ಹಲ್ಲೆ ಮಾಡುತ್ತಿರುವುದು ಸೇರಿದಂತೆ ಮಾಲೀಕರು ಮತ್ತು ಹೋಟೆಲ್ ಕಾರ್ಮಿಕರು ಹಾಗೂ
ಹಲ್ಲೆಕೋರರ ಮಧ್ಯೆ ನಡೆದ ಪ್ರತಿಯೊಂದು ದೃಶ್ಯ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಅದನ್ನು ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು.
ಹೋಟೆಲ್‌ಗಳಿಗೆ ನುಗ್ಗಿ ಹೋಟೆಲ್ ಮಾಲೀಕರು, ಕಾರ್ಮಿಕರ ಮೇಲೆ ಹಲ್ಲೆ ಮಾಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ತಿಂಡಿ-ಊಟದ ಹೋಟೆಲ್‌ಗಳ ಮಾಲೀಕರು, ಕಾರ್ಮಿಕರು, ಬಾರ್ ಆ್ಯಂಡ್ ರೆಸ್ಟೋರೆಂಟ್, ಸ್ವೀಟ್ ಅಂಗಡಿಗಳು, ಬೇಕರಿ ಮಾಲೀಕರು, ಕಾರ್ಮಿಕರಿಗೆ ಸೂಕ್ತ ರಕ್ಷಣೆ ನೀಡುವಂತೆ ಮನವಿ ಮಾಡಿದರು.
ಚಿತ್ರದುರ್ಗ ಹೋಟೆಲ್ ಮತ್ತು ಉಪಹಾರ ಮಂದಿರಗಳ ಸಂಘದ ಜಿಲ್ಲಾಧ್ಯಕ್ಷ ಕೆ.ಎಸ್. ಅರುಣ್ ಕುಮಾರ್, ಖಜಾಂಚಿ ಫಣಿರಾಜ್, ಶ್ರೀನಿವಾಸ್ ಉಪಾಧ್ಯ, ಶರಣ್‌ಕುಮಾರ್, ಕೆ. ಸಂಜೀವ, ಪ್ರಭುವಯ್ಯ, ವಾಸುದೇವ ರಾವ್, ಮಂಜುನಾಥ್, ಲಕ್ಷ್ಮೀನಾರಾಯಣ, ನಾಗರಾಜ್, ಬಾಬು ಬಂಗೇರ, ಐಶ್ವರ್ಯ ಅರುಣ್‌ಕುಮಾರ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.