ವಿಜಯಪುರ: ನಮ್ಮ ಹಿರಿಯರು ಕಾಲಾನುಕೂಲಕ್ಕೆ ತಕ್ಕಂತೆ ತಮ್ಮ ಜಮೀನಿನಲ್ಲಿ ಬೆಳೆಯುತ್ತಿದ್ದ ಬೆಳೆಗಳನ್ನೇ ತಿನಿಸುಗಳನ್ನಾಗಿ ಬಳಸುವ ಮೂಲಕ ಆರೋಗ್ಯ ಕಾಯ್ದುಕೊಳ್ಳುತ್ತಿದ್ದರು. ಪಾರಂಪರಿಕ ಜೋಳದ ಸೀತನಿ, ಸುಲಗಾಯಿ, ಉಮ್ಮಿಗೆ, ಪುಟ್ಟಿಕಾಯಿಗಳು ಮರೆಯಾಗಿ ಅಲ್ಲಿ ಪಿಜ್ಜಾ-ಬರ್ಗರ್‌ನಂಥ ರೋಗಕಾರಕ ಸಂಸ್ಕೃತಿಗೆ ಅಂಟಿಕೊಳ್ಳುತ್ತಿದ್ದೇವೆ ಎಂದು ಪ್ರಾದೇಶಿಕ ಕೃಷಿ ವಿಸ್ತರಣಾ ಕೇಂದ್ರದ ಪ್ರಾಧ್ಯಾಪಕ ಡಾ| ಎಸ್.ಎಚ್. ಗೋಟ್ಯಾಳ ಹೇಳಿದರು.
ಗಣೇಶ ನಗರದ ಎಸ್.ಜಿ. ಗಡಗಿ ಲೇಔಟ್‌ದಲ್ಲಿ ಏರ್ಪಡಿಸಿದ್ದ ಸೀತನಿ ಮೇಳದಲ್ಲಿ ಮಾತನಾಡಿದ ಅವರು, ಸೀತನಿ ಜೋಳ ಬೆಳೆಯುವುದು ಹಾಗೂ ಅವುಗಳನ್ನು ಹದವಾಗಿ ಸುಟ್ಟು ಕಾಳುಗಳನ್ನು ತೆನೆಗಳಿಂದ ಉದುರಿಸುವುದು ಕೂಡ ಒಂದು ಅಪರೂಪ ಕೃಷಿಕರ ಕಲೆ. ಸೀತನಿ ದೇಶಿತಳಿ ಜೋಳವಾಗಿದ್ದು, ಪೌಷ್ಟಿಕ ಆಹಾರಗಳಲ್ಲಿ ಒಂದಾಗಿದೆ. ರಾವ್‌ಸಾಹೇಬ್, ಸಕ್ರಿಮುಕ್ರಿ ಮಧುರಾ ಮೂಗುತಿ, ರೆಕ್ಕೆದಗೋಲಿ ತಳಿಗಳು ಹೆಚ್ಚು ಪೌಷ್ಟಿಕತೆ ಹಾಗೂ ರೋಗ ನಿರೋಧಕ ಗುಣ ಹೊಂದಿವೆ ಎಂದು ವಿವರಿಸಿದರು.
ಸಾಹಿತಿ ಶಂಕರ ಬೈಚಬಾಳ ಮಾತನಾಡಿ, ಫೆ. 10ರವರೆಗೆ ನಡೆಯಲಿರುವ ಸೀತನಿ ಮೇಳದಲ್ಲಿ ಪಾಲ್ಗೊಳ್ಳುವ ಮೂಲಕ ಇಂದಿನ ಪೀಳಿಗೆಗೆ ನಮ್ಮ ಆಹಾರ ಸಂಸ್ಕೃತಿ ಪರಿಚಯಿಸಿ.
ವಿದೇಶಿ ಸಂಸ್ಕೃತಿಯ ಉಪಹಾರದ ತಿನಿಸುಗಳು ಬಂದು ಸಣ್ಣ ವಯಸ್ಸಿನಲ್ಲಿಯೇ ರೋಗಗಳಿಗೆ ಆಮಂತ್ರಣ ನೀಡುತ್ತಿದ್ದೇವೆ. ನಾವು ಆಹಾರ ಕೊಳ್ಳುವಂತೆ ರೋಗಗಳನ್ನು ಕೊಳ್ಳುತ್ತಿದ್ದೇವೆ. ಆದರೆ ಇದೆಲ್ಲಕ್ಕೂ ಪರಿಹಾರವೆಂಬತೆ ಸಕ್ರಿಮುಕ್ರಿ ಜೋಳದ ತಳಿಯ ಸೀತನಿ ಪೌಷ್ಟಿಕ ಆಹಾರವಾಗಬಲ್ಲವು ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಗತಿಪರ ರೈತ ಎಸ್.ಜಿ. ಗಡಗಿ ಮಾತನಾಡಿ, ಒಣಗಿದ ಸಕ್ರಿಮುಕ್ರಿ ಸೀತನಿ ಕಾಳುಗಳನ್ನು ಕುಕ್ಕರಿನ ಉಗಿಯ ಹಬೆಯಲ್ಲಿ ಬೇಯಿಸಿ ತಿಂದರೆ ಅದು ಸಿತನಿ ಕಾಳುಗಳಂತೆ ತನ್ನ ಮೂಲ ರುಚಿ ಹೊಂದಿರುತ್ತದೆ. ಕೆಲವು ಸೀತನಿಯ ಕಾಳುಗಳಿಂದ ಪೇಡೆ ತಯಾರಿಸಬಹುದು ಎಂದು ಹೇಳಿದರು.
ಮೇಳದಲ್ಲಿ ನಂದಬಸಪ್ಪ ಕಲ್ಲಹಳ್ಳಿ, ಬಸವರಾಜ ಪಡೇಕನೂರ, ಶಾಂತವೀರ ಗಡಗಿ, ಜಿ.ಎನ್. ಮದ್ದರಕಿ, ಪರಶುರಾಮ ಪಾಟೀಲ, ರಂಗನಾಥ ತೊರಪೆ ಇದ್ದರು.