ಮೈಸೂರು: ಕೆರೆ-ಕಟ್ಟೆಗಳು ನೀರಿನ ಮೂಲವಾಗಿದ್ದು, ಅವುಗಳನ್ನು ದೇವರಂತೆ ಕಾಣಬೇಕು ಮತ್ತು ರಕ್ಷಿಸಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಹಾಗೂ ಕರಕನಹಳ್ಳಿ ಚಿಕ್ಕಕೆರೆ ಅಭಿವೃದ್ಧಿ ಸಮಿತಿ ಸಹಭಾಗಿತ್ವದಲ್ಲಿ ನಮ್ಮೂರು ನಮ್ಮ ಕೆರೆ ಯೋಜನೆಯಡಿ ಮೈಸೂರು ತಾಲೂಕಿನ ಇಲವಾಲ ಬಳಿಯ ಕರಕನಹಳ್ಳಿ ಚಿಕ್ಕಕೆರೆಯನ್ನು ಪುನಶ್ಚೇತನ ಗೊಳಿಸಿ, ತುಂಬಿದ ಕೆರೆಗೆ ಬಾಗಿನ ಅರ್ಪಿಸಿದ ಬಳಿಕ ಮಾತನಾಡಿದರು.
ಕರಕನಹಳ್ಳಿಯಲ್ಲಿ ಸುಮಾರು 30 ವರ್ಷಗಳಿಂದ ಕೆರೆ ಪಾಳುಬಿದ್ದು, ನಶಿಸುವ ಹಂತ ತಲುಪಿತ್ತು. ಬಳಿಕ ಧರ್ಮಸ್ಥಳ ಗ್ರಾಮಾಭಿವೃದ್ಧಿ ಬಿ.ಸಿ. ಟ್ರಸ್ಟ್, ಕರಕನಹಳ್ಳಿ ಚಿಕ್ಕ ಕೆರೆ ಅಭಿವೃದ್ಧಿ ಸಮಿತಿ ಸಹಭಾಗಿತ್ವದಲ್ಲಿ ನಮ್ಮೂರ ನಮ್ಮ ಕೆರೆ ಯೋಜನೆಯಡಿ 299ನೇ ಕೆರೆಯನ್ನಾಗಿ ಅಭಿವೃದ್ಧಿಗೆ ಪಡೆದು ಮರುಜೀವ ನೀಡಲಾಗಿದೆ. 4.34 ಎಕರೆ ವಿಸ್ತೀರ್ಣವಿರುವ ಕೆರೆಯನ್ನು 5.72 ಲಕ್ಷ ರೂ. ವೆಚ್ಚದಲ್ಲಿ ಕೆರೆ ಹೂಳು ತೆಗೆಸಿ ನೀರು ನಿಲ್ಲುವಂತೆ ಮಾಡಲಾಗಿದೆ. ಇದರಿಂದ 150 ಕುಟುಂಬಗಳಿಗೆ ಅನುಕೂಲವಾಗಲಿದ್ದು, 20 ಬೋರ್
ವೆಲ್‌ಗಳಿಗೆ ಜಲಮರುಪೂರಣ ವಾಗಿದೆ. ಸಾವಿರಕ್ಕೂ ಹೆಚ್ಚು ಜಾನು ವಾರುಗಳು ಕೆರೆಯ ಪ್ರಯೋಜನ ಪಡೆದುಕೊಳ್ಳಲಿವೆ ಎಂದು ಸಂತಸ ವ್ಯಕ್ತಪಡಿಸಿದರು.